ಕ್ರಿಕೆಟ್ ಮೈದಾನದಲ್ಲಿ ಪೈಪೋಟಿಗೆ ಮಾತ್ರವಲ್ಲ, ಕೆಲವೊಮ್ಮೆ ಗೌರವ ಮತ್ತು ಭಾವನಾತ್ಮಕ ಕ್ಷಣಗಳಿಗೂ ಸಾಕ್ಷಿಯಾಗುತ್ತವೆ. ಅಂತಹದೊಂದು ಘಟನೆಗೆ ಐಪಿಎಲ್ನ 23ನೇ ಪಂದ್ಯ ಸಾಕ್ಷಿಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ಮತ್ತು ಎಲ್ಎಸ್ಜಿ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ ಕಲೆಹಾಕಿದ್ದು 146 ರನ್ಗಳು ಮಾತ್ರ. ಈ ಗುರಿಯನ್ನು 15.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ಗಳ ಜಯ ಸಾಧಿಸಿದೆ.
ಈ ಪಂದ್ಯ ಮುಗಿದ ನಂತರ ಎರಡೂ ತಂಡಗಳ ಆಟಗಾರರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಲಕ್ನೋ ತಂಡದ 20 ವರ್ಷದ ಎಡಗೈ ವೇಗಿ ನಮನ್ ತಿವಾರಿ, ವಿರಾಟ್ ಕೊಹ್ಲಿ ಅವರ ಬಳಿ ಬಂದು ಅನಿರೀಕ್ಷಿತವಾಗಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಭಾರತೀಯ ಸಂಪ್ರದಾಯದ ಈ ಗೌರವದ ನಡವಳಿಕೆಯನ್ನು ಕಂಡು ವಿರಾಟ್ ಕೊಹ್ಲಿ ಒಂದು ಕ್ಷಣ ದಂಗಾದರು. ತಕ್ಷಣವೇ ನಗುಮೊಗದಿಂದ ಯುವ ಆಟಗಾರನನ್ನು ಮೇಲೆಬ್ಬಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ನಮನ್ ತಿವಾರಿ ಯಾರು?
ನಮನ್ ತಿವಾರಿ 2024ರ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಭಾರತದ ಪರ ಮಿಂಚಿದ್ದ ಪ್ರತಿಭಾನ್ವಿತ ವೇಗಿ. 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಇವರನ್ನು ಲಕ್ನೋ ತಂಡವು 1 ಕೋಟಿ ರೂ. ನೀಡಿ ಖರೀದಿಸಿದೆ. ಇದಾಗ್ಯೂ ಈ ಬಾರಿಯ ಐಪಿಎಲ್ನಲ್ಲಿ ನಮನ್ಗೆ ಕಣಕ್ಕಿಳಿಯಲು ಅವಕಾಶ ಸಿಕ್ಕಿಲ್ಲ.