Video: ರಿಯಲ್ ಹೀರೋ: 7ನೇ ಮಹಡಿಯ ಗ್ರಿಲ್ ಹತ್ತಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಪ್ರಾಣ ಉಳಿಸಿದ ಸೂರತ್ ಪೊಲೀಸ್ – Kannada News | Gujarat Constable’s Swift Action Saves Man From Tragic Leap at High Rise Building

ಸೂರತ್, ಜೂನ್ 12: ಯಾರೋ ಒಬ್ಬರು ಕಷ್ಟದಲ್ಲಿದ್ದಾರೆ ಎಂದಾಗ ತಮ್ಮ ಜೀವವನ್ನೂ ಪಣಕ್ಕಿಟ್ಟು ಕಾಪಾಡುವವರನ್ನು ದೇವದೂತರು ಎಂದು ಕರೆಯಲಾಗುತ್ತದೆ. ಹಾಗೆಯೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸ್(Police) ಅಧಿಕಾರಿಯೊಬ್ಬರು ದೇವರಂತೆ ಕಾಪಾಡಿರುವ ಘಟನೆ ಸೂರತ್​ನಲ್ಲಿ ನಡೆದಿದೆ. ಜೂನ್ 8ರಂದು ಈ ಘಟನೆ ನಡೆದಿದೆ.

ಸೂರತ್‌ನ ಲಸ್ಕಾನಾ ಪ್ರದೇಶದ ವಸತಿ ಕಟ್ಟಡವೊಂದರ 7ನೇ ಮಹಡಿಯ ಫ್ಲಾಟ್‌ನಲ್ಲಿ ವ್ಯಕ್ತಿಯೊಬ್ಬರು ತೀವ್ರ ಮಾನಸಿಕ ಒತ್ತಡದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರ ಪತ್ನಿ ಗಾಬರಿಯಿಂದ ತಕ್ಷಣವೇ ಪೊಲೀಸರ ತುರ್ತು ಸಂಖ್ಯೆ ‘ಡಯಲ್ 112’ ಗೆ ಕರೆ ಮಾಡಿ ಸಹಾಯ ಕೋರಿದ್ದರು.

ಮಾಹಿತಿ ಸಿಗುತ್ತಿದ್ದಂತೆಯೇ ಲಸ್ಕಾನಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದವು. ಆದರೆ ಅಪಾರ್ಟ್​​ಮೆಂಟ್​ನ ಮುಖ್ಯ ಬಾಗಿಲೇ ಒಳಗಿನಿಂದ ಲಾಕ್ ಆದ ಕಾರಣ ಯಾರಿಗೂ ಒಳಬರಲು ಸಾಧ್ಯವಾಗಲಿಲ್ಲ. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸ್ ಕಾನ್‌ಸ್ಟೆಬಲ್ ಶೈಲೇಶ್ ಚುಡಾಸಮಾ ಮತ್ತು ಚಾಲಕ ಕೃಪಾಲ್‌ಸಿನ್ಹ್ ಗೋಹಿಲ್ ತಕ್ಷಣವೇ ಒಂದು ಉಪಾಯ ಮಾಡಿದ್ದಾರೆ.

ಪಕ್ಕದ ಫ್ಲಾಟ್‌ನ ನಿವಾಸಿಗಳ ಸಹಾಯ ಪಡೆದ ಕಾನ್‌ಸ್ಟೆಬಲ್ ಶೈಲೇಶ್, 7ನೇ ಮಹಡಿಯ ಕಟ್ಟಡದ ಹೊರಭಾಗದಲ್ಲಿದ್ದ ಕಿರಿದಾದ ಸುರಕ್ಷತಾ ಗ್ರಿಲ್ (Safety Grill) ಅನ್ನು ಯಾವುದೇ ಸಪೋರ್ಟ್ ಇಲ್ಲದೆ ಅತ್ಯಂತ ಎಚ್ಚರಿಕೆಯಿಂದ ಹತ್ತಲಾರಂಭಿಸಿದರು.

ಮತ್ತಷ್ಟು ಓದಿ: ಹೃದಯಸ್ಪರ್ಶಿ ಘಟನೆ: ಮಳೆಯಲ್ಲಿ ರಸ್ತೆ ದಾಟಲು ಪರದಾಡುತ್ತಿದ್ದ ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಸಣ್ಣ ತಪ್ಪು ಹೆಜ್ಜೆಯೂ ಪ್ರಾಣಕ್ಕೆ ಕುತ್ತು ತರಬಹುದಾಗಿದ್ದ ಆ ಎತ್ತರದಲ್ಲಿ ಧೈರ್ಯವಾಗಿ ಸಾಗಿದ ಅವರು, ಕಿಟಕಿಯ ಮೂಲಕ ಫ್ಲಾಟ್‌ನ ಒಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ನಾನು ಒಳಗೆ ಹೋದಾಗ ಆ ವ್ಯಕ್ತಿ ವಿಷ ಸೇವಿಸಿ ವಾಂತಿ ಮಾಡುತ್ತಿದ್ದ. ತಕ್ಷಣವೇ ಆತನ ಕೈಯಲ್ಲಿದ್ದ ಉಳಿದ ವಿಷದ ವಸ್ತುವನ್ನು ಕಿತ್ತುಕೊಂಡು, ಒಳಗಿನಿಂದ ಬಾಗಿಲು ತೆರೆದು ನಮ್ಮ ತಂಡವನ್ನು ಒಳಗೆ ಕರೆಸಿಕೊಂಡೆ ಎಂದು ಕಾನ್‌ಸ್ಟೆಬಲ್ ಶೈಲೇಶ್ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ವಿಡಿಯೋ

ಮಗುವನ್ನು ಎತ್ತಿಕೊಳ್ಳುವಂತೆ ಆ ವ್ಯಕ್ತಿಯನ್ನು ತಕ್ಷಣವೇ 7ನೇ ಮಹಡಿಯಿಂದ ಕೆಳಗೆ ಕರೆತಂದ ಪೊಲೀಸರು, ಆಂಬ್ಯುಲೆನ್ಸ್‌ಗಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡದೆ ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದೃಷ್ಟವಶಾತ್, ದಾರಿಯ ಮಧ್ಯದಲ್ಲೇ ಆಂಬ್ಯುಲೆನ್ಸ್ ಎದುರಾಗಿದ್ದರಿಂದ ತಕ್ಷಣವೇ ಆತನಿಗೆ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆಯೇ, ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅವರು ಪೊಲೀಸ್ ಅಧಿಕಾರಿಗಳ ಈ ಅಪ್ರತಿಮ ಸೇವೆ ಮತ್ತು ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅಧಿಕೃತವಾಗಿ ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *