ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ
ನವದೆಹಲಿ, ಜುಲೈ 20: ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೈ ಭಾರತ್ ಅಭಿಯಾನದ ಭಾಗವಾಗಿ ಆಯೋಜನೆಯಾದ ವಿವಿವಿಪಿ ಕಾರ್ಯಕ್ರಮದಲ್ಲಿ 400ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂನ್ 4ರಿಂದ 30ರವರೆಗೆ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಈ ಮಕ್ಕಳು ಪ್ರಧಾನಿ ಜೊತೆ ಹಂಚಿಕೊಂಡರು. ಗ್ರಾಮಸ್ಥರೊಂದಿಗಿನ ಒಡನಾಟ, ಅಲ್ಲಿ ಕಂಡಿರುವ ಅಭಿವೃದ್ಧಿ ಇತ್ಯಾದಿ ಎಲ್ಲವನ್ನೂ ಅವರು ಮೋದಿ ಜೊತೆ ಹಂಚಿಕೊಂಡಿದ್ದಾರೆ.
ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ 2026 ಅನ್ನು ಎರಡು ಹಂತಗಳಲ್ಲಿ ಆಯೋಜನೆ ಮಾಡಲಾಗಿತ್ತು. ಲಡಾಖ್, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ್ನಾದ್ಯಂತ 74 ಗ್ರಾಮಗಳಲ್ಲಿ ಜೂನ್ 4ರಿಂದ 30ರವರೆಗೆ ಎರಡು ಹಂತಗಳಲ್ಲಿ ಈ ಗ್ರಾಮ ಸೇವೆಯ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಯುವಜನರು ಈ ಗ್ರಾಮಗಳ ಸಮುದಾಯದೊಂದಿಗೆ ವಾಸವಿದ್ದರು. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಸ್ವಚ್ಛತಾ ಕಾರ್ಯ, ಸಸಿ ನೆಡುವುದು, ಯುವ ಸಮ್ಮೇಳನ ನಡೆಸುವುದು, ಸಾಂಸ್ಕೃತ ವಿನಿಯಮ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿ ಕಾರ್ಯಗಳನ್ನು ಈ ಯುವಜನರು ಕೈಗೊಂಡಿದ್ದು ವಿಶೇಷ.
ಆನ್ಲೈನ್ ಕ್ವಿಜ್ ಸ್ಪರ್ಧೆ ಮೂಲಕ ಈ ಯೋಜನೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರ ಮಟ್ಟದಲ್ಲಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ 400 ಮಂದಿಯನ್ನು ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಯುವಜನರಿಗೆ ಗ್ರಾಮೀಣ ಭಾಗದ ಸಂಸ್ಕೃತಿಯ ಸಮೀಪ ದರ್ಶನವಾಗಿದೆ. ಸ್ಥಳೀಯ ಕಲಾವಿದರು, ಸಂಸ್ಥೆಗಳನ್ನು ಭೇಟಿ ಮಾಡಿ ಅನುಭವ ಕೂಡ ಪಡೆದಿದ್ದಾರೆ.
ಈ ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ ಅನ್ನು ಮೈ ಭಾರತ್ ಯೋಜನೆಯ ಭಾಗವಾಗಿ ಹಮ್ಮಿಕೊಳ್ಳಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 5:10 pm, Sun, 26 July 26
