
ಆಂಧ್ರಪ್ರದೇಶ: “ಪ್ರೀತಿಗೆ ಕಣ್ಣಿಲ್ಲ” ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಮಚಲಿಪಟ್ಟಣದ ಈ ಯುವ ಜೋಡಿ ಪ್ರೀತಿಗೆ ಎತ್ತರ, ಸೌಂದರ್ಯ, ಜಾತಿ ಮತ್ತು ಧರ್ಮ ಯಾವುದೂ ಮಿತಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ದೈಹಿಕ ವ್ಯತ್ಯಾಸಗಳಿಗಿಂತ ಮನಸ್ಸುಗಳ ಮಿಲನ ಮುಖ್ಯ ಎಂದು ಸಾರುವ ಮೂಲಕ ಈ ನವಜೋಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
9ನೇ ತರಗತಿಯಿಂದಲೇ ಶುರುವಾಗಿದ್ದ ಪ್ರೀತಿ:
ರಾಜಪೇಟೆಯ ವೇಮುಲಾ ಶಶಿ ಮತ್ತು ಶೇಖ್ ಗೌಸಿಯಾ ಅವರ ಸ್ನೇಹ ಆರಂಭವಾಗಿದ್ದು ಒಂಬತ್ತನೇ ತರಗತಿಯಲ್ಲಿ. ಶಾಲಾ ದಿನಗಳ ಆ ನಿಷ್ಕಲ್ಮಶ ಸ್ನೇಹ ಕಾಲಕ್ರಮೇಣ ಗಾಢ ಪ್ರೇಮವಾಗಿ ಬದಲಾಯಿತು. ಶಶಿ ಸದ್ಯ ಜಿಲ್ಲಾ ನ್ಯಾಯಾಲಯದಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರೆ, ಗೌಸಿಯಾ ಮೆಡಿಕಲ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶಶಿ ಅವರ ದೈಹಿಕ ಎತ್ತರ ಕಡಿಮೆ ಇದ್ದರೂ (ಕುಬ್ಜ), ಗೌಸಿಯಾ ಅವರ ವ್ಯಕ್ತಿತ್ವ ಮತ್ತು ಗುಣವನ್ನು ಕಂಡು ಮನಸೋತಿದ್ದರು.
ಧರ್ಮದ ಗೋಡೆ, ಹಿರಿಯರ ವಿರೋಧ:
ಇವರಿಬ್ಬರ ಪ್ರೀತಿಯ ಹಾದಿ ಸುಗಮವಾಗಿರಲಿಲ್ಲ. ಶಶಿ ಹಿಂದೂ ಧರ್ಮಕ್ಕೆ ಸೇರಿದವರಾದರೆ, ಗೌಸಿಯಾ ಮುಸ್ಲಿಂ ಸಮುದಾಯದವರು. ಇಬ್ಬರ ಧರ್ಮ ಬೇರೆ ಎಂಬ ಕಾರಣ ಒಂದು ಕಡೆಯಾದರೆ, ಯುವಕನ ಎತ್ತರ ಕಡಿಮೆ ಎಂಬುದು ಯುವತಿಯ ಮನೆಯವರ ತೀವ್ರ ವಿರೋಧಕ್ಕೆ ಕಾರಣವಾಯಿತು. ಕುಟುಂಬಸ್ಥರು ಮತ್ತು ಸಂಬಂಧಿಕರು ಇಬ್ಬರನ್ನೂ ಬೇರ್ಪಡಿಸಲು ಹರಸಾಹಸ ಪಟ್ಟಿದ್ದರು.
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!
ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ:
ಮನೆಯವರ ಒತ್ತಡ ಹೆಚ್ಚಾದಾಗ, ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಈ ಜೋಡಿ ಚರ್ಚ್ನಲ್ಲಿ ವಿವಾಹವಾದರು. ನಂತರ ರಕ್ಷಣೆ ಕೋರಿ ಇನುಕುದುರುಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಪೊಲೀಸರು ಎರಡೂ ಕುಟುಂಬದ ಹಿರಿಯರನ್ನು ಕರೆಸಿ ಕೌನ್ಸೆಲಿಂಗ್ ನಡೆಸಿದರು. ಕುಟುಂಬದವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಗೌಸಿಯಾ ಮಾತ್ರ “ನಾನು ನನ್ನ ಪತಿಯೊಂದಿಗೇ ಬಾಳುತ್ತೇನೆ” ಎಂದು ದೃಢವಾಗಿ ನಿರ್ಧರಿಸಿ ಎಲ್ಲರ ಅಚ್ಚರಿಗೆ ಕಾರಣರಾದರು. ದೈಹಿಕ ನ್ಯೂನತೆಯನ್ನು ಬದಿಗೊತ್ತಿ, ಪ್ರೀತಿಸಿದ ವ್ಯಕ್ತಿಯ ಜೀವನಕ್ಕೆ ಆಸರೆಯಾದ ಗೌಸಿಯಾ ಅವರ ಧೈರ್ಯಕ್ಕೆ ಈಗ ನೆಟ್ಟಿಗರು “ಇದೇ ನಿಜವಾದ ಪ್ರೀತಿ” ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ