Welcome To The Jungle: 2000 ಕೋಟಿ ರೂ. ನಕಲಿ ಸಿನಿಮಾ; ಫ್ಲಾಪ್ ನಟ ಅಕ್ಷಯ್ ಕುಮಾರ್ ಪರಿಸ್ಥಿತಿ ಇದು – Kannada News

ಬಾಲಿವುಡ್ ಅಂಗಳದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ವೆಲ್ಕಮ್’ ಸರಣಿಯ ಮೂರನೇ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ (Welcome To The Jungle) ಸಿನಿಮಾದ ಅದ್ದೂರಿ ಟ್ರೇಲರ್ ಗುರುವಾರ (ಜೂನ್ 11) ಬಿಡುಗಡೆಯಾಗಿದೆ. 4 ನಿಮಿಷ 10 ಸೆಕೆಂಡ್‌ಗಳ ಈ ಸುದೀರ್ಘ ಟ್ರೇಲರ್ ಪ್ರೇಕ್ಷಕರಿಗೆ ನಗುವಿನ ರಸದೌತಣ ನೀಡುತ್ತಿದ್ದು, ಚಿತ್ರದ ಕ್ರೇಜಿ ಕಥಾಹಂದರವನ್ನು ಬಿಚ್ಚಿಟ್ಟಿದೆ. ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ಅಹಮದ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 2000 ಕೋಟಿ ರೂಪಾಯಿ ಬಜೆಟ್​ನ ನಕಲಿ ಸಿನಿಮಾದಲ್ಲಿ ನಟಿಸುವ ಫ್ಲಾಪ್ ಹೀರೋ ಪಾತ್ರವನ್ನು ಅಕ್ಷಯ್ ಕುಮಾರ್ (Akshay Kumar) ಅವರು ಈ ಸಿನಿಮಾದಲ್ಲಿ ಮಾಡಿದ್ದಾರೆ.

‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದಲ್ಲಿ ಬಾಲಿವುಡ್‌ನ ಘಟಾನುಘಟಿ ಕಲಾವಿದರ ದಂಡೇ ಇದೆ. ಅಕ್ಷಯ್ ಕುಮಾರ್ ಜೊತೆಗೆ ಸುನಿಲ್ ಶೆಟ್ಟಿ, ಅರ್ಷದ್ ವಾರ್ಸಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ರವೀನಾ ಟಂಡನ್, ಲಾರಾ ದತ್ತಾ, ಜಾಕಿ ಶ್ರಾಫ್, ಪರೇಶ್ ರಾವಲ್, ಜಾನಿ ಲಿವರ್, ರಾಜ್‌ಪಾಲ್ ಯಾದವ್, ಕೃಷ್ಣ ಅಭಿಷೇಕ್, ಕಿಕು ಶಾರದಾ ಹಾಗೂ ಗಾಯಕ ದಲೇರ್ ಮೆಹಂದಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್‌ನಲ್ಲಿ ತೋರಿಸಿರುವಂತೆ, ಅಕ್ಷಯ್ ಕುಮಾರ್ ಅವರು ಸತತ ಸೋಲುಗಳಿಂದ ಕಂಗಾಲಾಗಿರುವ ಒಬ್ಬ ಫ್ಲಾಪ್ ನಟನ ಪಾತ್ರದಲ್ಲಿದ್ದಾರೆ. ಹಿಟ್ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ನಟಿಸುವ ಮೂಲಕ ತನ್ನ ವೃತ್ತಿಜೀವನವನ್ನು ಮತ್ತೆ ಮರುಸ್ಥಾಪಿಸಲು ಅವರು ಹರಸಾಹಸ ಪಡುತ್ತಾರೆ. ಇದೇ ವೇಳೆ ಚಿತ್ರದ ಶೂಟಿಂಗ್‌ಗಾಗಿ ಇಡೀ ಚಿತ್ರತಂಡ ಗಡಿ ಭಾಗದಲ್ಲಿರುವ ಒಂದು ಹಳ್ಳಿಗೆ ತೆರಳುತ್ತದೆ.

‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದ ಟ್ರೇಲರ್:

ಆದರೆ ಅಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗುತ್ತದೆ. ಹಳ್ಳಿಯ ಜನರು ಈ ಸಿನಿಮಾ ತಂಡವನ್ನು ನಿಜವಾದ ಭಾರತೀಯ ಸೇನೆಯ ಸೈನಿಕರು ಎಂದು ತಪ್ಪಾಗಿ ಭಾವಿಸುತ್ತಾರೆ. ಅಲ್ಲದೆ, ಕ್ರೂರ ವಿಲನ್ ಜಾಕಿ ಶ್ರಾಫ್ ಗ್ಯಾಂಗ್‌ನಿಂದ ತಮ್ಮನ್ನು ರಕ್ಷಿಸುವಂತೆ ಇವರ ಬಳಿ ಬೇಡಿಕೊಳ್ಳುತ್ತಾರೆ. ಹಳ್ಳಿಯ ನಿವಾಸಿಯಾಗಿರುವ ರವೀನಾ ಟಂಡನ್ ಅವರು, ‘ನಮ್ಮನ್ನು ರಕ್ಷಿಸಲು ಬರಲು ಆರ್ಮಿಗೆ 20 ವರ್ಷ ಬೇಕಿತ್ತಾ?’ ಎಂದು ಅಕ್ಷಯ್ ಕುಮಾರ್ ಕಾಲು ಎಳೆಯುವ ದೃಶ್ಯ ನಗುವಿನ ಅಲೆ ಎಬ್ಬಿಸುತ್ತದೆ. ಈ ಇಡೀ ‘ನಕಲಿ ಸಿನಿಮಾ ಶೂಟಿಂಗ್’ ಪ್ರಕ್ರಿಯೆಯನ್ನು ಬರೋಬ್ಬರಿ 2,000 ಕೋಟಿ ರೂ. ಬಜೆಟ್‌ನಲ್ಲಿ ಮಾಡಲಾಗುತ್ತದೆ ಎಂಬುದು ಮತ್ತೊಂದು ಫನ್.

ಈ ಸಿನಿಮಾಗೆ ‘ವೆಲ್​ಕಮ್’ ಸಿನಿಮಾದ ಹಳೆಯ ಲಿಂಕ್ ಇದೆ. ಈ ಹಿಂದಿನ ‘ವೆಲ್ಕಮ್’ ಸಿನಿಮಾಗಳಲ್ಲಿ ನಾನಾ ಪಾಟೇಕರ್ ಮಾಡಿದ್ದ ಉದಯ್ ಭಾಯ್ ಪಾತ್ರದ ನೆನಪಿಗೆ ಇಲ್ಲಿ ಸುನಿಲ್ ಶೆಟ್ಟಿಯನ್ನು ‘ಉದಯ್ ಕಾ ಭಾಯ್’ ಎಂದು ಹಾಗೂ ಅನಿಲ್ ಕಪೂರ್ ಅವರ ಮಜ್ನು ಭಾಯ್ ಪಾತ್ರದ ರೆಫರೆನ್ಸ್ ಆಗಿ ಅರ್ಷದ್ ವಾರ್ಸಿಯನ್ನು ‘ಮಜ್ನು ಕಾ ಭಾಯ್’ ಎಂದು ಪರಿಚಯಿಸಲಾಗಿದೆ.

ಇದನ್ನೂ ಓದಿ: 1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಒಂದೆಡೆ ಕಾಮಿಡಿ ಪಂಚ್‌ಲೈನ್‌ಗಳು ಮತ್ತು ಕನ್ಫ್ಯೂಷನ್ ಡ್ರಾಮಾಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರೆ, ಟ್ರೇಲರ್‌ನ ಕೊನೆಯಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ತಂಡ ನಿಜವಾಗಿಯೂ ಗ್ರಾಮಸ್ಥರ ಪರವಾಗಿ ಹೋರಾಡಲು ನಿರ್ಧರಿಸುತ್ತದೆ. ತದನಂತರ ಹೈ-ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌ಗಳು ಹಾಗೂ ಭೀಕರ ಗುಂಡಿನ ಚಕಮಕಿಗಳು ಆರಂಭವಾಗುತ್ತವೆ. ಆ ಮೂಲಕ ಸಿನಿಮಾದ ಮೇಲೆ ಕೌತುಕ ಮೂಡಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *