ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ನಾಲ್ಕನೇ ಸೀಸನ್ ಜನವರಿ 9 ರಿಂದ ಪ್ರಾರಂಭವಾಗುತ್ತಿದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಹರ್ಮನ್‌ಪ್ರೀತ್ ಕೌರ್ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದರೆ, ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಮುಂಬೈ ಮತ್ತು ಆರ್‌ಸಿಬಿ ಎರಡೂ ಚಾಂಪಿಯನ್ ತಂಡಗಳಾಗಿದ್ದು, ಮುಂಬೈ 2 ಬಾರಿ ಟ್ರೋಫಿ ಗೆದ್ದಿದ್ದರೆ, ಆರ್‌ಸಿಬಿ 1 ಬಾರಿ ಗೆದ್ದಿದೆ. ಇನ್ನು ಈ ಉದ್ಘಾಟನಾ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಮೇಲೆ ಹೇಳಿದಂತೆ 2026 ರ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಮುಂಬೈನಲ್ಲಿ ಇಬ್ಬನಿ ಪ್ರಮುಖ ಪಾತ್ರವಹಿಸುವುದರಿಂದ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲಕರವಾಗಿರುತ್ತದೆ. ಹೀಗಾಗಿ ಮೊದಲು ಬೌಲಿಂಗ್ ಮಾಡುವುದಾಗಿ ಮಂಧಾನ ಹೇಳಿದರು. ಇತ್ತ ಹರ್ಮನ್‌ಪ್ರೀತ್ ಕೂಡ ಟಾಸ್ ಗೆದ್ದಿದ್ದರೆ ತಾವು ಕೂಡ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದರು. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಆರ್‌ಸಿಬಿ ತಂಡದ ಪರ ಆರು ಆಟಗಾರ್ತಿಯರು ಪದಾರ್ಪಣೆ ಮಾಡುತ್ತಿದ್ದಾರೆ ಎಂದರು.
