ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಅಲಂಕರಿಸಿತು. ಡೆಲ್ಲಿ ನೀಡಿದ 203 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್ಸಿಬಿ ಕೊನೆಯ ಓವರ್ನಲ್ಲಿ ಗೆಲುವು ಸಾಧಿಸಿತು.
ಕೊನೆಕೊನೆಯಲ್ಲಿ ಜಾರ್ಜಿಯಾ ವಾಲ್, ರಿಚಾ ಘೋಷ್ ಹಾಗೂ ಸ್ಮೃತಿ ಮಂಧಾನ ವಿಕೆಟ್ ಕಳೆದುಕೊಂಡು ಆರ್ಸಿಬಿ ಕೊಂಚ ಒತ್ತಡಕ್ಕೆ ಸಿಲುಕಿತ್ತು. ಅಲ್ಲದೆ ಸ್ಮೃತಿ ವಿಕೆಟ್ ಬಳಿಕ ಬಂದ ರಾಧಾ ಯಾದವ್ ಕೂಡ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಡೆಲ್ಲಿ ತಂಡ ಕ್ಯಾಚ್ ಕೈಚೆಲ್ಲಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಾಧಾ 20 ನೇ ಓವರ್ನಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ರಾಧಾ ಎರಡನೇ ಬೌಂಡರಿ ಬಾರಿಸುತ್ತಿದ್ದಂತೆ ಡಗೌಟ್ನಲ್ಲಿ ಕುಳಿತಿದ್ದ ಇಡೀ ತಂಡ ಗೆಲುವಿನ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿತು. ಒಬ್ಬರನೊಬ್ಬರು ತಬ್ಬಿಕೊಂಡು ಸಂಭ್ರಮಿಸಿದರು. ಇತ್ತ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದ ರಾಧಾ ಯಾದವ್, ನಾನ್ ಸ್ಟ್ರೈಕ್ನಲ್ಲಿದ್ದ ನಡಿನ್ ಡಿ ಕ್ಲರ್ಕ್ ಅವರನ್ನು ತಬ್ಬಿಕೊಂಡು ಗೆಲುವನ್ನು ಆಚರಿಸಿದರು. ಆ ಬಳಿಕ ಇಡೀ ತಂಡ ಮೈದಾನದಲ್ಲಿ ನೆರೆದು ಗೆಲುವನ್ನು ಸಂಭ್ರಮಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
