ಅನುಕೂಲಕರ ಟ್ಯಾರಿಫ್ ದರ ಇಲ್ಲದೇ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ವಾಣಿಜ್ಯ ಸಚಿವ ಪಿಯೂಷ್ ಗೋಯಲ್ – Kannada News | Piyush Goyal says, no trade deal with USA until having tariff advantage

ನವದೆಹಲಿ, ಜೂನ್ 25: ಭಾರತದ ರಫ್ತಿಗೆ ಹಿನ್ನಡೆಯಾಗುವಂತಹ ರೀತಿಯ ವ್ಯಾಪಾರ ಒಪ್ಪಂದವನ್ನು ಅಮೆರಿಕದೊಂದಿಗೆ ಮಾಡಿಕೊಳ್ಳುವುದಿಲ್ಲ ಎಂದು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ (Piyush Goyal) ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದ ರಫ್ತು ಪ್ರತಿಸ್ಪರ್ಧಿ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅನುಕೂಲಕರ ಸುಂಕದ ವ್ಯವಸ್ಥೆ (Comparative Tariff Advantage) ಖಾತ್ರಿಯಾಗುವವರೆಗೂ ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿಸುವುದಿಲ್ಲ ಎಂದು ಕೈಗಾರಿಕಾ ಸಚಿವರೂ ಆದ ಗೋಯಲ್ ಹೇಳಿದ್ದಾರೆ. ದೆಹಲಿಯಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಜೇಮಿಸನ್ ಗ್ರೀರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಈ ಮಹತ್ವದ ಹೇಳಿಕೆ ನೀಡಿದ್ದಾರೆ.

ಭಾರತದ ಕಠಿಣ ನಿಲುವು

“ಪ್ರತಿಸ್ಪರ್ಧಿ ದೇಶಗಳಿಗಿಂತ ಭಾರತಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಅನುಕೂಲಕರ ಸುಂಕದ ಸೌಲಭ್ಯ ಸಿಗುವ ಚೌಕಟ್ಟು ಅಂತಿಮವಾಗುವವರೆಗೆ ನಾವು ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರಲು ಸಾಧ್ಯವಿಲ್ಲ,” ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ. ವಿಯೆಟ್ನಾಂ, ಥೈಲ್ಯಾಂಡ್, ಫಿಲಿಪೈನ್ಸ್, ಚೀನಾ, ಮಲೇಷ್ಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತಹ ಪ್ರತಿಸ್ಪರ್ಧಿ ಉತ್ಪಾದನಾ ದೇಶಗಳಿಗಿಂತ ಭಾರತೀಯ ರಫ್ತುಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆ ಮತ್ತು ಸುಂಕ ವಿನಾಯಿತಿ ಸಿಗಬೇಕು ಎಂಬುದು ಭಾರತದ ಪ್ರಮುಖ ಬೇಡಿಕೆಯಾಗಿದೆ.

ಅಂತಿಮ ಹಂತದಲ್ಲಿ ಭಾರತ ಅಮೆರಿಕ ವ್ಯಾಪಾರ ಒಪ್ಪಂದ

ಇದೇ ವೇಳೆ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ. ಫೆಬ್ರವರಿ 6 ರಂದೇ ಉಭಯ ದೇಶಗಳು ಒಪ್ಪಂದದ ಸ್ಥೂಲ ರೂಪರೇಖೆಗಳಿಗೆ ಸಮ್ಮತಿಸಿದ್ದು, ಅಂದಿನಿಂದ ಉಭಯ ದೇಶಗಳ ಅಧಿಕಾರಿಗಳ ತಂಡಗಳು ಇದರ ಸೂಕ್ಷ್ಮ ತಾಂತ್ರಿಕ ವಿವರಗಳ ಮೇಲೆ ಕೆಲಸ ಮಾಡುತ್ತಿವೆ. ವಾಷಿಂಗ್ಟನ್ ಯಾವ ಕಾನೂನು ಮತ್ತು ನೀತಿ ವ್ಯವಸ್ಥೆಯ ಮೂಲಕ ಭಾರತಕ್ಕೆ ಈ ಸ್ಪರ್ಧಾತ್ಮಕ ಸುಂಕದ ಸೌಲಭ್ಯವನ್ನು ನೀಡಬಹುದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: ಅಮೆರಿಕನ್ ಡಾಲರ್ ಎದುರು ರುಪಾಯಿ 16 ಪೈಸೆ ಚೇತರಿಕೆ; 94.39 ಮಟ್ಟದಲ್ಲಿ ಕೊನೆಗೊಂಡ ಭಾರತೀಯ ಕರೆನ್ಸಿ ಮೌಲ್ಯ

ಅಮೆರಿಕದ ತಾತ್ಕಾಲಿಕ ಶೇಕಡಾ 10 ರಷ್ಟು ಸುಂಕದ ವ್ಯವಸ್ಥೆಯು ಜುಲೈ 24 ರಂದು ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ಉಭಯ ದೇಶಗಳು ಈ ಮಧ್ಯಂತರ ವ್ಯಾಪಾರ ಒಪ್ಪಂದವನ್ನು (Interim Trade Pact) ಪೂರ್ಣಗೊಳಿಸಲು ತರಾತುರಿಯಲ್ಲಿ ಕೆಲಸ ಮಾಡುತ್ತಿವೆ.

ಉನ್ನತ ಮಟ್ಟದ ಪರಿಶೀಲನಾ ಸಭೆ

ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಮತ್ತು ಪಿಯೂಷ್ ಗೋಯಲ್ ನಡುವೆ ನಡೆದ ಸಭೆಯಲ್ಲಿ ಪ್ರಸ್ತಾವಿತ ಒಪ್ಪಂದದ ಮೊದಲ ಹಂತದ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಈ ಒಪ್ಪಂದವು ಡಿಜಿಟಲ್ ವ್ಯಾಪಾರ, ಮಾರುಕಟ್ಟೆ ಪ್ರವೇಶ, ಬಲಿಷ್ಠ ಪೂರೈಕೆ ಜಾಲ (Supply Chains), ಸುಂಕ ರಹಿತ ಅಡೆತಡೆಗಳ ಕಡಿತ ಮತ್ತು ಆಯಕಟ್ಟಿನ ವಲಯಗಳಲ್ಲಿನ ಸಹಕಾರವನ್ನು ಒಳಗೊಂಡಿರುತ್ತದೆ. ಈ ಒಪ್ಪಂದವು ಉಭಯ ದೇಶಗಳ ಉದ್ಯಮಿಗಳು, ರೈತರು ಮತ್ತು ಗ್ರಾಹಕರಿಗೆ ಸಮಾನ ಪ್ರಯೋಜನ ನೀಡುವಂತಿರಬೇಕು ಎಂದು ಇಬ್ಬರೂ ಸಚಿವರು ಪುನರುಚ್ಚರಿಸಿದ್ದಾರೆ.

ಅಮೆರಿಕಕ್ಕೆ ಭಾರತ ನೀಡುತ್ತಿರುವ ಭಾರಿ ಆಫರ್

ವ್ಯಾಪಾರ ಒಪ್ಪಂದದಲ್ಲಿ ಅಮೆರಿಕಕ್ಕೆ ತೃಪ್ತಿಯಾಗುವ ರೀತಿಯಲ್ಲಿ ಭಾರತವು ದೊಡ್ಡ ಆಫರ್ ಅನ್ನು ಮುಂದಿಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ ಉತ್ಪನ್ನಗಳು (Energy products), ವಿಮಾನಗಳು ಮತ್ತು ಅದರ ಬಿಡಿಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕೋಕಿಂಗ್ ಕೋಲ್ (Coking Coal) ಅನ್ನು ಖರೀದಿಸಲು ಭಾರತ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಬಿಟ್​ಕಾಯಿನ್ ಭಾರಿ ಕುಸಿತ; ಎಂಟು ತಿಂಗಳಲ್ಲಿ ಅರ್ಧದಷ್ಟು ಮೌಲ್ಯ ನಷ್ಟ; ಕ್ರಿಪ್ಟೋ ಬಜಾರಿನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣಗಳೇನು?

2025-26ರ ಹಣಕಾಸು ವರ್ಷದಲ್ಲಿ ಅಮೆರಿಕವು ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿ ಮುಂದುವರಿದಿದೆ. ಹೆಚ್ಚಿನ ಸುಂಕಗಳ ಹೊರತಾಗಿಯೂ, ಕಳೆದ ಹಣಕಾಸು ವರ್ಷದಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಶೇ. 0.92 ರಷ್ಟು ಹೆಚ್ಚಳವಾಗಿ 87.3 ಬಿಲಿಯನ್ ಡಾಲರ್‌ಗೆ ತಲುಪಿದೆ. ಅದೇ ಸಮಯದಲ್ಲಿ, ಅಮೆರಿಕದಿಂದ ಭಾರತದ ಆಮದು ಶೇ. 15.95 ರಷ್ಟು ಏರಿಕೆಯಾಗಿ 52.9 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದರಿಂದಾಗಿ ಭಾರತದ ವ್ಯಾಪಾರ ಬಾಕಿ (Trade Surplus) ಹಿಂದಿನ ವರ್ಷದ 40.89 ಬಿಲಿಯನ್ ಡಾಲರ್‌ನಿಂದ 34.4 ಬಿಲಿಯನ್ ಡಾಲರ್‌ಗೆ ಕುಸಿದಿದೆ ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *