ಅನುದಾನವಿಲ್ಲ ಕೊರತೆ: ಬೆಂಗಳೂರಲ್ಲಿ ಮತ್ತೊಂದು ಕಾನೂನು ವಿವಿಗೆ ಸರ್ಕಾರ ಚಿಂತನೆ; ಉತ್ತರ ಕರ್ನಾಟಕದ ಜನ ಆಕ್ರೋಶ – Kannada News | Lack of Funds: Karnataka Government Plans Another Law University in Bengaluru, North Karnataka Faces Outrage

ಹುಬ್ಬಳ್ಳಿ ಕಾನೂನು ವಿವಿImage Credit source: tv9 kannada

ಹುಬ್ಬಳ್ಳಿ, ಆಗಸ್ಟ್​ 15: ರಾಜ್ಯದ ಏಕೈಕ ಕಾನೂನು ವಿಶ್ವವಿದ್ಯಾಲಯ (Law University) ಇರುವುದು ಹುಬ್ಬಳ್ಳಿಯಲ್ಲಿ. 17 ವರ್ಷಗಳ ಹಿಂದೆ ರಾಜ್ಯದ ಎಲ್ಲಾ ಕಾನೂನು ಕಾಲೇಜುಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾನೂನು ವಿವಿಯನ್ನು ಆರಂಭಿಸಿತ್ತು. ಹುಬ್ಬಳ್ಳಿಯಲ್ಲಿರುವ (Hubballi)  ಕಾನೂನು ವಿವಿ ಅನುದಾನ ಕೊರತೆಯಿಂದ ಬಳಲುತ್ತಿದೆ. ಇರುವ ವಿವಿಯವನ್ನು ಸದೃಢ ಮಾಡುವ ಬದಲು ಸರ್ಕಾರ ಮತ್ತೊಂದು ಕಾನೂನು ವಿವಿಯನ್ನು ಬೆಂಗಳೂರು ಭಾಗದಲ್ಲಿ ಆರಂಭಿಸಲು ಮುಂದಾಗಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

2009ರಲ್ಲಿ ಕಾನೂನು ವಿಶ್ವವಿದ್ಯಾಲಯ ಆರಂಭ

ರಾಜ್ಯದಲ್ಲಿ ಈ ಮೊದಲು ಕಾನೂನು ಕಾಲೇಜುಗಳು ವಿವಿಧ ವಿವಿ ವ್ಯಾಪ್ತಿಯಲ್ಲಿದ್ದವು. ಆದರೆ ಎಲ್ಲಾ ಕಾನೂನು ಕಾಲೇಜುಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಮತ್ತು ಗುಣಮಟ್ಟದ ಕಾನೂನು ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ 2009 ರಲ್ಲಿ ಕಾನೂನು ವಿಶ್ವವಿದ್ಯಾಲಯವನ್ನು ಆರಂಭಿಸಿತು. ಮೊದಲ ಕಾನೂನು ಆರಂಭಿಸಲು ರಾಜ್ಯದ ಅನೇಕ ಕಡೆ ಪ್ರಸ್ತಾವವಿದ್ರು ಕೂಡ ಎಲ್ಲರಿಗೂ ಅನಕೂಲವಾಗಲಿ ಅನ್ನೋ ಉದ್ದೇಶದಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯ ನವನಗರದಲ್ಲಿ ಮೊದಲ ವಿವಿ ಆರಂಭವಾಯ್ತು. 54 ಎಕರೆ ವಿಸ್ತೀರ್ಣದಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಇದ್ದು, ಮೂರು ವರ್ಷದ ಎಲ್​​ಎಲ್​ಬಿ, ಐದು ವರ್ಷದ ಎಲ್ ಎಲ್ ಬಿ, ಬಿಕಾಂ ಎಲ್ ಎಲ್ ಬಿ, ಬಿಬಿಎ ಎಲ್ ಎಲ್ ಬಿ, ಎಲ್ ಎಲ್ ಎಂ ಸೇರಿದಂತೆ ಅನೇಕ ಕಾನೂನು ಕೋರ್ಸ್ ಗಳನ್ನು ಕಲಿಸಲಾಗುತ್ತಿದೆ.

ಇದನ್ನೂ ಓದಿ: Free AI Training: ಐಐಟಿ ಧಾರವಾಡದಲ್ಲಿ ಉಚಿತ AI ತರಬೇತಿ; ಉಚಿತ ವಸತಿ,ಊಟದ ಜೊತೆಗೆ ಮಾಸಿಕ 1,000 ರೂ. ಸ್ಟೈಫಂಡ್!

ಇನ್ನು ವಿವಿ ವ್ಯಾಪ್ತಿಯಲ್ಲಿ ರಾಜ್ಯದ 174 ಕಾನೂನು ಕಾಲೇಜುಗಳು ಅಪಿಲೇಷನ್ ಹೊಂದಿವೆ. ಹುಬ್ಬಳ್ಳಿಯಲ್ಲಿ ಕಾನೂನು ವಿವಿ ಆರಂಭವಾಗಿ 17 ವರ್ಷ ಕಳೆದರೂ ಕೂಡ ಕಾನೂನು ವಿವಿಗೆ ಆರ್ಥಿಕ ಸಂಕಷ್ಟ ತಲೆದೂರಿದೆ. ಕಾನೂನು ವಿವಿಯಲ್ಲಿ ಅಭಿವೃದ್ಧಿ ಮಾಡಬೇಕಾದರೆ ಅನುದಾನ ಬೇಕು. ಅದಕ್ಕಾಗಿ ಕಾನೂನು ವಿವಿ ಕುಲಪತಿ ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ ಬೇಡಿಕೆ ಇಟ್ಟು ಎರಡು ವರ್ಷದ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಇಲ್ಲಿವರಗೆ ಅನುದಾನ ಬಂದಿಲ್ಲ. ಖಾಯಂ ಬೋಧಕ ಸಿಬ್ಬಂದಿ ಕೊರತೆಯಿದೆ. ಮೂಲಭೂತ ಸೌಲಭ್ಯಗಳು ಕ್ಯಾಂಪಸ್​​ನಲ್ಲಿಯೇ ಇಲ್ಲ. ಆದರೆ ಇರುವ ವಿವಿಯವನ್ನು ಮೊದಲು ಸದೃಢ ಮಾಡಬೇಕಿದ್ದು, ರಾಜ್ಯ ಸರ್ಕಾರ ಇದೀಗ ಇದೇ ವಿವಿಯನ್ನು ಒಡೆಯುವ ಕೆಲಸಕ್ಕೆ ಯತ್ನಿಸುತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ ಕಾನೂನು ವಿವಿ ಕುಲಸಚಿವರಿಗೆ ಪತ್ರ

ಬೆಂಗಳೂರು, ಇಲ್ಲವೇ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮತ್ತೊಂದು ಕಾನೂನು ವಿವಿಯನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಜುಲೈ 31 ರಂದು ರಾಜ್ಯ ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧೀನ ಕಾರ್ಯದರ್ಶಿ, ಹುಬ್ಬಳ್ಳಿ ಕಾನೂನು ವಿವಿ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ದಕ್ಷಿಣ ಕಾನೂನು ವಿಶ್ವವಿದ್ಯಾಲಯವನ್ನು ಬೆಂಗಳೂರು ನಗರ ಇಲ್ಲವೇ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪ್ರಾರಂಭಿಸುವ ಪ್ರಸ್ತಾಪವಿದ್ದು, ಅದನ್ನು ಪರಿಶೀಲಿಸಲು ಮಾಹಿತಿ ಸಲ್ಲಿಸುವಂತೆ ಕೇಳಿದೆ. ಅದರಲ್ಲಿ ವಿವಿ ಸ್ಥಾಪನೆಯಿಂದ ಉಂಟಾಗುವ ಆರ್ಥಿಕ ಹೊರೆ, ಅವಶ್ಯವಿರುವ ಸಿಬ್ಬಂದಿ, ಅಧಿಕಾರಿಗಳ ವಿವರ, ವಿವಿ ಸ್ಥಾಪನೆಗೆ ಕನಿಷ್ಟ ಎಷ್ಟು ಜಮೀನು ಅವಶ್ಯಕತೆ ಇದೆ, ಮೂಲಭೂತ ಸೌಕರ್ಯಗಳ ಮಾಹಿತಿ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಸರ್ಕಾರ ಕಾನೂನು ವಿವಿಗೆ, ಆಂತರಿಕ ಹಣಕಾಸಿನಿಂದಲೇ ಅಭಿವೃದ್ಧಿ ಮಾಡಿ ಎಂದು ಹೇಳುತ್ತಿದೆ‌. ಆದರೆ ವಿವಿಗಳಿಗ ಆಂತರಿಕ ಹಣಕಾಸು ಬರಬೇಕಾದರೆ ಅದು‌ ವಿದ್ಯಾರ್ಥಿಗಳ ಅಡ್ಮಿಷನ್​ದಿಂದ ಮಾತ್ರ ಸಾಧ್ಯ. ಒಂದು ಕಡೆ ವಿದ್ಯಾರ್ಥಿಗಳಿಗೆ ಫೀಸ್ ಹೊರೆಯಾಗದಂತೆ ನೋಡಿಕೊಳ್ಳಬೇಕು. ಮತ್ತೊಂದಡೆ ವಿವಿ ಅಭಿವೃದ್ಧಿ ಮಾಡಬೇಕಾದ ಅನಿವಾರ್ಯತೆಯಿದೆ. ಇನ್ನು ಸದ್ಯ ಆದಾಯ ಮತ್ತು ಲೆಕ್ಕಕ್ಕೆ ಸರಿಹೋಗುತ್ತಿದ್ದರು, ಕೂಡ ಕ್ಯಾಂಪಸ್​ನಲ್ಲಿ ಹಾಸ್ಟೆಲ್​​ಗಳ ನಿರ್ಮಾಣ, ಆಡಳಿತಾತ್ಮಕ ಭವನ ನಿರ್ಮಾಣಕ್ಕೆ ಹಣ ಇಲ್ಲದಂತಾಗಿದೆ. ಇನ್ನು ವಿವಿಯಿದ್ದರು ಕೂಡ, ಒಂದು ಸ್ವಂತ ಸಭಾಂಗಣ ಕೂಡ ಇಲ್ಲ. ಹೀಗಾಗಿ ಕಾನೂನು ವಿವಿ ತನ್ನ ಘಟಿಕೋತ್ಸವವನ್ನು ಕೃಷಿ ವಿವಿಯಲ್ಲಿ ಮಾಡುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅನುದಾನ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಇರುವ ವಿವಿಯನ್ನು ಸದೃಢ ಮಾಡುವ ಬದಲು ಮತ್ತೊಂದು ವಿವಿ ಆರಂಭಿಸಿದರೆ ಇರುವ ವಿವಿಗೆ ದೊಡ್ಡ ಪೆಟ್ಟು ಬೀಳುತ್ತದೆ ಅಂತಿದ್ದಾರೆ ಈ ಭಾಗದ ಜನರು.

ಮತ್ತೊಂದು ಕಾನೂನು ಕಾಲೇಜು ಆಂಭಿಸಿದ್ರೆ ಹೋರಾಟ 

ಸದ್ಯ 174 ಕಾಲೇಜುಗಳು ಅಪಿಲೇಷನ್ ಹೊಂದಿವೆ. ಮತ್ತೊಂದು ಕಾನೂನು ವಿವಿ ಬೆಂಗಳೂರಲ್ಲಿ ಮಾಡಿದರೆ ಕಾಲೇಜುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ಹುಬ್ಬಳ್ಳಿ ಕಾನೂನು ವಿವಿ ಇದ್ದು ಇಲ್ಲದಂತಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರ ಮತ್ತೊಂದು ವಿವಿಯನ್ನು ಆರಂಭ ಮಾಡಬಾರದು ಅಂತ ಈ ಭಾಗದ ಹೋರಾಟಗಾರರು ಆಗ್ರಹಿಸಿದ್ದಾರೆ. ಬೆಂಗಳೂರು ಭಾಗದವರ ಅನಕೂಲಕ್ಕಾಗಿ ಮತ್ತೊಂದು ಕಾನೂನು ವಿವಿ ಆರಂಭಿಸೋದಾದ್ರೆ, ಬೆಂಗಳೂರು ಭಾಗದಲ್ಲಿರುವ ಎಲ್ಲಾ ವಿವಿಗಳನ್ನು ವಿಭಾಗಿಸಿ ಉತ್ತರ ಕರ್ನಾಟಕದಲ್ಲಿ ಅವುಗಳನ್ನು ಆರಂಭಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಕಾನೂನು ಕಾಲೇಜುಗಳು ಆರಂಭಿಸಲು ಮುಂದಾದ್ರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಧ್ವಜ ಕೇಳೋರಿಲ್ಲ: ದೇಶದ‌ ಏಕೈಕ ಹುಬ್ಬಳ್ಳಿಯ ಖಾದಿ‌‌ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಇದೀಗ ಮುಚ್ಚುವ ಭೀತಿ

ಸದ್ಯ ಬೆಂಗಳೂರು ಭಾಗದಲ್ಲಿ ಮತ್ತೊಂದು ಕಾನೂನು ವಿವಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಅದರ ಸಾಧಕ ಬಾಧಕಗಳನ್ನು ಚರ್ಚಿಸಲು ವರದಿ ಕೇಳಿದೆ. ಆದರೆ ಮತ್ತೊಂದು ಕಾನೂನು ವಿವಿ ಆರಂಭಿಸಬಾರದು. ಸದ್ಯ ಹುಬ್ಬಳ್ಳಿಯ ನವನಗರದಲ್ಲಿರುವ ಕಾನೂನು ವಿವಿಯನ್ನು ಮೊದಲು ಸದೃಢ ಮಾಡಬೇಕು ಅನ್ನೋದು ಉತ್ತರ ಕರ್ನಾಟಕದವರ ಆಗ್ರಹವಾಗಿದೆ. ಸರ್ಕಾರ ಈ ಬಗ್ಗೆ ಯಾವ ಕ್ರಮಕೈಗೊಳ್ಳುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *