ನವದೆಹಲಿ, ಜೂನ್ 24: ವಿಶ್ವಪ್ರಸಿದ್ಧ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಸ್ಥೆಯಾದ OpenAI ನ ಮಾಜಿ ರಿಸರ್ಚರ್ ಶ್ಯಾಮಲ್ ಅನಾಡ್ಕತ್ (Shyamal Anadkat) ಅವರು ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು (ಸ್ಯಾನ್ ಫ್ರಾನ್ಸಿಸ್ಕೋ) ತೊರೆದು ಭಾರತಕ್ಕೆ ಮರಳಿದ್ದಾರೆ. ಎಐನ ಅಡ್ಡಾ ಬಿಟ್ಟು ಭಾರತದಂತಹ ಜಾಗಕ್ಕೆ ಬರುವ ಅವರ ನಿರ್ಧಾರ ಬಹಳ ಮಂದಿಗೆ ಅಚ್ಚರಿ ಮೂಡಿಸಿರಬಹುದು. ಆದರೆ, ಶ್ಯಾಮಲ್ ಅವರ ಚಿಂತನೆಯಲ್ಲಿ ಸ್ಪಷ್ಟತೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಗಮನದ ಸಂಗತಿಯನ್ನು ಬಹಿರಂಗಪಡಿಸಿರುವ ಅವರು, ಭಾರತದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಪರಿಸರ ವ್ಯವಸ್ಥೆಯು (tech ecosystem) ಈ ತಲೆಮಾರಿನ ಅತ್ಯಂತ ದೊಡ್ಡ ಅವಕಾಶವಾಗಿದೆ ಎಂದಿದ್ದಾರೆ. ಹಾಗೆಯೇ, ಯಾವುದೋ ಮಹತ್ವದ ಎಐ ಪ್ರಾಜೆಕ್ಟ್ಗಾಗಿ ಅವರು ಬಂದಿರಬಹುದು ಎನ್ನುವ ಸುಳಿವನ್ನೂ ಕೊಟ್ಟಿದ್ದಾರೆ.
ಶ್ಯಾಮಲ್ ಅನಾಡ್ಕತ್ ಯಾರು?
ಶ್ಯಾಮಲ್ ಅವರು OpenAI ಸಂಸ್ಥೆಯಲ್ಲಿ ಸುಮಾರು 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ‘ಅಪ್ಲೈಡ್ ಇವಾಲ್ಸ್’ (Applied Evals) ತಂಡದ ನೇತೃತ್ವ ವಹಿಸಿದ್ದರು. ಕೃತಕ ಬುದ್ಧಿಮತ್ತೆಯ ಮುಂದುವರಿದ ಮಾದರಿಗಳ (Advanced AI models) ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದು ಹಾಗೂ ಅವುಗಳನ್ನು ಸುಧಾರಿಸುವುದು ಇವರ ಮುಖ್ಯ ಜವಾಬ್ದಾರಿಯಾಗಿತ್ತು.
ಇದನ್ನೂ ಓದಿ: ಬೆಂಗಳೂರು, ಮುಂಬೈನಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ; ಮಹತ್ವದ ಸಾಕ್ಷ್ಯಗಳು ವಶಕ್ಕೆ
ಶ್ಯಾಮಲ್ ಅನಾಡ್ಕತ್ ಭಾರತಕ್ಕೆ ಮರಳಲು ಕಾರಣವೇನು?
ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ಯಾಮಲ್, ಕೇವಲ ಸಿಲಿಕಾನ್ ವ್ಯಾಲಿಯಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ದೊಡ್ಡ AI ಸಂಸ್ಥೆಗಳನ್ನು ಭಾರತದಂತಹ ದೇಶಗಳಲ್ಲೂ ಕಟ್ಟಿ ಬೆಳೆಸಬಹುದು ಎಂಬುದನ್ನು ಸಾಬೀತುಪಡಿಸಲು ತಾವು ಭಾರತಕ್ಕೆ ಮರಳಿರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ಬೆಳೆದ ತಮಗೆ ಇಲ್ಲಿನ ತಂತ್ರಜ್ಞಾನ ವಲಯದೊಂದಿಗೆ ಯಾವಾಗಲೂ ಆಳವಾದ ಸಂಪರ್ಕವಿತ್ತು. ಆರಂಭದಲ್ಲಿ ಜಾಗತಿಕ ತಂತ್ರಜ್ಞಾನದ ಕೇಂದ್ರಬಿಂದುವಾದ ಸಿಲಿಕಾನ್ ವ್ಯಾಲಿಯನ್ನು ಬಿಟ್ಟು ಬರುವುದು ತಪ್ಪು ನಿರ್ಧಾರ ಎನಿಸಿದರೂ, ಈಗ ಅದು ಅತ್ಯುತ್ತಮ ನಿರ್ಧಾರ ಎಂದು ತಮಗೆ ಮನವರಿಕೆ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಇಂಜಿನಿಯರ್‌ಗಳ ಬಗ್ಗೆ ಶ್ಯಾಮಲ್ ಅವರ ಅಭಿಪ್ರಾಯ
ಕಳೆದ ಕೆಲವು ವಾರಗಳಿಂದ ಭಾರತ ಮತ್ತು ಏಷ್ಯಾ-ಪೆಸಿಫಿಕ್ ವಲಯದ ಇಂಜಿನಿಯರ್‌ಗಳು, ಸಂಶೋಧಕರು ಮತ್ತು ಚಿಂತಕರೊಂದಿಗೆ ಶ್ಯಾಮಲ್ ಮಾತನಾಡಿದ್ದಾರೆ. ಭಾರತದಲ್ಲಿ ಪ್ರತಿಭೆ ಅಥವಾ ಸಾಮರ್ಥ್ಯದ ಕೊರತೆಯಿಲ್ಲ, ಆದರೆ ಜಾಗತಿಕ ಮಟ್ಟದಲ್ಲಿ ಜಗತ್ತನ್ನೇ ಬದಲಾಯಿಸಬಲ್ಲ ಸಂಸ್ಥೆಗಳನ್ನು ನಾವು ಇಲ್ಲೇ ನಿರ್ಮಿಸಬಹುದು ಎಂಬ “ಸಾಮೂಹಿಕ ಆತ್ಮವಿಶ್ವಾಸದ” (Collective Desire) ಕೊರತೆ ಮಾತ್ರ ಇತ್ತು, ಅದನ್ನು ಈಗ ಬದಲಾಯಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಷೇರುಬಜಾರು ಕಂಬ್ಯಾಕ್; ನಿನ್ನೆ ಕುಸಿದಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಳ್ಳಲು ಏನು ಕಾರಣ?
ಶ್ಯಾಮಲ್ ಅವರ ಮುಂದಿನ ಯೋಜನೆ ಏನು?
ಶ್ಯಾಮಲ್ ಅವರು ತಮ್ಮ ಮುಂದಿನ ರಹಸ್ಯ ಪ್ರಾಜೆಕ್ಟ್ ಅಥವಾ ಸ್ಟಾರ್ಟ್‌ಅಪ್‌ನ ನಿಖರವಾದ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ. ಆದರೆ, ವಿಜ್ಞಾನದ ಪ್ರಗತಿಯನ್ನು ವೇಗಗೊಳಿಸುವ ಮತ್ತು ಎಲ್ಲರಿಗೂ ಪ್ರಯೋಜನಕಾರಿಯಾಗುವಂತಹ “ಸೂಪರ್ ಇಂಟೆಲಿಜೆನ್ಸ್” (Superintelligence) ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಾವು ಕೆಲಸ ಮಾಡುವುದಾಗಿ ಅವರು ಸುಳಿವು ನೀಡಿದ್ದಾರೆ. ತಮ್ಮ ಈ ಕನಸಿಗೆ ಕೈಜೋಡಿಸಲು ಇಚ್ಛಿಸುವ ಆಸಕ್ತರನ್ನು ತಮ್ಮನ್ನು ಸಂಪರ್ಕಿಸುವಂತೆ ಅವರು ಆಹ್ವಾನಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
