ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ ವದಂತಿಗೆ ತೆರೆ: 3,300 ಕೋಟಿ ರೂ. ಲೆಕ್ಕಪತ್ರ ಪಕ್ಕಾ – Kannada News | Ayodhya Ram Mandir Donations: Rs 3300 Crore Secure, Scam Rumors Debunked by Govt

ಅಯೋಧ್ಯೆ, ಆಗಸ್ಟ್​ 07: ಅಯೋಧ್ಯೆ(Ayodhya)ಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಬೃಹತ್ ಮಟ್ಟದ ಆರ್ಥಿಕ ಅಕ್ರಮ ಅಥವಾ ದೇಣಿಗೆ ಹಗರಣ ನಡೆದಿದೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಸರ್ಕಾರಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಭಕ್ತರು ನೀಡಿದ 3,300 ಕೋಟಿ ರೂ. ದೇಣಿಗೆ ಹಣದ ಪ್ರತಿಯೊಂದು ಪೈಸೆಯೂ ಸುರಕ್ಷಿತವಾಗಿದ್ದು, ಸಂಪೂರ್ಣವಾಗಿ ಲೆಕ್ಕಪರಿಶೋಧನೆಗೊಳಪಟ್ಟಿದೆ ಎಂದು ತಿಳಿಸಲಾಗಿದೆ. ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಬದಲಿಗೆ ಹುಂಡಿಯಲ್ಲಿರುವ ನಗದು ಎಣಿಕೆ ಮಾಡುವ ಸಂದರ್ಭದಲ್ಲಿ ನಡೆದ ಪ್ರತ್ಯೇಕ ಕಳ್ಳತನ ಇದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾರ್ವಜನಿಕರಿಂದ ಹರಿದುಬಂದಿರುವ 3,300 ಕೋಟಿ ರೂ. ದೇಣಿಗೆಯನ್ನು ‘ಮೆಸರ್ಸ್ ವಿ. ಶಂಕರ್ ಅಯ್ಯರ್ ಆ್ಯಂಡ್ ಕಂಪನಿ’ ಎಂಬ ಸ್ವತಂತ್ರ ಬಾಹ್ಯ ಆಡಿಟರ್ಸ್ ಸಂಸ್ಥೆಯು ಸಂಪೂರ್ಣವಾಗಿ ತಪಾಸಣೆ ಮಾಡಿದೆ. ದೇವಾಲಯ ನಿರ್ಮಾಣಕ್ಕಾಗಿ ಸುಮಾರು1,800 ಕೋಟಿ ರೂ. ಹಾಗೂ ಭೂ ಖರೀದಿಗಾಗಿ 400 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರತಿಯೊಂದು ವಹಿವಾಟನ್ನೂ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಮಾಡಲಾಗಿದ್ದು, ಯಾವುದೇ ನಗದು ರೂಪದ ವಹಿವಾಟು ನಡೆದಿಲ್ಲ.

ನಗದು ಎಣಿಕೆ ವೇಳೆ ಕಳ್ಳತನ ಮಾಡಿದ್ದು ಯಾರು?
ಹುಂಡಿಯಿಂದ ಹಣವನ್ನು ತೆಗೆದು ಯಂತ್ರಗಳ ಮೂಲಕ ಎಣಿಕೆ ಮಾಡುವ ಮುನ್ನ ಕೈಯಿಂದ ಬೇರ್ಪಡಿಸುವ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಿಸಿದ್ದ ‘ಸೈನಿಕ್ ಸೆಕ್ಯುರಿಟಿ ಸರ್ವೀಸಸ್’ (SSS) ಏಜೆನ್ಸಿಯ ಆರು ಬಾಹ್ಯ ಉದ್ಯೋಗಿಗಳು ಈ ಕಳ್ಳತನ ಎಸಗಿದ್ದಾರೆ. ಸಿಸಿಟಿವಿ (CCTV) ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಷಣವೇ ಬಂಧಿಸಲಾಗಿದೆ. ಬಂದಿತರಲ್ಲಿ ಯಾರೂ ರಾಮ ಮಂದಿರ ಟ್ರಸ್ಟ್ ಅಥವಾ ದೇವಾಲಯ ಆಡಳಿತದ ನೇರ ನೌಕರರಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಶ್ರೀರಾಮನ ಚಿನ್ನಾಭರಣ ದೋಚಲು 200 ಖದೀಮರ ಜಾಲ: ಅಯೋಧ್ಯೆಯಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬರ್ತಿತ್ತಾ ಕದ್ದ ಚಿನ್ನ?

ಐಪಿಎಸ್ ಅಧಿಕಾರಿಗಳಿಂದ ತನಿಖೆ: ಈ ಕಳ್ಳತನದ ಪ್ರತ್ಯೇಕ ಪ್ರಕರಣದ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದ ‘ವಿಶೇಷ ತನಿಖಾ ತಂಡ’ (SIT) ರಚಿಸಲಾಗಿದ್ದು, ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆ ನಡೆಸುತ್ತಿದೆ. ದೇವಸ್ಥಾನದ ಸುತ್ತಮುತ್ತಲಿನ ಭೂಮಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನೂ ಸರ್ಕಾರ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಭೂಮಿ ಬೆಲೆ ಹೆಚ್ಚಾಗಿದ್ದರಿಂದ ಮತ್ತು ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಪರಿಹಾರ ನೀಡಿದ್ದರಿಂದ ವೆಚ್ಚ ಹೆಚ್ಚಾಗಿದೆಯೇ ವಿನಃ ಯಾವುದೇ ಅಕ್ರಮವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಚಲವಾದ ಭಕ್ತರ ನಂಬಿಕೆ: ಕಳ್ಳತನದ ಘಟನೆಯ ನಂತರವೂ ಅಯೋಧ್ಯೆ ರಾಮ ಮಂದಿರಕ್ಕೆ ಹರಿದುಬರುವ ಭಕ್ತರ ಸಂಖ್ಯೆ ಹಾಗೂ ದೇಣಿಗೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಹುಂಡಿ ದೇಣಿಗೆಯ ಮೂಲಕವೇ ಪ್ರತಿ ತಿಂಗಳು ಸರಾಸರಿ 5 ಕೋಟಿ ರೂ. ನಗದು ದೇಣಿಗೆ ಹರಿದುಬರುತ್ತಿದೆ. ಈ ಘಟನೆಯ ನಂತರ ಹುಂಡಿ ನಗದು ಎಣಿಕೆ ಕೇಂದ್ರಗಳಲ್ಲಿ ಡಿಜಿಟಲ್ ಸ್ಕ್ಯಾನಿಂಗ್ ಮತ್ತು ಹೆಚ್ಚುವರಿ ಬಯೋಮೆಟ್ರಿಕ್ ಭದ್ರತಾ ಕ್ರಮಗಳನ್ನು ಜಾರಿಗೆ ತರಲು ಎಸ್‌ಬಿಐ ಹಾಗೂ ಟ್ರಸ್ಟ್ ಜಂಟಿಯಾಗಿ ನಿರ್ಧರಿಸಿವೆ.

Source link

Leave a Reply

Your email address will not be published. Required fields are marked *