Headlines

ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣ: ಮೃತರ ಕುಟುಂಬಸ್ಥರ ಒಪ್ಪಿಗೆ ಇಲ್ಲದೆಯೇ ಮುಗಿಯಿತಾ ಪೋಸ್ಟ್​ಮಾರ್ಟಮ್? – Kannada News | Hanur Forest Firing: Family Alleges Post Mortem Conducted Without Consent

ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣಕ್ಕೆ ಟ್ವಿಸ್ಟ್

ಮೈಸೂರು, ಆಗಸ್ಟ್ 16: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಆಂಥೋನಿ, ಪೀಟರ್ ಹಾಗೂ ಕುಮಾರ್ ಬಲಿಯಾದ ಪ್ರಕರಣ ತೀವ್ರ ಗಂಭೀರ ತಿರುವು ಪಡೆದುಕೊಂಡಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗೆ (Post-Mortem) ಕುಟುಂಬಸ್ಥರು ಒಪ್ಪಿಗೆ ನೀಡದಿರುವ ನಡುವೆಯೇ, ಪೊಲೀಸರು ಹಾಗೂ ಜಿಲ್ಲಾಡಳಿತ ಅಮಾಯಕರನ್ನು ಯಾಮಾರಿಸಿ ಪೋಸ್ಟ್​ಮಾರ್ಟಮ್ ಮುಗಿಸಿದ್ದಾರೆ ಎಂದು ಮೃತ ಪೀಟರ್ ಅವರ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್ ಗಂಭೀರ ಆರೋಪ ಮಾಡಿದ್ದಾರೆ.

ಹೈಡ್ರಾಮಾಗೆ ಕಾರಣವಾದ ಪಂಚನಾಮೆ

ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಬಳಿಕ ಶವಗಳ ಮರಣೋತ್ತರ ಪರೀಕ್ಷೆಗೆ ಮೃತರ ಕುಟುಂಬಸ್ಥರೇ ಅಡ್ಡಿಪಡಿಸಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಬಂದು ಸೂಕ್ತ ಪರಿಹಾರ ಘೋಷಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಸಮ್ಮತಿಸುವುದಿಲ್ಲ ಎಂದು ಮೃತರ ಸಂಬಂಧಿಕರು ಪಟ್ಟು ಹಿಡಿದಿದ್ದರು.

ಕುಟುಂಬಸ್ಥರ ಇಚ್ಛೆಯಂತೆ ಕೊಳ್ಳೇಗಾಲ, ಯಳಂದೂರು ಹಾಗೂ ಚಾಮರಾಜನಗರ ತಹಶೀಲ್ದಾರ್‌ಗಳು ಆಗಮಿಸಿ ಅವರ ಮನವೊಲಿಸಿದ ನಂತರ, ಮೂವರಲ್ಲಿ ಇಬ್ಬರ ಮೃತದೇಹಗಳ ವೈಜ್ಞಾನಿಕ ಸ್ಕ್ಯಾನಿಂಗ್ ನಡೆಸಲು ಅಧಿಕಾರಿಗಳು ಮುಂದಾದರು. ಆದರೆ, ಶವಗಳನ್ನು ಸ್ಕ್ಯಾನಿಂಗ್‌ಗೆ ಕಳುಹಿಸುವ ವೇಳೆ ಸಂಬಂಧಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ಶವಾಗಾರದ ಬಾಗಿಲಲ್ಲೇ ಶವದ ವಾಹನ ತಡೆದಿದ್ದಾರೆ. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹಗಳನ್ನು ಮತ್ತೆ ಶವಾಗಾರಕ್ಕೇ ವಾಪಸ್ ಕಳುಹಿಸಿದ್ದಾರೆ.

ಪಂಚನಾಮೆ ಹೆಸರಲ್ಲಿ ಸಹಿ ಪಡೆದು ಪೋಸ್ಟ್ ಮೌರ್ಟಮ್ ಮುಕ್ತಾಯ?

ಮೃತರ ಕುಟುಂಬಸ್ಥರ ಅಮಾಯಕತೆಯನ್ನೇ ದುರ್ಬಳಕೆ ಮಾಡಿಕೊಂಡಿರುವ ಪೊಲೀಸರು, ಕೇವಲ ಪಂಚನಾಮೆ ಪ್ರಕ್ರಿಯೆ ಎಂದು ಹೇಳಿ ಅವರಿಂದ ಸಹಿ ಪಡೆದುಕೊಂಡಿದ್ದಾರೆ. ಆದರೆ, ಕುಟುಂಬಸ್ಥರಿಗೆ ತಿಳಿಸದೇ, ಅವರ ಯಾವುದೇ ಒಪ್ಪಿಗೆಯೂ ಇಲ್ಲದೆ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಪೀಟರ್ ಅವರ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್ ಅವರು ಶವಾಗಾರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ ಜಿಲ್ಲಾಡಳಿತದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾವು ಮರಣೋತ್ತರ ಪರೀಕ್ಷೆಗೆ ಸಮ್ಮತಿಯನ್ನೇ ನೀಡಿರಲಿಲ್ಲ. ಆದರೆ ಹನೂರಿನಿಂದ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದಾಗ, ಈಗಾಗಲೇ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿದಿರುವುದು ಗೊತ್ತಾಗಿದೆ. ನಾನು ನರ್ಸ್ ಆಗಿರುವುದರಿಂದ ಶವಾಗಾರದ ಒಳಗಿನ ಸ್ಥಿತಿ ನೋಡಿ ಇದನ್ನು ಸ್ಪಷ್ಟವಾಗಿ ಹೇಳಬಲ್ಲೆ. ಶವಗಳ ಮುಂದೆ ನಮ್ಮನ್ನು ನಿಲ್ಲಿಸಿ ಫೋಟೋ ತೆಗೆಯಲು ಮುಂದಾದರು, ನಾನು ನಿರಾಕರಿಸಿದೆ. ಅಲ್ಲದೆ ಮೃತದೇಹಗಳನ್ನು ಐಸ್ ಬಾಕ್ಸ್‌ನಲ್ಲಿ ಇಡಬೇಕಾಗಿದ್ದರೂ ಹಾಗೆ ಮಾಡಿಲ್ಲ,” ಎಂದು ಮಾರ್ಗರೇಟ್ ದೂರಿದ್ದಾರೆ.

ಇದನ್ನೂ ಓದಿ ಹನೂರಿನಲ್ಲಿ ಗುಂಡೇಟಿಗೆ ಮೂವರು ಬಲಿ ಪ್ರಕರಣ: ನ್ಯಾಯಾಂಗ ತನಿಖೆಗೆ ಆರ್​​. ಅಶೋಕ್​​ ಆಗ್ರಹ

ಶವಾಗಾರದ ಬಳಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಆಕ್ರೋಶ

ಇದಕ್ಕೂ ಮುನ್ನ ಮೃತದೇಹಗಳನ್ನು ವೈಜ್ಞಾನಿಕ ಸ್ಕ್ಯಾನಿಂಗ್‌ಗೆ ಒಯ್ಯಲು ಅಧಿಕಾರಿಗಳು ಯತ್ನಿಸಿದಾಗ ಸಂಬಂಧಿಕರು ತೀವ್ರ ವಿರೋಧ ವ್ಯಕ್ತಪಡಿಸಿ ಶವದ ವಾಹನ ತಡೆದಿದ್ದರು. ಪರಿಹಾರ ಘೋಷಣೆ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಶವಪರೀಕ್ಷೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕುಟುಂಬಸ್ಥರು, ಈಗ ಪೊಲೀಸರ ಈ ಮೋಸದ ಆಟದಿಂದ ತೀವ್ರ ಆಕ್ರೋಶಗೊಂಡಿದ್ದು, ಕೆ.ಆರ್. ಆಸ್ಪತ್ರೆ ಶವಾಗಾರದ ಬಳಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:20 pm, Sun, 16 August 26

Source link

Leave a Reply

Your email address will not be published. Required fields are marked *