ಅಸಮಾಧಾನಿತರ ಕೋಪ ಶಮನಕ್ಕೆ ಮುಂದಾದ ಕಾಂಗ್ರೆಸ್Image Credit source: PTI
ಬೆಂಗಳೂರು, ಆಗಸ್ಟ್ 05: ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭುಗಿಲೆದ್ದಿರುವ ಶಾಸಕರ ಅಸಮಾಧಾನ ಶಮನಕ್ಕೆ ಇದೀಗ ಸ್ವತಃ ಮುಖ್ಯಮಂತ್ರಿಗಳ ಆದಿಯಾಗಿ ಕೆಪಿಸಿಸಿ ಅಧ್ಯಕ್ಷರು ಕೂಡ ಅಖಾಡಕ್ಕೆ ಇಳಿದಿದ್ದಾರೆ. ಮಂತ್ರಿಗಿರಿ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಹಿರಿಯ ಶಾಸಕ ದಿನೇಶ್ ಗುಂಡೂರಾವ್ ಜೊತೆ ನಿನ್ನೆಯೇ ಡಿಕೆಶಿ ಮಾತುಕತೆ ನಡೆಸಿದ್ದು, ಕೆಲವೊಮ್ಮೆ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಬೇಕಾಗುತ್ತದೆ ಎಂದು ಮನವರಿಕೆ ಮಾಡಿದ್ದಾರೆ. ಜೊತೆಗೆ ಯಶವಂತ ರಾಯಗೌಡಗೆ ಕರೆ ಮಾಡಿ ಸುಮಾರು 10 ನಿಮಿಷ ಮಾತಾಡಿದ್ದಾರೆ ಎನ್ನಲಾಗಿದೆ.
ನಿಮ್ಮ ನಿವಾಸಕ್ಕೆ ಬಂದು ಮಾತನಾಡ್ತೀನಿ ಎಂದು ಸಿಎಂ ಯಶವಂತ ರಾಯಗೌಡಗೆ ತಿಳಿಸಿದ್ದಾರೆ. ಸಚಿವ ಲಕ್ಷ್ಮಣ ಸವದಿ, ಮಹಂತೇಶ ಕೌಜಲಗಿ, ವಿನಯ್ ಕುಲಕರ್ಣಿ, ಬಿ. ಆರ್. ಪಾಟೀಲ್ರಿಂದಲೂ ಮನವೊಲಿಕೆ ಯತ್ನ ನಡೆದಿದೆ. ಮಾತುಕತೆ ವೇಳೆ ರಾಜೀನಾಮೆ ವಾಪಸ್ ಪಡೆಯುವಂತೆ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದು, ತಮ್ಮ ಸ್ಥಾನವನ್ನೇ ಬೇಕಿದ್ದರೆ ಬಿಟ್ಟುಕೊಡೋದಾಗಿ ಹೇಳಿದ್ದಾರೆ. ಮತ್ತೊಂದೆಡೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ರನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಸಚಿವ ಸ್ಥಾನ ವಂಚಿತ ಸುಬ್ಬಾರೆಡ್ಡಿ ಬೆಂಬಲಿಸಿ ಮೂರು ತಾಲೂಕುಗಳು ಬಂದ್: ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೋಲಾರ ಶಾಸಕರ ಹೊಣೆ ಪರಮೇಶ್ವರ್ಗೆ?
ಸಚಿವ ಸ್ಥಾನ ಸಿಗದ ಸಂಬಂಧ ತೀವ್ರ ಅಸಮಾಧಾನ ಹೊರಹಾಕಿರುವ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಮಾಧಾನಪಡಿಸುವ ಹೊಣೆಯನ್ನು ಡಿಸಿಎಂ ಪರಮೇಶ್ವರ್ಗೆ ನೀಡುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿಗಳು ಸದ್ಯ ಸದ್ಯ ವಿದೇಶದಲ್ಲಿದ್ದು, ಈ ಬಗ್ಗೆ ಅದಾಗಲೇ ಸಿಎಂ ಡಿ.ಕೆ.ಶಿವಕುಮಾರ್ರಿಂದಲೂ ಸಂದೇಶ ರವಾನೆಯಾಗಿದೆ ಎಂಬ ಮಾಹಿತಿ ಇದೆ.
‘ತನ್ನಿಂದಲೇ ಪಕ್ಷ ಎಂಬುದು ಸುಳ್ಳು’
ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೆಲ ಶಾಸಕರ ಜತೆ ವರಿಷ್ಠರು ವೈಯಕ್ತಿಕವಾಗಿ ಮಾತನಾಡ್ತಿದ್ದಾರೆ. ನಿನ್ನೆ ನಮ್ಮ ಸ್ನೇಹಿತರು ಕೆಲವು ಮಾತನಾಡಿರುವುದನ್ನು ನೋಡಿದೆ. ನಮ್ಮಿಂದ ಪಕ್ಷ ಇದೆಯೋ ಹೊರತು ಪಕ್ಷದಿಂದ ನಾವಿಲ್ಲ ಎಂದಿದ್ದಾರೆ. ಪಕ್ಷದ ಕಚೇರಿಗೆ ಅಲೆದಾಡಿದ್ದು, ಪಕ್ಷದ ಚಿಹ್ನೆ ಬಯಸಿದ್ದು ನಾವಲ್ಲವೇ? ನಮ್ಮನ್ನು ಗುರುತಿಸಿ ಬಿ ಫಾರಂ ಕೊಟ್ಟಿದ್ದು ಪಕ್ಷ. ಹೀಗಾಗಿ ಪಕ್ಷ ಹಾಗೂ ನಾಯಕರ ವಿರುದ್ಧ ಮಾತನಾಡುವುದು ಸರಿಯಲ್ಲ. ತನ್ನಿಂದಲೇ ಪಕ್ಷ ಎಂಬುದು ಸುಳ್ಳು. ಪಕ್ಷದ ಕಚೇರಿಯ ಬಾಗಿಲು ಕಾದಿದ್ದನ್ನು ಮರೆಯಬಾರದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
