ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಜನರು ಆರೋಗ್ಯ ಸಂಬಂಧಿತ ಮಾಹಿತಿಗಾಗಿ ಕೂಡ ಎಐ ಸಾಧನಗಳನ್ನು ಹೆಚ್ಚು ಬಳಸುತ್ತಿರುವುದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಹೌದು, ಹೆಮಟಾಲಜಿ ಅಡ್ವೈಸರ್ (Hematology Advisor) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಆರೋಗ್ಯದ ಬಗ್ಗೆ ಮಾಹಿತಿಗಾಗಿ ಎಐ ಆಧಾರಿತ ಟೂಲ್ಸ್ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಯುವಜನತೆ ಆರೋಗ್ಯ ವಿಷಯದಲ್ಲಿ ಎಐ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ.
ಅನಾರೋಗ್ಯದ ಲಕ್ಷಣಗಳು, ಆಹಾರ ಪದ್ಧತಿ, ಔಷಧಿಗಳ ಮಾಹಿತಿ, ತೂಕ ಇಳಿಕೆ ಸಲಹೆಗಳು ಮತ್ತು ಮಾನಸಿಕ ಆರೋಗ್ಯದ ಕುರಿತ ಪ್ರಶ್ನೆಗಳಿಗೆ ಜನರು ಎಐ ನೆರವು ಪಡೆಯುತ್ತಿದ್ದಾರೆ. ತಕ್ಷಣ ಉತ್ತರ ಸಿಗುವುದು ಮತ್ತು ಸುಲಭ ಭಾಷೆಯಲ್ಲಿ ಮಾಹಿತಿ ಲಭ್ಯವಾಗುವುದು ಇದರ ಜನಪ್ರಿಯತೆಗೆ ಪ್ರಮುಖ ಕಾರಣವಾಗಿದೆ. ಆದರೆ ವೈದ್ಯಕೀಯ ತಜ್ಞರು ಕೇವಲ ಎಐ ಮಾಹಿತಿಯನ್ನು ಸಂಪೂರ್ಣವಾಗಿ ನಂಬಬಾರದು ಎಂದು ಎಚ್ಚರಿಸಿದ್ದಾರೆ. ಎಐ ಸಾಮಾನ್ಯ ಮಾಹಿತಿ ನೀಡಬಹುದಾದರೂ, ಪ್ರತಿಯೊಬ್ಬರ ಆರೋಗ್ಯ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಎಐ ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ. ಜೊತೆಗೆ ಸ್ವಯಂ ಔಷಧಿ ಸೇವನೆಯ ಅಪಾಯವೂ ಹೆಚ್ಚಬಹುದು.
ಆರೋಗ್ಯ ಸಲಹೆಗೆ ಕೇವಲ ಎಐ ಅವಲಂಬಿಸುವುದು ಸರಿಯೇ?
ತಜ್ಞರ ಪ್ರಕಾರ, ಜ್ವರ, ಉಸಿರಾಟದ ತೊಂದರೆ, ತೀವ್ರ ನೋವು ಅಥವಾ ದೀರ್ಘಕಾಲದ ಕಾಯಿಲೆಗಳಂತಹ ಗಂಭೀರ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಎಐ ನೀಡುವ ಮಾಹಿತಿಯನ್ನು ಕೇವಲ ಸಾಮಾನ್ಯ ಮಾರ್ಗದರ್ಶನವಾಗಿ ಮಾತ್ರ ಪರಿಗಣಿಸಬೇಕು. ಇದಲ್ಲದೆ, ಆರೋಗ್ಯ ಮಾಹಿತಿ ಪಡೆಯುವಾಗ ವಿಶ್ವಾಸಾರ್ಹ ಮೂಲಗಳನ್ನು ಮಾತ್ರ ಬಳಸುವುದು ಮುಖ್ಯ. ಯಾವುದೇ ಔಷಧಿ ಅಥವಾ ಸಪ್ಲಿಮೆಂಟ್ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಎಂದು ತಜ್ಞರು ಸೂಚಿಸಿದ್ದಾರೆ. ತಂತ್ರಜ್ಞಾನ ಆರೋಗ್ಯ ಜಾಗೃತಿ ಹೆಚ್ಚಿಸಲು ಸಹಾಯಕವಾದರೂ, ವೈದ್ಯಕೀಯ ಪರಿಣಿತರಿಗೆ ಪರ್ಯಾಯವಲ್ಲ ಎಂಬ ಅರಿವು ಜನರಲ್ಲಿ ಮೂಡುವುದು ಅಗತ್ಯವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
