ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲImage Credit source: tv9
ಮೈಸೂರು, ಜುಲೈ 1: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಇತಿಹಾಸ ಪ್ರಸಿದ್ಧ ಚಾಮುಂಡಿಬೆಟ್ಟದಲ್ಲಿ ಜುಲೈ 17ರಿಂದ ಆಷಾಢ ಶುಕ್ರವಾರದ (Ashadha Masam 2026) ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ, ಸಚಿವರಾದ ಬಳಿಕ ಮೊದಲ ಬಾರಿಗೆ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಿದ್ಧತಾ ಸಭೆ ನಡೆಸಿದರು. ಕಳೆದ ಬಾರಿ ವಿಐಪಿಗಳ ಹಾವಳಿಯಿಂದ ಸಾಮಾನ್ಯ ಭಕ್ತರಿಗೆ ತೀವ್ರ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಸಾಮಾನ್ಯ ಭಕ್ತರ ಸುಗಮ ದರ್ಶನಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ಹಲವು ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
300 ರೂ. ಟಿಕೆಟ್ ರದ್ದು, ಶಿಫಾರಸು ಪತ್ರ ತಂದರೆ ದರ್ಶನವಿಲ್ಲ
ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು ಈ ಬಾರಿ 300 ರೂ. ಮುಖಬೆಲೆಯ ವಿಶೇಷ ದರ್ಶನ ಟಿಕೆಟ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಕೇವಲ 2,000 ರೂ. ಮುಖಬೆಲೆಯ ನೇರ ದರ್ಶನ ಟಿಕೆಟ್‌ಗಳು ಮಾತ್ರ ಲಭ್ಯವಿರಲಿವೆ. ಇನ್ನು ಮುಂದೆ ವಿಐಪಿ ಮತ್ತು ವಿವಿಐಪಿಗಳ ಕಡೆಯವರು ಅಥವಾ ಬೆಂಬಲಿಗರು ಎಂದು ಹೇಳಿಕೊಂಡು ಬರುವವರಿಗೆ ವಿಶೇಷ ಪ್ರವೇಶ ಇರುವುದಿಲ್ಲ. ರಾಜಕಾರಣಿಗಳು ಅಥವಾ ಅಧಿಕಾರಿಗಳ ಶಿಫಾರಸು ಪತ್ರ (Recommendation Letters) ತಂದವರಿಗೂ ಯಾವುದೇ ಪ್ರತ್ಯೇಕ ದರ್ಶನದ ವ್ಯವಸ್ಥೆ ಮಾಡಲಾಗುವುದಿಲ್ಲ ಎಂದು ಸಚಿವರು ಖಡಾಖಂಡಿತವಾಗಿ ತಿಳಿಸಿದ್ದಾರೆ.
ವಿಐಪಿಗಳಿಗೆ ಪ್ರತ್ಯೇಕ ಸಮಯ ನಿಗದಿ
ವಿಐಪಿಗಳ ಸಂಚಾರದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ತಡೆಯಲು ಈ ಬಾರಿ ವಿಐಪಿ ದರ್ಶನಕ್ಕೆ ಕಟ್ಟುನಿಟ್ಟಿನ ಸಮಯ ನಿಗದಿಪಡಿಸಲಾಗಿದೆ. ಆಷಾಢ ಶುಕ್ರವಾರಗಳಂದು ಮುಂಜಾನೆ 5:30 ರಿಂದ ಬೆಳಗ್ಗೆ 9:30 ರವರೆಗೆ ಮಾತ್ರ ವಿಐಪಿಗಳಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಕೇವಲ ಅಧಿಕೃತ ಶಿಷ್ಟಾಚಾರದ (Protocol) ನಿಯಮಾವಳಿಗಳಿಗೆ ಒಳಪಟ್ಟ ಗಣ್ಯರಿಗೆ ಮಾತ್ರ ಆಯಾ ಸಮಯದಲ್ಲಿ ದರ್ಶನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉಳಿದ ಅವಧಿಯಲ್ಲಿ ಸಂಪೂರ್ಣವಾಗಿ ಸಾಮಾನ್ಯ ಭಕ್ತರಿಗೇ ಆದ್ಯತೆ ನೀಡಲಾಗುತ್ತದೆ.
ಖಾಸಗಿ ವಾಹನಗಳ ಪ್ರವೇಶ ನಿಷೇಧ, ಉಚಿತ ಬಸ್ ವ್ಯವಸ್ಥೆ
ಹಿಂದಿನ ವರದಿಯಲ್ಲಿ ಉಲ್ಲೇಖಿಸಿದಂತೆ, ಆಷಾಢ ಮಾಸದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳ ಪ್ರವೇಶ ಇರುವುದಿಲ್ಲ. ಭಕ್ತರು ತಮ್ಮ ವಾಹನಗಳನ್ನು ಲಲಿತ ಮಹಲ್ ಅರಮನೆ ಮೈದಾನದ ಬಳಿ ನಿರ್ಮಿಸಲಾಗಿರುವ ಬೃಹತ್ ಪಾರ್ಕಿಂಗ್ ಸ್ಥಳದಲ್ಲಿ ಕಡ್ಡಾಯವಾಗಿ ನಿಲ್ಲಿಸಬೇಕಾಗುತ್ತದೆ. ಅಲ್ಲಿಂದ ಬೆಟ್ಟಕ್ಕೆ ತೆರಳಲು ಮತ್ತು ಮರಳಿ ಬರಲು ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ (KSRTC) ವತಿಯಿಂದ ಉಚಿತ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರೇ ಗಮನಿಸಿ: ಈ ದಿನಗಳಂದು ಖಾಸಗಿ ವಾಹನಗಳ ಪ್ರವೇಶ ಇಲ್ಲ
ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಹಾಗೂ ಡಿಸಿಪಿ ಸುಂದರಾಜ್ ಉಪಸ್ಥಿತರಿದ್ದು, ಭದ್ರತೆ ಹಾಗೂ ಮೂಲಸೌಕರ್ಯಗಳ ಕುರಿತು ಅಂತಿಮ ರೂಪುರೇಷೆ ಸಿದ್ಧಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
