ಕ್ರಿಕೆಟ್ ಅಂಗಳದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಹವಾ ಶುರುವಾಗಿದೆ. ಅದು ಸಹ ದೂರದ ಇಂಗ್ಲೆಂಡ್ನಲ್ಲಿ. ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಗೂ ಮುನ್ನ ಯುನೈಟೆಡ್ ಕಿಂಗ್ಡಮ್ನ ಅತ್ಯಂತ ಪ್ರತಿಷ್ಠಿತ ನಿಯತಕಾಲಿಕೆ ವಿಸ್ಡನ್ ತನ್ನ ನೂತನ ಸಂಚಿಕೆಯನ್ನು ಪ್ರಕಟಿಸಿದೆ. ಈ ಸಂಚಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿರುವುದು ವೈಭವ್ ಸೂರ್ಯವಂಶಿ ಎಂಬುದು ವಿಶೇಷ.
1864 ರಲ್ಲಿ ಇಂಗ್ಲೆಂಡ್‌ನ ಕ್ರಿಕೆಟಿಗ ಜಾನ್ ವಿಸ್ಡನ್ ಅವರು ಸ್ಥಾಪಿಸಿದ ವಿಸ್ಡನ್ ನಿಯತಕಾಲಿಕೆಯನ್ನು “ಕ್ರಿಕೆಟ್‌ನ ಬೈಬಲ್” ಎಂದೇ ಕರೆಯಲಾಗುತ್ತದೆ. ಈ ಮಾಸಿಕ ನಿಯತಕಾಲಿಕೆಗೆ ಕ್ರಿಕೆಟ್ ಲೋಕದಲ್ಲಿ ಇದಕ್ಕೆ ಅತ್ಯುನ್ನತ ಗೌರವವಿದೆ. ಇದೀಗ ಈ ನಿಯತಕಾಲಿಕೆಯ ಮುಖಪುಟದಲ್ಲಿ ಇನ್ನೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡದ ವೈಭವ್ ಸೂರ್ಯವಂಶಿ ಕಾಣಿಸಿಕೊಂಡಿರುವುದು ವಿಶೇಷ.
ಮುಖಪುಟದ ವಿಶೇಷತೆಗಳು:
ವಿಸ್ಡನ್ ನಿಯತಕಾಲಿಕೆಯ ಹೊಸ ಸಂಚಿಕೆಯ ಮುಖಪುಟದಲ್ಲಿ ವೈಭವ್ ಸೂರ್ಯವಂಶಿಯ ಫೋಟೋ ಬಳಸಲಾಗಿದ್ದು, ಇದಕ್ಕೆ “ಕ್ರಿಕೆಟ್ ದಾಖಲೆಗಳನ್ನು ಧೂಳೀಪಟ ಮಾಡಿದ ಹುಡುಗ” ಎಂಬಾರ್ಥದ ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ವಿಸ್ಡನ್ ನಿಯತಕಾಲಿಕೆಯ ಮುಖಪುಟದಲ್ಲಿ ಅತೀ ಕಿರಿಯ ವಯಸ್ಸಿಗೆ ಗೌರವ ಪಡೆದ ವಿಶ್ವದ ಅಪರೂಪದ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಇನ್ನು ಈ ಸಂಚಿಕೆಯಲ್ಲಿ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ಹಾಗೂ ಆಧುನಿಕ ಕ್ರಿಕೆಟ್‌ಗೆ ಅವರ ಕೊಡುಗೆಯನ್ನು ಆಳವಾಗಿ ವಿಶ್ಲೇಷಿಸಲಾಗಿದೆ.
ಹಾಗೆಯೇ ವೈಭವ್ ಸೂರ್ಯವಂಶಿಯ ಮಾರ್ಗದರ್ಶಕರಾದ ಸುಬಿನ್ ಭರುಚಾ ಅವರು, ಯುವ ದಾಂಡಿಗ ಇಷ್ಟು ಸಣ್ಣ ವಯಸ್ಸಿನಲ್ಲೇ ಒತ್ತಡವನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.
ಇದರ ಜೊತೆಗೆ ಸೌತ್ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು, “ನಾನು ನನ್ನ ಜೀವನದಲ್ಲಿ ನೋಡಿದ ಅತ್ಯುತ್ತಮ ಟಿ20 ಬ್ಯಾಟಿಂಗ್ ಪ್ರತಿಭೆ ವೈಭವ್” ಎಂದು ಶ್ಲಾಘಿಸಿರುವ ವಿಶೇಷ ಲೇಖನವೂ ಕೂಡ ಇದರಲ್ಲಿದೆ.
ಇದನ್ನೂ ಓದಿ: IPL 2027: ಎಷ್ಟು ಕೋಟಿ ಹೇಳಿ… ಹಾರ್ದಿಕ್ ಪಾಂಡ್ಯ ಖರೀದಿಗೆ KKR..!
ಒಟ್ಟಾರೆಯಾಗಿ ಹೇಳುವುದಾದರೆ, 15ರ ಹರೆಯದಲ್ಲೇ ವಿಸ್ಡನ್‌ನಂತಹ ಜಾಗತಿಕ ನಿಯತಕಾಲಿಕೆಯ ಮುಖಪುಟದಲ್ಲಿ ಸ್ಥಾನ ಪಡೆದಿರುವುದು ವೈಭವ್ ಸೂರ್ಯವಂಶಿ ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ಕ್ರಿಕೆಟ್ ಲೋಕದ ದಿಗ್ಗಜರೇ ಬೆರಗಾಗುವಂತೆ ಮಾಡಿರುವ ವೈಭವ್ ಮುಂಬರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸುವ ಸಾಧ್ಯತೆಯಿದೆ.
