ಮಂಜುನಾಥ್ ಆಪ್ತರಿಗೂ ತಟ್ಟಿದ ಇಡಿ ಬಿಸಿ: ಅಬಕಾರಿ ಎಸ್ಪಿ, ಡಿವೈಎಸ್ಪಿ ಮನೆಗಳ ಮೇಲೂ ರೇಡ್​ – Kannada News | ED Crackdown in Karnataka: Raids Extended to Houses of Excise SP and DySP Close to Additional Commissioner Y Manjunath

ಮಂಜುನಾಥ್ ಆಪ್ತರಿಗೂ ತಟ್ಟಿದ ಇಡಿ ಬಿಸಿ

ಬೆಳಗಾವಿ, ಜೂನ್​​ 24: ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರಿಗೆ ಬೆಳ್ಳಂ ಬೆಳಿಗ್ಗೆ ಶಾಕ್​​ ನೀಡಿರುವ ಇಡಿ ಮಂಜುನಾಥ್​​ಗೆ ಆಪ್ತರಾಗಿರುವ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದೆ. ಚಿಕ್ಕೋಡಿ ಅಬಕಾರಿ ಡಿವೈಎಸ್ಪಿ ಮತ್ತು ತುಮಕೂರು ಅಬಕಾರಿ ಎಸ್ಪಿ ಮನೆಗಳ ಮೇಲೂ ಇಡಿ ಅಧಿಕಾರಿಗಳು ರೇಡ್​​ ನಡೆಸಿ, ಶೋಧ ಆರಂಭಿಸಿದ್ದಾರೆ.

ತುಮಕೂರು ಅಬಕಾರಿ ಎಸ್ಪಿಗೆ ಇಡಿ ಶಾಕ್​​

ತುಮಕುರು ಅಬಕಾರಿ ಎಸ್ಪಿ ಸತೀಶ ಕಾಗಲಿ ಅವರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿರುವ ಮನೆ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಮನೆಯ ಇಂಚಿಂಚನ್ನು ಜಾಲಾಡಿದ್ದಾರೆ. ಬೆಳಗಾವಿಯ ಶ್ರೀನಗರದಲ್ಲಿರುವ ನಿವಾಸದ ಮೇಲೂ ರೇಡ್​​ ನಡೆಸಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್; ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ದಾಳಿ

ಚಿಕ್ಕೋಡಿ ಅಬಕಾರಿ ಡಿವೈಎಸ್ಪಿಗೂ ಇಡಿ ದಾಳಿ ಬಿಸಿ

ವೈ. ಮಂಜುನಾಥ್ ಅವರ ಮತ್ತೋರ್ವ ಆಪ್ತ ಚಿಕ್ಕೋಡಿ ಅಬಕಾರಿ ಡಿವೈಎಸ್ಪಿ ವಿಶ್ವನಾಥ ಗಾಣಿಗೆರ ಮನೆ ಮೇಲೆಯೂ ಇಡಿ ರೇಡ್​​ ನಡೆದಿದೆ. ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತದಲ್ಲಿ ದಾಖಲಾಗಿದ್ದ ಡಿಎ ಕೇಸ್ ಸಂಬಂಧ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್​​ಗೆ ಸೇರಿ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 2013ರಲ್ಲಿ ಮೈಸೂರು ಅಬಕಾರಿ ಡಿಸಿಯಾಗಿದ್ದ ವೇಳೆಯೂ ಮಂಜುನಾಥ್ ಮೇಲೆ ಲೋಕಾಯುಕ್ತ ರೇಡ್ ಆಗಿತ್ತು. ಲೈಸೆನ್ಸ್​​ಗಳ ರಿನೀವಲ್​​ನಲ್ಲಿ ಅಕ್ರಮ ಹಣ ಸಂಪಾದನೆ ಆರೋಪ ಹಿನ್ನೆಲೆ ದಾಳಿ ನಡೆದಿದ್ದು, ಸಾಕಷ್ಟು ಹಣ ಮತ್ತು ಆಸ್ತಿ ಪತ್ತೆಯಾಗಿತ್ತು. ಈ ಸಂಬಂಧ ಇಲಾಖಾ ತನಿಖೆ ಮಂಜುನಾಥ್ ಮೇಲೆ ನಡೆದಿತ್ತು ಎಂಬುದು ಗೊತ್ತಾಗಿದೆ.

‘ಉಪ್ಪು ತಿಂದವರು ನೀರು ಕುಡೀತಾರೆ’

ಇನ್ನು ಅಬಕಾರಿ ಇಲಾಖೆ ಅಧಿಕಾರಿ ಮನೆ ಮೇಲೆ ಇಡಿ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಇಲಾಖೆಯ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಇಡಿ ದಾಳಿ ಬಗ್ಗೆ ತನಗೆ ಗೊತ್ತಿಲ್ಲ ಎಂದಿದ್ದಾರೆ. ಸಾಕಷ್ಟು ಅಧಿಕಾರಿಗಳು ನನ್ನ ಕೆಳಗೆ ಕೆಲಸ ಮಾಡಿದ್ದಾರೆ. ಉಪ್ಪು ತಿಂದವರು ನೀರು ಕುಡೀತಾರೆ. ಮಂಜುನಾಥ್ ವಿರುದ್ಧ ಒಂದೆರಡು ಬಾರಿ ಇಲಾಖೆಯಲ್ಲಿ ತನಿಖೆ ಆಗಿತ್ತು. ಆದರೆ ಸದ್ಯಕ್ಕೆ ಯಾವುದೇ ಆರೋಪಗಳು ಇರಲಿಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *