ಇಂದಿನಿಂದ ಭಾರತದಲ್ಲಿ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಜೂನ್ 30 ರವರೆಗೆ ‘ಮೆಸೇಜ್ ಎಡಿಟಿಂಗ್’ ಆಯ್ಕೆ ಇರುವುದಿಲ್ಲ – Kannada News | Telegram Unbanned in India: Message Editing Restricted Until June 30 After NEET Leak Row

ನವದೆಹಲಿ, ಜೂನ್ 22: ನೀಟ್ -ಯುಜಿ ಮರು ಪರೀಕ್ಷೆ 2026 ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಮೇಲೆ ಹೇರಿದ್ದ ನಿಷೇಧವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಹಿಂಪಡೆದಿದೆ. ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಆ್ಯಪ್‌ನ ಪ್ರಮುಖ ಆಯ್ಕೆಯಾದ ‘ಮೆಸೇಜ್-ಎಡಿಟಿಂಗ್’ ಮೇಲಿನ ನಿರ್ಬಂಧವನ್ನು ಜೂನ್ 30 ರವರೆಗೆ ಮುಂದುವರಿಸಲು ಸರ್ಕಾರ ಆದೇಶಿಸಿದೆ.

ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆ್ಯಪ್ ಸ್ಟೋರ್‌ಗಳಲ್ಲಿ ಆ್ಯಪ್ ಇನ್ನು ಲಭ್ಯವಾಗಿಲ್ಲದಿದ್ದರೂ, ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ಹಂತಹಂತವಾಗಿ ನಿಷೇಧವನ್ನು ರದ್ದುಗೊಳಿಸುತ್ತಿರುವುದರಿಂದ ಶೀಘ್ರದಲ್ಲೇ ಇದು ದೇಶದ ಬಳಕೆದಾರರಿಗೆ ಪೂರ್ಣ ಪ್ರಮಾಣದಲ್ಲಿ ಸಿಗಲಿದೆ.

ಟೆಲಿಗ್ರಾಮ್ ನಿಷೇಧಕ್ಕೆ ಅಸಲಿ ಕಾರಣವೇನು?
ನೀಟ್ ಪರೀಕ್ಷಾ ಬಿಕ್ಕಟ್ಟು: ಇತ್ತೀಚೆಗೆ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಸೋರಿಕೆಯಾಗಿ, ಕಾನೂನುಬಾಹಿರವಾಗಿ ಮಾರಾಟವಾಗುತ್ತಿರುವುದು ಪತ್ತೆಯಾಗಿತ್ತು.

ಜೂನ್ 21 ರಂದು ನಡೆದ ನೀಟ್ ಮರುಪರೀಕ್ಷೆಯ ಸಮಯದಲ್ಲಿ ಯಾವುದೇ ಅಕ್ರಮಗಳು ನಡೆಯಬಾರದು ಎಂಬ ಕಾರಣಕ್ಕೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಸರ್ಕಾರ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು.

ಹೈಕೋರ್ಟ್‌ನಲ್ಲಿ ಟೆಲಿಗ್ರಾಮ್‌ಗೆ ಹಿನ್ನಡೆ: ನಿಷೇಧದ ವಿರುದ್ಧ ಟೆಲಿಗ್ರಾಮ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಸರ್ಕಾರದ ಕ್ರಮ ಕಾನೂನುಬದ್ಧವಾಗಿದೆ ಎಂದು ನ್ಯಾಯಾಧೀಶ ತೇಜಸ್ ಕರಿಯಾ ತೀರ್ಪು ನೀಡಿದ್ದರು. ತಾನು ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ 900 ಕ್ಕೂ ಹೆಚ್ಚು ಲಿಂಕ್‌ಗಳನ್ನು ಈಗಾಗಲೇ ಡಿಲೀಟ್ ಮಾಡಿರುವುದಾಗಿ ಟೆಲಿಗ್ರಾಮ್ ಕೋರ್ಟ್‌ಗೆ ತಿಳಿಸಿತ್ತು.

ಮತ್ತಷ್ಟು ಓದಿ: ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ

ಸಂಸ್ಥಾಪಕ ಪಾವೆಲ್ ಡುರೊವ್ ಆಕ್ರೋಶ: ಭಾರತ ಸರ್ಕಾರದ ಈ ಕ್ರಮವನ್ನು ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಖಂಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಅಸಲಿ ಅಪರಾಧಿಗಳನ್ನು ಹಿಡಿಯುವ ಬದಲು, ಭಾರತ ಸರ್ಕಾರ ದೇಶದ 15 ಕೋಟಿ ಸಾಮಾನ್ಯ ಬಳಕೆದಾರರಿಗೆ ಶಿಕ್ಷೆ ವಿಧಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಕೂಡ ಸರ್ಕಾರದ ನಿರ್ಧಾರವನ್ನು ಟೀಕಿಸಿದೆ. ವಿಶೇಷವಾಗಿ ಜೂನ್ 30 ರವರೆಗೆ ‘ಮೆಸೇಜ್ ಎಡಿಟಿಂಗ್’ ನಿರ್ಬಂಧಿಸಿರುವ ಕ್ರಮಕ್ಕೆ ಯಾವುದೇ ಸ್ಪಷ್ಟ ಕಾನೂನು ಆಧಾರವಿಲ್ಲ ಮತ್ತು ಇದು ಪರೀಕ್ಷಾ ವಂಚನೆಗೆ ತರಲಾದ ಅಸಮಾನ ಪರಿಹಾರ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *