ಇರಾನ್-ಅಮೆರಿಕ ಒಪ್ಪಂದದ ಎಫೆಕ್ಟ್; ತೈಲ ಬೆಲೆ ಇಳಿಕೆ; ರೂಪಾಯಿಗೆ ಜೀವ; ಚಿನ್ನ, ಷೇರುಗಳ ಜಿಗಿತ – Kannada News | Hormuz Peace Deal: Crude Oil Drops, Indian Stocks Soar – Global Market Impact

ಭಾರತೀಯ ಷೇರು ಮಾರುಕಟ್ಟೆImage Credit source: Shutterstock

ನವದೆಹಲಿ, ಜೂನ್ 15: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಜಗತ್ತಿನ ಶಾಂತಿ ಮತ್ತು ಆರ್ಥಿಕತೆಗೆ ಧಕ್ಕೆ ಹಾರ್ಮುಜ್ ಜಲಸಂಧಿ (Strait of Hormuz) ಸಂಘರ್ಷ ಕೊನೆಗೂ ಅಂತ್ಯಗೊಳ್ಳುತ್ತಿದೆ. ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದ (Iran-US peace deal) ಏರ್ಪಡುತ್ತಿದೆ. ಒಪ್ಪಂದಕ್ಕೆ ಸಹಿ ಹಾಕಲು ಎರಡೂ ದೇಶಗಳು ಒಪ್ಪಿವೆ. ಇದು ಜಾಗತಿಕ ಮಾರುಕಟ್ಟೆಗಳಿಗೆ ಸಿಹಿ ತಂದಿರುವ ಬೆಳವಣಿಗೆ. ಅದರಲ್ಲೂ ಭಾರತದಂತಹ ದೇಶಗಳಿಗೆ ತುಸು ನೆಮ್ಮದಿ ತರುವ ಸುದ್ದಿ. ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ಉದ್ವಿಗ್ನತೆ ಕಡಿಮೆಯಾಗಿರುವುದು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ.

ಕಚ್ಚಾ ತೈಲ (Crude Oil) ಬೆಲೆಯಲ್ಲಿ ಭಾರಿ ಕುಸಿತ

ಜಾಗತಿಕ ತೈಲ ಪೂರೈಕೆಗೆ ಎದುರಾಗಿದ್ದ ಆತಂಕ ದೂರವಾಗಿರುವುದರಿಂದ ಕಚ್ಚಾ ತೈಲ ಬೆಲೆ ತೀವ್ರವಾಗಿ ಕುಸಿದಿದೆ. ಅಮೆರಿಕದ ಕಚ್ಚಾ ತೈಲ ಬೆಲೆಯು ಶೇ. 4.3 ರಷ್ಟು ಕುಸಿದು ಬ್ಯಾರೆಲ್‌ಗೆ $81.23 ತಲುಪಿದೆ. ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು ಐದನೇ ಒಂದು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುವುದರಿಂದ, ಇಲ್ಲಿನ ದಿಗ್ಬಂಧನ ತೆರವಾಗಿರುವುದು ಮಾರುಕಟ್ಟೆಗೆ ನಿರಾಳತೆ ತಂದಿದೆ.

ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಯ ಶೇಕಡಾ 85 ಕ್ಕಿಂತ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ತೈಲ ಬೆಲೆ ಇಳಿಕೆಯಿಂದ ದೇಶದ ಹಣದುಬ್ಬರ ನಿಯಂತ್ರಣಕ್ಕೆ ಬರಲಿದ್ದು, ಆಮದು ವೆಚ್ಚ ಹಾಗೂ ಚಾಲ್ತಿ ಖಾತೆ ಕೊರತೆ (CAD) ಕಡಿಮೆಯಾಗಲಿದೆ.

ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ

ಸೆನ್ಸೆಕ್ಸ್ ಮತ್ತು ನಿಫ್ಟಿ ಭರ್ಜರಿ ಜಿಗಿತ

ಏಷ್ಯಾದಲ್ಲಿ ಶಾಂತಿ ನೆಲೆಸುವ ಮುನ್ಸೂಚನೆ ಸಿಗುತ್ತಿದ್ದಂತೆ ಭಾರತೀಯ ಷೇರು ಮಾರುಕಟ್ಟೆಗಳು ಸೋಮವಾರ ಭರ್ಜರಿ ಲಾಭದೊಂದಿಗೆ ವಹಿವಾಟು ಆರಂಭಿಸಿದವು. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,144 ಅಂಕಗಳ (ಶೇ 1.51) ಏರಿಕೆ ಕಂಡು 76,672 ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 351 ಅಂಕಗಳ (ಶೇ 1.49) ಜಿಗಿತದೊಂದಿಗೆ 23,974 ರ ಮಟ್ಟ ಮುಟ್ಟಿತು. ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಮಾರುಕಟ್ಟೆಯನ್ನು ಮುನ್ನಡೆಸಿದವು. ಮಾರುಕಟ್ಟೆಯ ಏರಿಳಿತವನ್ನು ಅಳೆಯುವ ಇಂಡಿಯಾ ವಿಐಎಕ್ಸ್ (India VIX) ಕುಸಿದಿದ್ದು, ಹೂಡಿಕೆದಾರರ ಆತಂಕ ದೂರವಾಗಿರುವುದನ್ನು ಇದು ತೋರಿಸುತ್ತದೆ.

ಬಲಗೊಂಡ ಭಾರತೀಯ ರೂಪಾಯಿ

ಕಚ್ಚಾ ತೈಲದ ಬೆಲೆ ಇಳಿಕೆಯ ನೇರ ಸಕಾರಾತ್ಮಕ ಪರಿಣಾಮ ರೂಪಾಯಿಯ ಮೇಲಾಗಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು 53 ಪೈಸೆ ಬಲಗೊಂಡು 94.65 ಮಟ್ಟದಲ್ಲಿ ವಹಿವಾಟು ಆರಂಭಿಸಿತು (ಹಿಂದಿನ ಶುಕ್ರವಾರದ ಮುಕ್ತಾಯದ ಮೌಲ್ಯ 95.18 ಆಗಿತ್ತು). ತೈಲ ಬೆಲೆ ಕಡಿಮೆಯಾದಾಗ ಭಾರತೀಯ ತೈಲ ಕಂಪನಿಗಳಿಂದ ಡಾಲರ್ ಬೇಡಿಕೆ ತಗ್ಗುತ್ತದೆ. ಇದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಮತ್ತೆ ಭಾರತೀಯ ಮಾರುಕಟ್ಟೆಗೆ ಮರಳುವ ನಿರೀಕ್ಷೆಯಿದೆ.

ಶೇ 2 ಕ್ಕಿಂತ ಹೆಚ್ಚು ಜಿಗಿದ ಚಿನ್ನದ ಬೆಲೆ

ಭೌಗೋಳಿಕ ಉದ್ವಿಗ್ನತೆ ಕಡಿಮೆಯಾಗಿದ್ದರೂ ಚಿನ್ನದ ಬೆಲೆ ಮಾತ್ರ ತೈಲಕ್ಕೆ ತದ್ವಿರುದ್ಧವಾಗಿ ತೇಜಿ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಶೇಕಡಾ 2.5 ರಷ್ಟು ಏರಿಕೆಯಾಗಿ ಔನ್ಸ್‌ಗೆ $4,322.87 ತಲುಪಿದೆ. ತೈಲ ಬೆಲೆ ಕುಸಿತದಿಂದಾಗಿ ಜಾಗತಿಕವಾಗಿ ಹಣದುಬ್ಬರ ನಿಯಂತ್ರಣಕ್ಕೆ ಬಂದು, ಮುಂಬರುವ ದಿನಗಳಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎಂಬ ನಿರೀಕ್ಷೆಯಿಂದ ಹೂಡಿಕೆದಾರರು ಚಿನ್ನದ ಕಡೆಗೆ ಒಲವು ತೋರುತ್ತಿದ್ದಾರೆ. ಜೊತೆಗೆ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿರುವುದು ಸಹ ಇದರ ಬೆಲೆ ಏರಿಕೆಗೆ ಕಾರಣವಾಗಿದೆ.

ಇದನ್ನೂ ಓದಿ: ಮೋದಿ 5 ದಿನಗಳ ಐರೋಪ್ಯ ಪ್ರವಾಸದಲ್ಲಿ ‘ಭಾರತ್ ಇನ್ನೋವೇಟ್ಸ್’; ಹೂಡಿಕೆದಾರರೊಂದಿಗೆ ಪ್ರಧಾನಿ ಸಂವಾದ

$65,000 ಗಡಿ ದಾಟಿದ ಬಿಟ್‌ಕಾಯಿನ್

ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳಲು (Risk Appetite) ಮುಂದಾಗಿರುವುದು ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗೆ ಪೂರಕವಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಶೇಕಡಾ 2 ಕ್ಕಿಂತ ಹೆಚ್ಚು ಲಾಭ ಗಳಿಸಿ $65,783 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು $1.3 ಟ್ರಿಲಿಯನ್ ತಲುಪಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಹರ್ಷ

ಈ ಶಾಂತಿ ಒಪ್ಪಂದವನ್ನು ಇಡೀ ವಿಶ್ವದ ಮಾರುಕಟ್ಟೆಗಳು ಸ್ವಾಗತಿಸಿವೆ. ಜಪಾನ್‌ನ ನಿಕೈ (Nikkei) ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ (Kospi) ಸೂಚ್ಯಂಕಗಳು ತಲಾ ಶೇಕಡಾ 4 ಕ್ಕಿಂತ ಹೆಚ್ಚು ಜಿಗಿತ ಕಂಡರೆ, ಆಸ್ಟ್ರೇಲಿಯಾದ ಎಎಸ್‌ಎಕ್ಸ್ 200 ಶೇ 1.4 ರಷ್ಟು ಏರಿಕೆ ಕಂಡಿದೆ. ಪ್ರಸ್ತುತ ಹೂಡಿಕೆದಾರರು ಮುಂದಿನ 60 ದಿನಗಳ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ, ಏಕೆಂದರೆ ಇರಾನ್ ಅಧಿಕಾರಿಗಳ ಪ್ರಕಾರ ಔಪಚಾರಿಕ ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಮುಂದಿನ 60 ದಿನಗಳ ಕಾಲ ಮಾತುಕತೆಗಳು ಮುಂದುವರಿಯಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *