ಸೂರ್ಯ ಸಿಂಹ ರಾಶಿಯಲ್ಲಿದ್ದಾನೆ. ಬುಧ ಹಾಗೂ ಕೇತು ಸಿಂಹದಲ್ಲಿದ್ದಾರೆ, ಶುಕ್ರ ಕನ್ಯಾದಲ್ಲಿ ನೀಚ, ಮಂಗಳ ಮಿಥುನದಲ್ಲಿ, ಗುರು ಕರ್ಕಾಟಕದಲ್ಲಿ ಉಚ್ಚ, ಶನಿ ಮೀನದಲ್ಲಿ, ರಾಹು ಕುಂಭದಲ್ಲಿದ್ದಾನೆ.
ಇಲ್ಲಿ ರವಿಯು ತನ್ನದೇ ಆದ ಸಿಂಹ ರಾಶಿಯಲ್ಲಿ ಸ್ವಕ್ಷೇತ್ರಗತನಾಗಿ ಬಲವಾಗಿದ್ದಾನೆ. ಜ್ಯೋತಿಷ್ಯದ ನಿಯಮಗಳಂತೆ ಹಾಗೂ ಗೋಚಾರ ಫಲದಂತೆ ಈ ಗ್ರಹಸ್ಥಿತಿಯಲ್ಲಿ ರವಿ ದಶೆ ಅಥವಾ ರವಿಯ ಪ್ರಭಾವವು ದ್ವಾದಶ ರಾಶಿಗಳ ಮೇಲೆ ಬೀರುವ ಶುಭ, ಅಶುಭ ಹಾಗೂ ಮಿಶ್ರ ಶುಭಾಶುಭ ಫಲಗಳ ವಿವರಣೆ ಇಲ್ಲಿದೆ.
ಅತ್ಯಂತ ಶುಭ ಫಲ
ಮೇಷ ರಾಶಿ :
ರವಿಯು ಮೇಷ ರಾಶಿಗೆ ೫ನೇ ಮನೆ ಪಂಚಮ ಭಾವ – ಬುದ್ಧಿ, ಸಂತಾನ, ಭಾಗ್ಯಯ ಅಧಿಪತಿಯಾಗುತ್ತಾನೆ. ಸ್ವಕ್ಷೇತ್ರದಲ್ಲಿ ರವಿ ಬಲವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಹಾಗೂ ಅಧಿಕಾರ ಪ್ರಾಪ್ತಿಯಾಗುತ್ತದೆ.
ಧನು ರಾಶಿ :
ಧನು ರಾಶಿಗೆ ರವಿಯು ೯ನೇ ಮನೆ ಭಾಗ್ಯ ಭಾವದ ಅಧಿಪತಿ. ಭಾಗ್ಯಾಧಿಪತಿ ರವಿಯು ಸ್ವಕ್ಷೇತ್ರದಲ್ಲಿದ್ದು ಬಲವಾಗಿದ್ದರೆ ತಂದೆಯಿಂದ ಬೆಂಬಲ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ದೂರದ ಪ್ರಯಾಣ ಹಾಗೂ ಸಮಾಜದಲ್ಲಿ ಗೌರವ-ಪ್ರತಿಷ್ಠೆ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಗೆ ರವಿಯು ೧೦ನೇ ಮನೆ ಕರ್ಮ ಭಾವದ ಅಧಿಪತಿಯಾಗುತ್ತಾನೆ. ಉದ್ಯೋಗ, ವ್ಯಾಪಾರ ಹಾಗೂ ರಾಜಕೀಯ ರಂಗದಲ್ಲಿದ್ದವರಿಗೆ ಅತ್ಯುತ್ತಮ ಪ್ರಗತಿ ಕಂಡುಬರುತ್ತದೆ. ಸರ್ಕಾರದ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ.
ಶುಭಾಶುಭ ಫಲ
ಸಿಂಹ ರಾಶಿ :
ರವಿಯು ಸ್ವಗೃಹದಲ್ಲಿದ್ದರೂ, ಜೊತೆಗೆ ಕೇತು ಮತ್ತು ಅಸ್ತಂಗತ ಬುಧ ಇರುವುದರಿಂದ ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ. ಆದರೆ ತಲೆಯುರಿ, ಅಧಿಕ ಕೋಪ ಹಾಗೂ ಅಹಂಕಾರದಿಂದಾಗಿ ಸಂಬಂಧಗಳಲ್ಲಿ ಸಣ್ಣಪುಟ್ಟ ಬಿರುಕು ಮೂಡಬಹುದು.
ಕರ್ಕಾಟಕ ರಾಶಿ :
ಕರ್ಕಾಟಕಕ್ಕೆ ರವಿ ೨ನೇ ಮನೆ ಧನ, ಕುಟುಂಬಗಳ ಅಧಿಪತಿ. ಆರ್ಥಿಕವಾಗಿ ಧನಲಾಭವಿದ್ದರೂ, ಮಾತಿನಲ್ಲಿ ಕಠೋರತೆ ಬರಬಹುದು. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪಗಳಾಗದಂತೆ ಎಚ್ಚರ ವಹಿಸಬೇಕು.
ತುಲಾ ರಾಶಿ
ತುಲಾ ರಾಶಿಗೆ ರವಿಯು ೧೧ನೇ ಮನೆ ಲಾಭ ಭಾವದ ಅಧಿಪತಿ. ವಿವಿಧ ಮೂಲಗಳಿಂದ ಆದಾಯ ಹರಿದುಬರುತ್ತದೆ. ಆದರೆ ಹಿರಿಯ ಸಹೋದರರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಣ್ಣ ಅಭಿಪ್ರಾಯ ಭೇದ ಬರಬಹುದು.
ಮಿಥುನ ರಾಶಿ
ಮಿಥುನಕ್ಕೆ ೩ನೇ ಮನೆ ಪರಾಕ್ರಮ ಭಾವದ ಅಧಿಪತಿಯಾಗಿ ರವಿ ಬಲವಾಗಿದ್ದಾನೆ. ಧೈರ್ಯ-ಸಾಹಸಗಳು ಹೆಚ್ಚುತ್ತವೆ, ಕಾರ್ಯಸಿದ್ಧಿಯಾಗುತ್ತದೆ. ಆದರೆ ಕಿರಿಯ ಸಹೋದರರೊಂದಿಗೆ ಜಾಗರೂಕತೆ ಅಗತ್ಯ.
ಅಶುಭ ಫಲ
ಮಕರ ರಾಶಿ :
ಮಕರ ರಾಶಿಗೆ ರವಿಯು ೮ನೇ ಮನೆ ಅಷ್ಟಮ ಭಾವದ ಅಧಿಪತಿ. ಆರೋಗ್ಯದಲ್ಲಿ ವ್ಯತ್ಯಾಸ, ಕಣ್ಣು ಅಥವಾ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಅನಗತ್ಯ ಅಡೆತಡೆಗಳು ಎದುರಾಗಬಹುದು. ಮಾತು ಮತ್ತು ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ ರಾಶಿ :
ಕುಂಭ ರಾಶಿಗೆ ರವಿಯು ೭ನೇ ಮನೆ ಕಳತ್ರ ಭಾವದ ಅಧಿಪತಿಯಾಗಿದ್ದು, ಪ್ರಸ್ತುತ ರಾಹುವಿನ ಪ್ರಭಾವವೂ ಇರುವುದರಿಂದ ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ಘರ್ಷಣೆಗಳು ಉಂಟಾಗಬಹುದು.
ಇದನ್ನೂ ಓದಿ: ಆಗಸ್ಟ್ನಲ್ಲಿ ಈ 4 ರಾಶಿಗೆ ರಾಜಯೋಗ; ಹೊಸ ಮನೆ, ವಾಹನ ಖರೀದಿ ಭಾಗ್ಯ!
ಮೀನ ರಾಶಿ:
ಮೀನ ರಾಶಿಗೆ ರವಿಯು ೬ನೇ ಮನೆ ಶತ್ರು, ಋಣ, ರೋಗಗಳ ಅಧಿಪತಿಯಾಗುತ್ತಾನೆ. ಪ್ರಸ್ತುತ ಶನಿ-ಚಂದ್ರರ ಯೋಗವಿರುವುದರಿಂದ ಶತ್ರುಗಳ ಕಾಟ, ಕೋರ್ಟ್/ಕಚೇರಿ ಅಲೆದಾಟ ಅಥವಾ ಆರೋಗ್ಯ ವೆಚ್ಚಗಳು ಹೆಚ್ಚಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಗೆ ರವಿಯು ೧೨ನೇ ಮನೆ ವ್ಯಯ ಭಾವದ ಅಧಿಪತಿ. ಅನಗತ್ಯ ಖರ್ಚುಗಳು, ಅಲೆದಾಟ ಹಾಗೂ ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗಬಹುದು.
ವೃಷಭ ರಾಶಿ
೪ನೇ ಮನೆಯ ಸುಖ, ಮಾತೃ ಭಾವಗಳ ಅಧಿಪತಿಯಾದ ರವಿಯಿಂದ ಗೃಹ ಸುಖದಲ್ಲಿ ಕೊಂಚ ಏರುಪೇರು, ತಾಯಿಯ ಆರೋಗ್ಯದ ಕಡೆ ಗಮನ ಹರಿಸಬೇಕಾಗುತ್ತದೆ.
ರವಿ ದಶೆಯ ಅಶುಭ ಪ್ರಭಾವ ಕಡಿಮೆಯಾಗಲು ನಿತ್ಯವೂ ಆದಿತ್ಯ ಹೃದಯ ಸ್ತೋತ್ರ ಪಠಿಸುವುದು, ಸೂರ್ಯನಿಗೆ ಅರ್ಘ್ಯ ನೀಡುವುದು ಹಾಗೂ ಕೆಂಪು ಬಣ್ಣದ ವಸ್ತುಗಳು/ಗೋಧಿಯನ್ನು ದಾನ ಮಾಡುವ ಅಭ್ಯಾಸವಿದ್ದರೆ ಒಳ್ಳೆಯದು.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
