2014ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth), ದೀಪಿಕಾ ಪಡುಕೋಣೆ ನಟನೆಯ ‘ಕೊಚ್ಚಾಡಿಯನ್’ (Kochadaiiyaan) ಸಿನಿಮಾ ಆಗ ದೊಡ್ಡ ಫ್ಲಾಪ್ ಆಗಿತ್ತು. ಭಾರಿ ಬಜೆಟ್ ಹಾಕಿ, ನೂತನ ತಂತ್ರಜ್ಞಾನ ಬಳಸಿ ಚಿತ್ರೀಕರಿಸಲಾಗಿದ್ದ ಆ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿದ್ದು ಮಾತ್ರವೇ ಅಲ್ಲದೆ, ಸುದೀರ್ಘವಾದ ಕಾನೂನು ಹೋರಾಟಕ್ಕೂ ಕಾರಣವಾಯ್ತು. ಇದೀಗ ಅದೇ ಸಿನಿಮಾ ಅನ್ನು ಎಐ ಮೂಲಕ ಇನ್ನಷ್ಟು ಉತ್ತಮಗೊಳಿಸಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಆದರೆ ಇದಕ್ಕೆ ತಡೆ ನೀಡಬೇಕೆಂದು ಸಿನಿಮಾಕ್ಕೆ ಹಣ ಒದಗಿಸಿದ್ದ ಫೈನ್ಯಾನ್ಶಿಯರ್ಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.
‘ಕೊಚಾಡಿಯನ್’ ಸಿನಿಮಾವನ್ನು ಎಐ ಬಳಸಿ ಉತ್ತಮಗೊಳಿಸಿ ಸಿನಿಮಾ ಅನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ‘ಕೊಚಾಡಿಯನ್’ ಸಿನಿಮಾದ ಹಕ್ಕು ಖರೀದಿ ಮಾಡಿರುವ ಸಂಸ್ಥೆಯೊಂದು ಎಐ ಬಳಸಿ ಸಿನಿಮಾದ ಗುಣಮಟ್ಟವನ್ನು ಉತ್ತಮಗೊಳಿಸಿದೆ. ಇದೀಗ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಸಿನಿಮಾಕ್ಕೆ ಆಗ ಹಣ ಸಾಲ ನೀಡಿದ್ದ ಫೈನ್ಯಾನ್ಶಿಯರ್ಗಳು ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಫೈನ್ಯಾನ್ಶಿಯರ್ಗಳ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು ಸಿನಿಮಾ ಬಿಡುಗಡೆಯನ್ನು ತಡೆಯಲು ನಿರಾಕರಿಸಿದೆ. ಆ ಮೂಲಕ ‘ಕೊಚಾಡಿಯನ್’ ಸಿನಿಮಾ ಬಿಡುಗಡೆ ಆಗುವುದು ಖಾತ್ರಿ ಆಗಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಕುಮರೇಶ್ ಬಾಬು, ‘ಪ್ರಸ್ತುತ ಚಿತ್ರದ ಹಕ್ಕುಗಳನ್ನು ಹೊಂದಿರುವವರು ಚಿತ್ರದ ಹಕ್ಕುದಾರರಾಗಿದ್ದರೂ ಸಹ, ವಾದಿಯು ಅವರ ವಿರುದ್ಧ ಯಾವುದೇ ಪರಿಹಾರವನ್ನು ಕೋರಿಲ್ಲ ಈ ಹಿನ್ನೆಲೆಯಲ್ಲಿ, ಈ ಹಂತದಲ್ಲಿ ಚಲನಚಿತ್ರದ ಮರುಬಿಡುಡೆಡೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ;ರಜನೀಕಾಂತ್ಗಾಗಿ ನಿಯಮ ಮುರಿದ ನಟ ವಿಜಯ್ ಸೇತುಪತಿ
2014ರಲ್ಲಿ ‘ಕೊಚ್ಚಾಡಿಯನ್’ ಚಿತ್ರದ ನಿರ್ಮಾಣಕ್ಕೆ ಹಣಕಾಸು ಒದಗಿಸಿದ್ದ ‘ಆಡ್ ಬ್ಯೂರೋ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಸಿನಿಮಾದ ಮರು ಬಿಡುಗಡೆ ತಡೆಯುವಂತೆ ಅರ್ಜಿ ಸಲ್ಲಿಸಿತ್ತು. 2014ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಡಿಕೊಂಡ ಒಪ್ಪಂದಗಳ ಪ್ರಕಾರ, ಆಡ್ ಬ್ಯೂರೋ ಸಂಸ್ಥೆಯು ಚಿತ್ರದ ನಿರ್ಮಾಪಕರಾದ ‘ಮೀಡಿಯಾವನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್’ಗೆ 10 ಕೋಟಿ ರೂ.ಗಳನ್ನು ನೀಡಿದ್ದರು. ಬದಲಾಗಿ, ನಿರ್ಮಾಪಕರು ಮತ್ತು ನಿರ್ದೇಶಕ ಡಾ. ಜೆ. ಮುರಳಿ ಮನೋಹರ್ ಅವರು 20.40 ಕೋಟಿ ರೂ.ಗಳನ್ನು ಮರುಪಾವತಿಸುವುದಾಗಿ ಒಪ್ಪಿಕೊಂಡಿದ್ದರು. ಅಲ್ಲದೆ, ತಮಿಳುನಾಡಿನಲ್ಲಿ ಚಿತ್ರದ ಗಳಿಕೆಯ ಮೇಲೆ ಆಡ್ ಬ್ಯೂರೋಗೆ ಹಕ್ಕುಗಳನ್ನು ನೀಡುವುದಾಗಿಯೂ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಮರುಪಾವತಿಗಾಗಿ ನೀಡಲಾಗಿದ್ದ ಚೆಕ್‌ಗಳು ನಂತರ ಬೌನ್ಸ್ ಆಗಿದ್ದವು. ಇದರಿಂದಾಗಿ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು, ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ವಿಚಾರಣೆಯಲ್ಲಿದೆ. ಇದರೊಂದಿಗೆ, ಆಡ್ ಬ್ಯೂರೋ ಸಂಸ್ಥೆಯು 2015ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ಹಣ ಮರುಪಾವತಿ ಕೋರಿ ಸಿವಿಲ್ ಮೊಕದ್ದಮೆ ಹೂಡಿತ್ತು.
ನಿರ್ಮಾಪಕರು ಮತ್ತು ನಿರ್ದೇಶಕರಲ್ಲದೆ, ಈ ಮೊಕದ್ದಮೆಯಲ್ಲಿ ಲತಾ ರಜನಿಕಾಂತ್, ಸೌಂದರ್ಯ ರಜನಿಕಾಂತ್ ಅಶ್ವಿನ್ ಮತ್ತು ಇರೋಸ್ ಇಂಟರ್‌ನ್ಯಾಷನಲ್ ಮೀಡಿಯಾ ಲಿಮಿಟೆಡ್ ಹೆಸರನ್ನು ಕೂಡ ಸೇರಿಸಲಾಗಿದೆ. ಸಿನಿಮಾದ ವಿವಾದಗಳ ಬಗ್ಗೆ ಅರಿವಿದ್ದರೂ ಸಹ ಇರೋಸ್ ಸಂಸ್ಥೆಯು ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಆಡ್ ಬ್ಯೂರೋ ಆರೋಪಿಸಿದೆ. ‘ಕೊಚ್ಚಾಡೆಯನ್’ ಚಿತ್ರವನ್ನು ಕೃತಕ ಬುದ್ಧಿಮತ್ತೆ ಬಳಸಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಶೀಘ್ರದಲ್ಲೇ ಮರುಬಿಡುಡೆಯಾಗಲಿದೆ ಎಂದು ತಿಳಿದ ನಂತರ, ಆಡ್ ಬ್ಯೂರೋ ಈ ಅರ್ಜಿಯನ್ನು ಸಲ್ಲಿಸಿತ್ತು. ಹಣ ಮರುಪಾವತಿ ಮೊಕದ್ದಮೆಯ ಅಂತಿಮ ತೀರ್ಪು ಬರುವವರೆಗೆ AI-ವರ್ಧಿತ ಆವೃತ್ತಿಯ ಬಿಡುಗಡೆ, ವಿತರಣೆ, ಸ್ಟ್ರೀಮಿಂಗ್ ಅಥವಾ ಇನ್ಯಾವುದೇ ವಾಣಿಜ್ಯ ಬಳಕೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿತ್ತು. ಆದರೆ ಮದ್ರಾಸ್ ನ್ಯಾಯಾಲಯವು ಬಿಡುಗಡೆಗೆ ತಡೆ ನೀಡಿದ್ದು, ‘ಕೊಚಾಡಿಯನ್’ ಸಿನಿಮಾ ಮರು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
