ಉಸಿರಾಟ ಸಂಬಂಧಿ ಕಾಯಿಲೆಗಳು: ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ; ಮಾರ್ಗಸೂಚಿ ಪ್ರಕಟ – Kannada News | Feeding Pigeons in Public Places Prohibited: Health Department Issues Public Safety Guidelines

ಬೆಂಗಳೂರು, ಜುಲೈ 23: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪಾರಿವಾಳಗಳಿಗೆ ಆಹಾರ (pigeon feeding) ಹಾಕುವುದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ನಿಯಂತ್ರಣವಿಲ್ಲದೆ ಆಹಾರ ಹಾಕುವುದರಿಂದ ಪಾರಿವಾಳಗಳ ಸಂಖ್ಯೆ ಹೆಚ್ಚಳವಾಗಿ ಅವುಗಳ ಮಲ ಮತ್ತು ಗರಿಗಳಿಂದ ಉಸಿರಾಟ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಆರೋಗ್ಯಕ್ಕೆ ಅಪಾಯ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ಪರಿಣಾಮ

ಪಾರಿವಾಳಗಳ ಮಲ ಮತ್ತು ಗರಿಗಳಿಂದ ಹರಡುವ ಸೂಕ್ಷ್ಮ ಕಣಗಳು ಶ್ವಾಸಕೋಶದ ಉರಿಯೂತ, ಅಲರ್ಜಿ ಹಾಗೂ ತೀವ್ರ ಉಸಿರಾಟದ ತೊಂದರೆಗೆ ಕಾರಣವಾಗುತ್ತಿವೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಈಗಾಗಲೇ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದರಿಂದ ಹೆಚ್ಚಿನ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ಸ್ಥಳೀಯ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಎಚ್ಚರ ಎಚ್ಚರ: ಇನ್ಮುಂದೆ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ, ಉಲ್ಲಂಘನೆ ಮಾಡಿದ್ರೆ ಜೈಲು

ಹೊಸ ಮಾರ್ಗಸೂಚಿಯಲ್ಲೇನಿದೆ?

  • ಸ್ಥಳ ಮತ್ತು ಸಮಯದ ಮಿತಿ: ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನ ಹಾಗೂ ಖಾಸಗಿ ಜಾಗಗಳಲ್ಲಿ ಅನಿಯಂತ್ರಿತವಾಗಿ ಆಹಾರ ಹಾಕುವಂತಿಲ್ಲ. ಸ್ಥಳೀಯ ಸಂಸ್ಥೆಗಳು ಗುರುತಿಸಿದ ನಿಗದಿತ ಸ್ಥಳಗಳಲ್ಲಿ ಮಾತ್ರ, ಅದೂ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ಆಹಾರ ನೀಡಲು ಅನುಮತಿ ನೀಡಲಾಗಿದೆ.
  • ಎನ್‌ಜಿಒಗಳಿಗೆ ಜವಾಬ್ದಾರಿ: ಆಹಾರ ನೀಡುವ ಜವಾಬ್ದಾರಿಯನ್ನು ಮಾನ್ಯತೆ ಪಡೆದ ಎನ್‌ಜಿಒ ಅಥವಾ ದತ್ತಿ ಸಂಸ್ಥೆಗಳು ವಹಿಸಿಕೊಳ್ಳಬೇಕು. ನಿಗದಿತ ಸ್ಥಳದ ಸ್ವಚ್ಛತೆ, ನಿರ್ವಹಣೆ ಹಾಗೂ ಸಾರ್ವಜನಿಕರ ದೂರುಗಳನ್ನು ಈ ಸಂಸ್ಥೆಗಳೇ ನಿರ್ವಹಿಸಬೇಕು.
  • ಅಪಾರ್ಟ್‌ಮೆಂಟ್ ಮತ್ತು ಮನೆಗಳಿಗೆ ಸೂಚನೆ: ಮನೆಗಳ ಮೇಲ್ಚಾವಣಿ (ಟೆರೇಸ್), ಬಾಲ್ಕನಿ ಹಾಗೂ ಕಟ್ಟಡಗಳ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಪಾರಿವಾಳಗಳಿಗೆ ಆಹಾರ ಹಾಕದಂತೆ ನಿವಾಸಿಗಳಿಗೆ ಹಾಗೂ ಅಪಾರ್ಟ್‌ಮೆಂಟ್ ಸಂಘಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
  • ವಿಮಾನ ಸುರಕ್ಷತೆ: ವಿಮಾನ ಯಾನಕ್ಕೆ ಧಕ್ಕೆಯಾಗದಂತೆ ವಿಮಾನ ನಿಲ್ದಾಣಗಳ ಸುತ್ತಮುತ್ತ ಪಾರಿವಾಳಗಳಿಗೆ ಆಹಾರ ನೀಡುವ ಕೇಂದ್ರಗಳನ್ನು ಸ್ಥಾಪಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಇನ್ನು ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಬ್ಯಾನರ್, ಮಾಹಿತಿ ಫಲಕ ಹಾಗೂ ಡಿಜಿಟಲ್ ಅಭಿಯಾನಗಳನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *