ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ (IT Returns) ಒಂದಷ್ಟು ತಪ್ಪು ತಿಳಿವಳಿಕೆ ಬಹಳ ಜನರಲ್ಲಿ ಇದೆ. ಐಟಿಆರ್ ಸಲ್ಲಿಕೆ ಯಶಸ್ವಿಯಾಗಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವುದು ತಪ್ಪು. ತಜ್ಞರ ಪ್ರಕಾರ, ಐಟಿಆರ್ ಸಲ್ಲಿಸಿದ ನಂತರವೂ ಪರಿಶೀಲನೆಗಳು ನಡೆಯುತ್ತಿರುತ್ತವೆ. ನಿಮ್ಮ ಹಿಂದಿನ ವರ್ಷಗಳಲ್ಲಿ ಗಮನಾರ್ಹವಾದ ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ಇಲಾಖೆಯು ನಿಮ್ಮ ಐಟಿಆರ್ಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಹೀಗಾಗಿ, ಐಟಿಆರ್ ಸಲ್ಲಿಕೆಯಾಗಿ 6 ವರ್ಷಗಳವರೆಗೆ ಕೆಲ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ತಜ್ಞರು ಹೇಳುತ್ತಾರೆ.
- ಐಟಿಆರ್ ಪ್ರತಿ: ನೀವು ಅಸೆಸ್ಮೆಂಟ್ ವರ್ಷಕ್ಕೆ ಸಲ್ಲಿಸಿದ ಐಟಿಆರ್ ಫಾರ್ಮ್ ಅನ್ನು ಇಟ್ಟುಕೊಂಡಿರಬೇಕು. ಇದು ಒಂದು ರೀತಿಯಲ್ಲಿ ಚೆಕ್ಲಿಸ್ಟ್ ಇದ್ದಂತೆ. ನೀವು ಏನೇನು ನಮೂದಿಸಿದ್ದೀರಿ ಎಂಬುದನ್ನು ನೋಡಲು ಈ ಫಾರ್ಮ್ ಅಗತ್ಯ.
- ITR-V ಸ್ವೀಕೃತಿ: ನೀವು ಸಲ್ಲಿಸಿದ ರಿಟರ್ನ್ ಯಶಸ್ವಿಯಾಗಿದ್ದು, ಇ-ವೆರಿಫಿಕೇಶನ್ ಪಡೆದಿರುವುದಕ್ಕೆ ಇದು ಸಾಕ್ಷಿ. ಯಾವ ಸಮಯಕ್ಕೆ ಸಲ್ಲಿಕೆಯಾಯಿತು ಎನ್ನುವುದಕ್ಕೆ ಇದು ಸಾಕ್ಷಿಯಾಗಿರುತ್ತದೆ.
- ಟಿಡಿಎಸ್ ಸರ್ಟಿಫಿಕೇಟ್, ಫಾರ್ಮ್ 26ಎಎಸ್: ನಿಮ್ಮ ಪ್ಯಾನ್ ಬಳಸಿ ಮಾಡಲಾದ ವಹಿವಾಟುಗಳು, ಪಾವತಿಗಳು ಎಐಎಸ್ ರೆಕಾರ್ಡ್, ಫಾರ್ಮ್ 26ಎಎಸ್, ಟಿಡಿಎಸ್ ಸರ್ಟಿಫಿಕೇಟ್ಗಳಲ್ಲಿ ನಮೂದಾಗಿರುತ್ತವೆ. ಈ ದಾಖಲೆಗಳು ನಿಮ್ಮ ತೆರಿಗೆ ಪಾವತಿಗೆ ಸಾಕ್ಷಿಯಾಗಿರುತ್ತವೆ.
- ಬ್ಯಾಂಕ್ ಸ್ಟೇಟ್ಮೆಂಟ್ಸ್: ನಿಮ್ಮ ಖಾತೆಗಳಿಗೆ ಹಣ ಎಲ್ಲಿಂದ, ಎಷ್ಟೆಷ್ಟು ಬಂತು ಎಂಬುದಕ್ಕೆ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ಗಳು ಸಾಕ್ಷಿಯಾಗಿರುತ್ತವೆ. ತೆರಿಗೆ ಅಧಿಕಾರಿಗಳು ಬೇಗ ಕನ್ವಿನ್ಸ್ ಆಗುವುದು ಬ್ಯಾಂಕ್ ಸ್ಟೇಟ್ಮೆಂಟ್ಸ್ನಿಂದಲೇ.
- ಆಸ್ತಿ ಖರೀದಿ ಪತ್ರ, ಕ್ಯಾಪಿಟಲ್ ಗೇನ್: ಆಸ್ತಿ ಖರೀದಿ ಪತ್ರ, ಆಸ್ತಿ ಮಾರಾಟ ಪತ್ರ, ಹೋಮ್ ಲೋನ್ ಸ್ಟೇಟ್ಮೆಂಟ್, ಕ್ಯಾಪಿಟಲ್ ಗೇನ್ಸ್ ವರ್ಕ್ಶೀಟ್ ಇತ್ಯಾದಿ ಕಾಗದಪತ್ರಗಳನ್ನು ಇಟ್ಟುಕೊಂಡಿರುವುದು ಉತ್ತಮ.
- ಫಾರ್ಮ್ 16/ ಸ್ಯಾಲರಿ ಸರ್ಟಿಫಿಕೇಟ್: ನಿಮ್ಮ ಸಂಬಳದ ಆದಾಯ, ಸಂಬಳದಲ್ಲಿ ಮುರಿದುಕೊಳ್ಳಲಾದ ತೆರಿಗೆಯನ್ನು ಈ ದಾಖಲೆಗಳು ತೋರಿಸುತ್ತವೆ. ಸರಿಯಾದ ಮೊತ್ತದ ರೀಫಂಡ್ ಕ್ಲೇಮ್ ಮಾಡಲಾಗಿದೆಯಾ ಎಂದು ಪರಿಶೀಲಿಸಲು ಇರುವ ದಾಖಲೆಗಳಲ್ಲಿ ಇದೂ ಒಂದು.
ಇದನ್ನೂ ಓದಿ: ತಿಳಿವಳಿಕಸ್ಥರಿಗೆ ಪಿಎಫ್ ಸಾಕು ಎನ್ನುತ್ತಿದೆ ಇಪಿಎಫ್ಒ; ಇಪಿಎಫ್ ಮತ್ತು ವಿಪಿಎಫ್ ಸಂಯೋಜನೆಯಿಂದ ಕೋಟಿ ಗಳಿಕೆ ಹೇಗೆ ಸಾಧ್ಯ?
ನೀವು ಮನೆ, ಜಮೀನು, ನಿವೇಶನದಂತಹ ಚಿರಾಸ್ತಿಯನ್ನು ಮಾರಾಟ ಮಾಡಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ನೀವು ಹಿಂದೆ ಖರೀದಿಸಿದ ಆಸ್ತಿಯ ದಾಖಲೆಯಲ್ಲಿ ನಮೂದಾಗಿರುವ ಹಣವೆಷ್ಟು, ಕ್ಯಾಪಿಟಲ್ ಗೇನ್ ಎಷ್ಟು, ಅದಕ್ಕೆ ತೆರಿಗೆ ಎಷ್ಟು ಎಂದು ಲೆಕ್ಕ ಮಾಡಬೇಕಾಗುತ್ತದೆ. ಹೀಗಾಗಿ, ಆ ದಾಖಲೆಗಳು ಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
