ಪ್ರಭಾಸ್ ನಟಿಸಿ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮಾಡಿದ್ದ ‘ಸಲಾರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿತ್ತು. ಕನ್ನಡದ ‘ಉಗ್ರಂ’ ಸಿನಿಮಾದ ರೀಮೇಕ್ ಆಗಿದ್ದ ಈ ಸಿನಿಮಾ ‘ಉಗ್ರಂ’ ಸಿನಿಮಾದ ಅಪ್ಡೇಟೆಡ್ ವರ್ಷನ್ ರೀತಿ ಇತ್ತು. ‘ಉಗ್ರಂ’ ಸಿನಿಮಾದ ಕತೆಯನ್ನೇ ತುಸು ತಿರುಚಿ ಭಾರಿ ಅದ್ಧೂರಿಯಾಗಿ ‘ಸಲಾರ್’ ಸಿನಿಮಾ ಮಾಡಿದ್ದರು ಪ್ರಶಾಂತ್ ನೀಲ್, ಜೊತೆಗೆ ಕತೆಗೆ ಸಣ್ಣ ಟ್ವಿಸ್ಟ್ ಸಹ ನೀಡಿದ್ದರು. ಸಿನಿಮಾ ಬಿಡುಗಡೆ ಆದ ಬಳಿಕ, ‘ಸಲಾರ್ 2’ ಸಿನಿಮಾ ನಿಂತು ಹೋಯ್ತು, ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳೆಲ್ಲ ಹರಿದಾಡಿದ್ದವು. ‘ಸಲಾರ್ 2’ ಸಿನಿಮಾ ಪ್ರಾರಂಭವೇ ಆಗುವುದಿಲ್ಲ ಎಂದೆಲ್ಲ ಎನ್ನಲಾಗಿತ್ತು. ಆದರೆ ಈಗ ಕೊನೆಗೂ ಸಿನಿಮಾ ಶುರುವಾಗುತ್ತಿದೆ.
‘ಸಲಾರ್’ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳ ಬಳಿಕ ‘ಸಲಾರ್ 2’ ಸಿನಿಮಾ ಶುರುವಾಗುತ್ತಿದೆ. ಪ್ರಶಾಂತ್ ನೀಲ್ ಕೊನೆಗೂ ‘ಸಲಾರ್ 2’ ಸಿನಿಮಾದತ್ತ ಗಮನ ಹರಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಜೊತೆಗೆ ಜೂ ಎನ್ಟಿಆರ್ ಅವರಿಗೆ ಇತ್ತೀಚೆಗಷ್ಟೆ ಭುಜದ ಆಪರೇಷನ್ ಸಹ ಆಗಿರುವ ಕಾರಣ ಪ್ರಶಾಂತ್ ಅವರಿಗೆ ತುಸು ವಿಶ್ರಾಂತಿ ದೊರೆತಿದೆ. ಈ ವಿರಾಮದಲ್ಲಿ ಅವರು ‘ಸಲಾರ್ 2’ ಸಿನಿಮಾದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
ಮೂಲಗಳ ಪ್ರಕಾರ, ಪ್ರಶಾಂತ್ ನೀಲ್, ‘ಸಲಾರ್ 2’ ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭ ಮಾಡಿದ್ದಾರೆ. ಲೊಕೇಶನ್, ಸೆಟ್ ಡಿಸೈನ್, ಚಿತ್ರಕತೆಯ ಫೈನ್ ಟ್ಯೂನಿಂಗ್, ಕಲಾವಿದರ ಡೇಟ್ಸ್, ಚಿತ್ರೀಕರಣಕ್ಕೆ ಬೇಕಾದ ಹಲವು ಕೆಲಸಗಳನ್ನು ಪ್ರಶಾಂತ್ ನೀಲ್ ಅವರ ತಂಡ ಪ್ರಾರಂಭಿಸಿದೆ. ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಮುಗಿದು ಸಿನಿಮಾ ಬಿಡುಗಡೆ ಆಗುತ್ತಲೇ ‘ಸಲಾರ್ 2’ ಸಿನಿಮಾ ಪ್ರಾರಂಭಿಸುವ ಉದ್ದೇಶ ಪ್ರಾಶಾಂತ್ ನೀಲ್ ಅವರಿಗೆ ಇದೆ.
ಇದನ್ನೂ ಓದಿ:ಶ್ರೀಲಂಕಾಕ್ಕೆ ಹೊರಟ ಪ್ರಶಾಂತ್ ನೀಲ್ ಮತ್ತು ಜೂ ಎನ್ಟಿಆರ್
ಪ್ರಭಾಸ್ ಸಹ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ‘ಫೌಜಿ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಇವುಗಳು ಮುಗಿದ ಬಳಿಕವಷ್ಟೆ ಅವರು ‘ಸಲಾರ್ 2’ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
