ಕರ್ನಾಟಕ, ಆ.14: ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಸ್ಥಿರವಾಗಿದೆ. ವಿಜಯಪುರದ ಆಲಮಟ್ಟಿ ಹಾಗೂ ಯಾದಗಿರಿಯ ಬಸವಸಾಗರ (ನಾರಾಯಣಪುರ) ಜಲಾಶಯಗಳು ಬಹುತೇಕ ಭರ್ತಿ ಹಂತವನ್ನು ತಲುಪಿವೆ. ಕರ್ನಾಟಕದ ಪ್ರಮುಖ ಜಲಾಶಯಗಳಾದ ಕಬಿನಿ, ಬಸವಸಾಗರ, ಕೆಆರ್‌ಎಸ್, ಆಲಮಟ್ಟಿ ಹಾಗೂ ಹೇಮಾವತಿ ಜಲಾಶಯಗಳ ಇಂದಿನ (ಆಗಸ್ಟ್ 14) ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.
ಆಲಮಟ್ಟಿ ಜಲಾಶಯ (ವಿಜಯಪುರ):
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯವು ಗರಿಷ್ಠ ಮಟ್ಟವಾದ 519.60 ಮೀಟರ್‌ಗೆ ತಲುಪಲು ಇನ್ನು ಕೆಲವೇ ಇಂಚುಗಳು ಬಾಕಿಯಿದ್ದು, ಪ್ರಸ್ತುತ 519.45 ಮೀಟರ್ ತಲುಪಿದೆ. ಜಲಾಶಯಕ್ಕೆ 25,023 ಕ್ಯೂಸೆಕ್ ಒಳಹರಿವಿದ್ದು, ನದಿಗೆ 19,155 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಬಸವಸಾಗರ ಜಲಾಶಯ (ಯಾದಗಿರಿ – ನಾರಾಯಣಪುರ):
ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ 492.25 ಮೀಟರ್ ಮಟ್ಟದ ಜಲಾಶಯದಲ್ಲಿ ಪ್ರಸ್ತುತ 492.23 ಮೀಟರ್ ನೀರಿದ್ದು, 18,000 ಕ್ಯೂಸೆಕ್ ಒಳಹರಿವು ಹಾಗೂ 6,000 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ಕಬಿನಿ ಜಲಾಶಯ (ಮೈಸೂರು):
ಹೆಚ್.ಡಿ. ಕೋಟೆಯ ಕಬಿನಿ ಜಲಾಶಯ ಪ್ರದೇಶದಲ್ಲಿ 32 ಮಿ.ಮೀ ಮಳೆಯಾಗಿದ್ದು, ಜಲಾಶಯದಲ್ಲಿ 18.30 ಟಿಎಂಸಿ ನೀರು ಸಂಗ್ರಹವಾಗಿದೆ (ಲೈವ್ ಸ್ಟೋರೇಜ್: 8.49 TMC). 8,230 ಕ್ಯೂಸೆಕ್ ಒಳಹರಿವಿದ್ದರೆ, ನದಿಗೆ 10,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಹೇಮಾವತಿ ಜಲಾಶಯ (ಹಾಸನ – ಗೊರೂರು):
ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 31.884 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 36.803 ಟಿಎಂಸಿ ನೀರಿತ್ತು. ಪ್ರಸ್ತುತ 4,264 ಕ್ಯೂಸೆಕ್ ಒಳಹರಿವಿದ್ದು, ನದಿಗೆ 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಇದನ್ನೂ ಓದಿ: ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ; ಮನವಿಯಂತೆ ಜಮೀರ್ ಹೆಸರನ್ನ ಕೈಬಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೆಆರ್‌ಎಸ್ ಜಲಾಶಯ (ಮಂಡ್ಯ):
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ 109.80 ಅಡಿ ನೀರಿದ್ದು, ಒಟ್ಟು 31.521 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂಗೆ 3,150 ಕ್ಯೂಸೆಕ್ ಒಳಹರಿವಿದ್ದು, 2,310 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯ (ಶಿವಮೊಗ್ಗ)
ಲಿಂಗನಮಕ್ಕಿ ಡೆಮ್ಗೆ ಇಂದು (ಆಗಸ್ಟ್ 14, 2026) ಬೆಳಿಗ್ಗೆ 8:00 ಗಂಟೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 1793.60 ಅಡಿಗಳಿಗೆ ತಲುಪಿದೆ. ಗರಿಷ್ಠ ನೀರಿನ ಮಟ್ಟ 1819.00 ಅಡಿ, ಇಂದಿನ ನೀರಿನ ಮಟ್ಟ 1793.60 ಅಡಿ, ಇಂದಿನ ಒಳಹರಿವು 13,079 ಕ್ಯೂಸೆಕ್.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
