
ಬೆಂಗಳೂರು, ಮಾರ್ಚ್ 10: ಮಲ್ಲೇಶ್ವರದಲ್ಲಿರುವ (Malleshwaram) ಮೈಸೂರು ಲ್ಯಾಂಪ್ ವರ್ಕರ್ಸ್ ಲಿಮಿಟೆಡ್ ಪ್ರದೇಶದಲ್ಲಿ ಸಾವಿರಾರು ಮರಗಳಿರುವ ಹಚ್ಚಹಸಿರು ವಾತಾವರಣದ ನಡುವೆ ದೊಡ್ಡ ಮಟ್ಟದ ಕಟ್ಟಡ ನಿರ್ಮಾಣದ ಯೋಜನೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ನಗರದ ಅಭಿವೃದ್ಧಿಗೆ ಈ ಯೋಜನೆ ಅಗತ್ಯವಾಗಿದ್ದು, ಎಲ್ಲಾ ಅಂಶಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗೆ ಬಲಿಯಾಗುತ್ತವೆ ಸಾವಿರಾರು ಮರಗಳು
ಹಲವು ವರ್ಷಗಳಿಂದ ಬಳಕೆಯಾಗದೆ ಇರುವ ಈ ಸುಮಾರು 22 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕನ್ವೆನ್ಷನ್ ಸೆಂಟರ್, ಎಕ್ಸಿಬಿಷನ್ ಸೆಂಟರ್, ಫೈವ್ ಸ್ಟಾರ್ ಹೋಟೆಲ್ ಹಾಗೂ ಅಂಡರ್‌ಗ್ರೌಂಡ್ ಪಾರ್ಕಿಂಗ್ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಇತ್ತೀಚಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕೂಡ ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಸುಮಾರು 10 ಸಾವಿರ ಮಂದಿ ಒಂದೇ ಸಮಯದಲ್ಲಿ ಕುಳಿತುಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುವ ಸುಸಜ್ಜಿತ ಕನ್ವೆನ್ಷನ್ ಸೆಂಟರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಮಾವೇಶಗಳು ನಡೆಯಲು ಬೆಂಗಳೂರಿನಲ್ಲಿ ಸೂಕ್ತ ಸೌಲಭ್ಯಗಳ ಕೊರತೆ ಇದೆ ಎಂಬ ಕಾರಣವನ್ನು ಸರ್ಕಾರ ಮುಂದಿಟ್ಟಿದೆ. ಆದರೆ ಈ ಯೋಜನೆ ಜಾರಿಯಾಗಬೇಕಾದರೆ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿತಗೊಳಿಸುವ ಸಾಧ್ಯತೆ ಇರುವುದರಿಂದ ಪರಿಸರ ಪ್ರೇಮಿಗಳಲ್ಲಿ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ ಹೇಳಿದ್ದು ಗಿಳಿಶಾಸ್ತ್ರ, ಇಕ್ಕಿದ್ದು ದುಡ್ಡು, ಚಿನ್ನಾಭರಣಕ್ಕೆ ಗಾಳ! ಐಟಿ ಅಧಿಕಾರಿಗೆ ಲಕ್ಷಾಂತರ ರೂ. ಪಂಗನಾಮ
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿ ಜೋಸೆಫ್, ಈಗಾಗಲೇ ಬೆಂಗಳೂರಿನಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹಸಿರು ಪ್ರದೇಶವನ್ನು ಕಟ್ಟಡಗಳಿಗಾಗಿ ಬಳಸುವುದು ಸರಿಯಲ್ಲ ಎಂದಿದ್ದಾರೆ. ಈ ಜಾಗವನ್ನು ಉದ್ಯಾನವನವಾಗಿ ಅಭಿವೃದ್ಧಿಪಡಿಸಿದರೆ ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅರುಣ್ ಕುಮಾರ್ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.