ಐಪಿಎಲ್ ಎಂದರೆ ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಸಮಬಲದ ಹೋರಾಟ ಎಂದು ನೀವು ಭಾವಿಸಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ! ಆಧುನಿಕ ಕ್ರಿಕೆಟ್‌ನ ಈ ಚುಟುಕು ಸಮರ ಈಗ ಕೇವಲ ಕ್ರೀಡೆಯಾಗಿ ಉಳಿದಿಲ್ಲ, ಬದಲಾಗಿ ಕೋಟಿ ಕೋಟಿ ಹಣ ಹರಿಯುವ ಒಂದು ಬೃಹತ್ ಉದ್ಯಮವಾಗಿ ಮಾರ್ಪಟ್ಟಿದೆ. ಹೀಗಂದಿರುವುದು ಮತ್ಯಾರೂ ಅಲ್ಲ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ಕೋಚ್ ಹಾಗೂ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್.
ಮನೋರಂಜನೆಯೇ ಇಲ್ಲಿ ಮುಖ್ಯ:
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ 244 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನಂತರ ಮಾತನಾಡಿದ ಮುತ್ತಯ್ಯ ಮುರಳೀಧರನ್, ಪ್ರೇಕ್ಷಕರು ಮೈದಾನಕ್ಕೆ ಬರುವುದು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ನೋಡಲು. ಪಿಚ್ ಬೌಲರ್‌ಗಳಿಗೆ ಪೂರಕವಾಗಿದ್ದರೆ, ಪಂದ್ಯಗಳು ‘ಬೋರಿಂಗ್’ ಆಗುತ್ತವೆ ಎಂದು ಪ್ರಾಯೋಜಕರು ಮತ್ತು ಸಂಘಟಕರು ಭಾವಿಸುತ್ತಾರೆ. ಆದ್ದರಿಂದ, ಬ್ಯಾಟರ್‌ಗಳಿಗೆ ಪೂರಕವಾದ ಪಿಚ್‌ಗಳನ್ನು ಸಿದ್ಧಪಡಿಸುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೌಲರ್‌ಗಳ ಸವಾಲು:
ಈ ಬಾರಿ ರನ್ ಗತಿ ಹೆಚ್ಚಾಗಲು ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವೇ ಮುಖ್ಯ ಕಾರಣ ಎಂದು ಮುತ್ತಯ್ಯ ಮುರಳಿಧರನ್ ಬೊಟ್ಟು ಮಾಡಿದ್ದಾರೆ. ಈ ನಿಯಮದಿಂದಾಗಿ ತಂಡಗಳಿಗೆ ಹೆಚ್ಚುವರಿ ಬ್ಯಾಟರ್ ಲಭ್ಯವಾಗುತ್ತಿದ್ದು, ವಿಕೆಟ್ ಬೀಳುವ ಭಯವಿಲ್ಲದೆ ಬ್ಯಾಟರ್‌ಗಳು ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡುತ್ತಿದ್ದಾರೆ. ವೈಭವ್ ಸೂರ್ಯವಂಶಿಯಂತಹ ಯುವ ಆಟಗಾರರು ಬುಮ್ರಾದಂತಹ ದಿಗ್ಗಜ ಬೌಲರ್‌ಗಳಿಗೂ ಗೌರವ ನೀಡದೆ ಆಡುತ್ತಿರುವುದು ಕ್ರಿಕೆಟ್ ಬದಲಾಗುತ್ತಿರುವುದಕ್ಕೆ ಸಾಕ್ಷಿ ಎಂದಿದ್ದಾರೆ. ಇವುಗಳನ್ನೆಲ್ಲಾ ಎದುರಿಸುವುದು ಪ್ರಸ್ತುತ ಬೌಲರ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ನಾನು ಅಥವಾ ಶೇನ್ ವಾರ್ನ್ ಈ ಕಾಲದಲ್ಲಿ ಬೌಲಿಂಗ್ ಮಾಡಿದ್ದರೂ ನಮಗೂ ಕೂಡ ಇದೇ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ಹೇಳುವ ಮೂಲಕ ಬೌಲರ್‌ಗಳ ಅಸಹಾಯಕತೆಯನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಬೌಲರ್‌ಗಳು ಈ ಪರಿಸ್ಥಿತಿಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ.
ಐಪಿಎಲ್ ಎಂಬುದು ದೊಡ್ಡ ಬಿಸಿನೆಸ್ ಆಗಿರುವುದರಿಂದ ಬೌಲರ್‌ಗಳು ತಮ್ಮ ಕೌಶಲ್ಯವನ್ನು ಬದಲಾಯಿಸಿಕೊಂಡು, ರನ್ ನಿಯಂತ್ರಿಸುವುದನ್ನೇ ಸಾಧನೆ ಎಂದು ಭಾವಿಸಬೇಕಿದೆ ಎಂದು ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.
ಇದನ್ನೂ ಓದಿ: ರೋವ್‌ಮನ್ ಪೊವೆಲ್ ಹಿಡಿದ ‘ಅಸಾಧ್ಯ’ ಕ್ಯಾಚ್‌ಗೆ ಕ್ರಿಕೆಟ್ ಲೋಕ ಫಿದಾ!
ಒಟ್ಟಾರೆಯಾಗಿ, ಐಪಿಎಲ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವು ಹಣಕಾಸಿನ ಲಾಭ ಮತ್ತು ಪ್ರೇಕ್ಷಕರ ಮನೋರಂಜನೆಯ ಮುಂದೆ ಮರೆಯಾಗುತ್ತಿದೆ ಎಂಬುದು ಮುತ್ತಯ್ಯ ಮುರಳಿಧರನ್ ಅವರ ಮಾತಿನ ಸಾರಾಂಶವಾಗಿದೆ. ಸ್ಪಿನ್ ದಿಗ್ಗಜನ ಹೇಳಿಕೆಯು ಬೌಲರ್‌ಗಳ ಅಸಹಾಯಕತೆಯನ್ನು ಎತ್ತಿ ತೋರಿಸಿದೆ. ಇದಾಗ್ಯೂ ಐಪಿಎಲ್ನ ಈ ಬಿಸಿನೆಸ್ ಮಾಡೆಲ್ ಬದಲಾಗುವ ಯಾವುದೇ ಸೂಚನೆ ಇಲ್ಲ. ಹೀಗಾಗಿ ಐಪಿಎಲ್ ಅಂಗಳದಲ್ಲಿ ಬೌಲರ್‌ಗಳ ದಂಡನೆ ಮುಂದುವರೆಯುವ ಸಾಧ್ಯತೆಯೇ ಹೆಚ್ಚು.