ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ಇದೀಗ ರೋಚಕ ಘಟ್ಟಕ್ಕೆ ತಲುಪಿದೆ. ಜೂನ್ 28ರ ಭಾನುವಾರದಂದು ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗ್ರೂಪ್ ‘ಎ’ ಅಂತಿಮ ಲೀಗ್ ಪಂದ್ಯವು ಕೇವಲ ಟೀಮ್ ಇಂಡಿಯಾ ಅದೃಷ್ಟವನ್ನಷ್ಟೇ ಅಲ್ಲ, ಸೌತ್ ಆಫ್ರಿಕಾ ತಂಡದ ಸೆಮಿಫೈನಲ್ ಭವಿಷ್ಯವನ್ನೂ ನಿರ್ಧರಿಸಲಿದೆ. ಅಂದರೆ ಗ್ರೂಪ್- ಎ ಯಿಂದ ಈ ಬಾರಿ ಸೆಮಿಫೈನಲ್ಗೇರುವ ತಂಡಗಳಾವುವು ಎಂಬುದು ಭಾನುವಾರ ನಿರ್ಧಾರವಾಗಲಿದೆ.
- ಲೀಗ್ ಹಂತದ ಪಂದ್ಯಗಳ ಮುಕ್ತಾಯದ ಬಳಿಕ ಗ್ರೂಪ್ ಪಟ್ಟಿಯ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್ಗೇರಲಿದೆ.
- ಗ್ರೂಪ್ ‘ಎ’ ಅಂಕ ಪಟ್ಟಿಯಲ್ಲಿ ಸದ್ಯ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಸೌತ್ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ.
ಟೀಮ್ ಇಂಡಿಯಾದ ಲೆಕ್ಕಾಚಾರ:
ಭಾರತ ತಂಡವು ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮ್ಯಾಚ್ನಲ್ಲಿ ಗೆಲ್ಲಲೇಬೇಕು. ಅತ್ತ ಆಸ್ಟ್ರೇಲಿಯಾ ತಂಡ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ಗೇರಲಿದೆ. ಒಂದು ವೇಳೆ ಟೀಮ್ ಇಂಡಿಯಾ ಸೋತರೆ ಸೆಮಿಫೈನಲ್ ರೇಸ್ನಿಂದ ಹೊರಬೀಳುವುದಿಲ್ಲ. ಬದಲಾಗಿ ಸೌತ್ ಆಫ್ರಿಕಾ ತಂಡದ ಕೊನೆಯ ಮ್ಯಾಚ್ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಅದರಂತೆ ಟೀಮ್ ಇಂಡಿಯಾದ ಸೆಮಿಫೈನಲ್ ಸಮೀಕರಣ ಈ ಕೆಳಗಿನಂತಿದೆ…
- ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ: ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ಪಡೆಯನ್ನು ಸೋಲಿಸಿದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನೆಟ್ ರನ್ ರೇಟ್ ಮತ್ತಷ್ಟು ಉತ್ತಮಗೊಳ್ಳುವುದರಿಂದ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತವಾಗಲಿದೆ.
- ಆಸ್ಟ್ರೇಲಿಯಾ ವಿರುದ್ಧ ಸೋತರೆ: ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋತರೆ ಸೆಮಿಫೈನಲ್ ರೇಸ್ನಿಂದ ಹೊರಬೀಳುವುದಿಲ್ಲ. ಬದಲಾಗಿ ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾ ತಂಡ ಸೋಲುವುದನ್ನು ಎದುರು ನೋಡಬೇಕು.
ಸೌತ್ ಆಫ್ರಿಕಾ ಲೆಕ್ಕಾಚಾರ:
ಒಂದು ವೇಳೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದರೆ, ಸೌತ್ ಆಫ್ರಿಕಾ ತಂಡವು ಟೂರ್ನಿಯಿಂದ ಹೊರಬೀಳುವ ಸಾಧ್ಯತೆಯಿದೆ. ಏಕೆಂದರೆ ಟೀಮ್ ಇಂಡಿಯಾ ಗೆದ್ದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಅತ್ತ ಸೌತ್ ಆಫ್ರಿಕಾ ಬಾಂಗ್ಲಾದೇಶ್ ತಂಡವನ್ನು ಮಣಿಸಿದರೆ ಒಟ್ಟು ಅಂಕಗಳ ಸಂಖ್ಯೆ 8 ಕ್ಕೇರಲಿದೆ.
ಆದರೆ ಇತ್ತ ಟೀಮ್ ಇಂಡಿಯಾದ ನೆಟ್ ರನ್ ರೇಟ್ ಉತ್ತಮವಾಗಿರುವುದರಿಂದ ಭಾರತ ತಂಡವು ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಸೆಮಿಫೈನಲ್ಗೇರಬಹುದು. ಪ್ರಸ್ತುತ ಮೂರು ತಂಡಗಳ ನೆಟ್ ರನ್ ರೇಟ್ ಈ ಕೆಳಗಿನಂತಿದೆ…
- ಆಸ್ಟ್ರೇಲಿಯಾ: +4.724
- ಭಾರತ: +2.268
- ಸೌತ್ ಆಫ್ರಿಕಾ: +0.734
ಭಾರತದ ನೆಟ್ ರನ್ ರೇಟ್ (+2.268) ಗಿಂತ ಸೌತ್ ಆಫ್ರಿಕಾದ ನೆಟ್ ರನ್ ರೇಟ್ (+0.734) ತೀರಾ ಕಡಿಮೆಯಿದ್ದು, ಹೀಗಾಗಿ ಭಾರತ ಗೆದ್ದರೆ ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚು.
ಅತ್ತ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಸೋತರೂ ಉತ್ತಮ ನೆಟ್ ರನ್ ರೇಟ್ (+4.724) ಕಾರಣದಿಂದಾಗಿ ಅವರು ಅಗ್ರಸ್ಥಾನದಲ್ಲೇ ಉಳಿದು ಸೆಮಿಫೈನಲ್ಗೇರಲಿದ್ದಾರೆ.
ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಆಸೀಸ್ ಪಡೆಯ ಗೆಲುವನ್ನು ಸೌತ್ ಆಫ್ರಿಕಾ ತಂಡ ಎದುರು ನೋಡಲಿದೆ.
ಒಂದು ವೇಳೆ ಟೀಮ್ ಇಂಡಿಯಾ ಸೋತರೆ, ಸೌತ್ ಆಫ್ರಿಕಾ ತಂಡವು ಕೊನೆಯ ಮ್ಯಾಚ್ನಲ್ಲಿ ಗೆದ್ದರೆ ಸಾಕು. ಈ ಮೂಲಕ 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರುವ ಮೂಲಕ ಸೆಮಿಫೈನಲ್ಗೆ ಲಗ್ಗೆಯಿಡಬಹುದು.
ಅಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದ ಫಲಿತಾಂಶದೊಂದಿಗೆ ಆಸ್ಟ್ರೇಲಿಯಾ, ಭಾರತ, ಸೌತ್ ಆಫ್ರಿಕಾ ತಂಡಗಳ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ.
- ಆಸ್ಟ್ರೇಲಿಯಾ ಗೆದ್ದರೂ, ಸೋತರೂ ನೆಟ್ ರನ್ ರೇಟ್ ನೆರವಿನಿಂದ ಸೆಮಿಫೈನಲ್ಗೇರಲಿದೆ.
- ಭಾರತ ತಂಡ ಗೆದ್ದರೆ 8 ಅಂಕಗಳು + ಉತ್ತಮ ನೆಟ್ ರನ್ ರೇಟ್ ನೆರವಿನೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಲಿದೆ.
- ಆಸ್ಟ್ರೇಲಿಯಾ ಸೋತು ಸೌತ್ ಆಫ್ರಿಕಾ ತಂಡ ಕೊನೆಯ ಮ್ಯಾಚ್ನಲ್ಲಿ ಗೆದ್ದರೂ ಸೆಮಿಫೈನಲ್ಗೇರುವ ಸಾಧ್ಯತೆ ಕಡಿಮೆ.
- ಭಾರತ ತಂಡ ಸೋತರೆ, ಬಾಂಗ್ಲಾದೇಶ್ ತಂಡವನ್ನು ಮಣಿಸಿ ಸೌತ್ ಆಫ್ರಿಕಾ ತಂಡ ಸೆಮಿಫೈನಲ್ಗೆ ಎಂಟ್ರಿ ಕೊಡಲಿದೆ.
ಇದನ್ನೂ ಓದಿ: 96 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್ ಮಾಡಿದ ಲ್ಯಾಥಮ್-ಕಾನ್ವೆ..!
ಒಟ್ಟಾರೆಯಾಗಿ ಹೇಳುವುದಾದರೆ ಮಹಿಳಾ ಟಿ20 ವಿಶ್ವಕಪ್‌ನ ನಿರ್ಣಾಯಕ ಸೆಮಿಫೈನಲ್ ರೇಸ್ ಜೂನ್ 28ರ ಭಾರತ-ಆಸ್ಟ್ರೇಲಿಯಾ ಪಂದ್ಯದ ಮೇಲೆ ಅವಲಂಬಿತವಾಗಿದ್ದು, ಹರ್ಮನ್‌ಪ್ರೀತ್ ಕೌರ್ ಪಡೆಯು ಆಸೀಸ್ ಬಳಗವನ್ನು ಮಣಿಸಿ ನೇರವಾಗಿ ಸೆಮೀಸ್ಗೆ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದೆ.
