ಹುಬ್ಬಳ್ಳಿ, ಜೂ.27: ಕರ್ನಾಟಕದಲ್ಲಿ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ನಕಲಿ ಹಾಗೂ ವಿಷಕಾರಿ ಕೃತಕ ಕಳ್ಳು (Spurious Toddy) ದಂಧೆಯ ವಿರುದ್ಧ ಅಬಕಾರಿ ಇಲಾಖೆ ಭಾರಿ ಕಾರ್ಯಾಚರಣೆ ನಡೆಸಿದೆ. ಕೃತಕ ಕಳ್ಳು ತಯಾರಿಕೆಗೆ ಬಳಸಲಾಗುವ ಅತ್ಯಂತ ಅಪಾಯಕಾರಿ ‘ಕ್ಲೋರಲ್ ಹೈಡ್ರೇಟ್’ (CH) ಎಂಬ 1,500 ಕೆಜಿ ರಾಸಾಯನಿಕ ಪುಡಿಯನ್ನು ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧೆಡೆಯಿಂದ ವಶಪಡಿಸಿಕೊಂಡಿದೆ. ಈ ದಂಧೆಗೆ ಸಂಬಂಧಿಸಿದಂತೆ ಇದುವರೆಗೆ 771 ಜನರನ್ನು ಬಂಧಿಸಲಾಗಿದೆ.
ಅಬಕಾರಿ ಇಲಾಖೆಯ ದಾಖಲೆಗಳ ಪ್ರಕಾರ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಈ ಮಾರಕ ನಕಲಿ ಕಳ್ಳಿನ ಬಳಕೆ ಅತ್ಯಂತ ಹೆಚ್ಚಾಗಿದೆ. ಇದು ನೇರವಾಗಿ ಮನುಷ್ಯನ ಕೇಂದ್ರ ನರಮಂಡಲದ ಮೇಲೆ ದಾಳಿ ಮಾಡಿ ಜರ್ಜರಿತಗೊಳಿಸುತ್ತದೆ. ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈ ದಂಧೆ ಹೆಮ್ಮರವಾಗಿ ಬೆಳೆದಿದೆ. ಅದರಲ್ಲೂ ವಿಶೇಷವಾಗಿ ರಾಯಚೂರು ಜಿಲ್ಲೆಯೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 1,033 ಕೆಜಿ ಕ್ಲೋರಲ್ ಹೈಡ್ರೇಟ್ (CH) ಪುಡಿ ಮತ್ತು 16,905 ಲೀಟರ್ ಕೃತಕ ಕಳ್ಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಹೊರತಾಗಿ ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಈ ವಿಷಕಾರಿ ಪಾನೀಯದ ಹಾವಳಿ ಹೆಚ್ಚಾಗಿದೆ.
ಕಳ್ಳಭಟ್ಟಿ ದಂಧೆಕೋರರು ಕೇವಲ 5 ಗ್ರಾಮ್ ಕ್ಲೋರಲ್ ಹೈಡ್ರೇಟ್ ಪುಡಿಯನ್ನು ಬಳಸಿ 1 ಲೀಟರ್ ಕೃತಕ ಕಳ್ಳನ್ನು ತಯಾರಿಸುತ್ತಾರೆ. ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ಅತಿ ಹೆಚ್ಚು ಕಿಕ್ ನೀಡುತ್ತದೆ ಎಂಬ ಕಾರಣಕ್ಕೆ ದಿನಗೂಲಿ ಕಾರ್ಮಿಕರು ಈ ರಾಸಾಯನಿಕ ಮಿಶ್ರಿತ ಕಳ್ಳನ್ನು ಹೆಚ್ಚಾಗಿ ಕುಡಿಯುತ್ತಿದ್ದಾರೆ. ಇದು ಮನುಷ್ಯನ ದೇಹವನ್ನು ನಿಧಾನವಾಗಿ ಕೊಲ್ಲುವ ಸ್ಲೋ ಪಾಯ್ಸನ್ ಆಗಿದೆ. ಇದರ ನಿರಂತರ ಸೇವನೆಯಿಂದ ಅಂಗಾಂಗ ವೈಫಲ್ಯ, ಪಾರ್ಶ್ವವಾಯು ಮತ್ತು ಸಾವು ಸಂಭವಿಸಬಹುದು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ಇಡೀ ಕರ್ನಾಟಕದಲ್ಲಿ ನೈಸರ್ಗಿಕ ಕಳ್ಳು ತೆಗೆಯುವುದು ಮತ್ತು ಮಾರುವುದನ್ನು ಬ್ಯಾನ್ ಮಾಡಲಾಗಿದೆ. ಇನ್ನು ಈ ಕ್ಲೋರಲ್ ಹೈಡ್ರೇಟ್ ರಾಸಾಯನಿಕವನ್ನು ಮನುಷ್ಯನ ಬಳಕೆಗೆ ಮಾರಾಟ ಮಾಡುವುದನ್ನು ‘ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ’ ಅಡಿಯಲ್ಲಿ ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾಮಾನ್ಯವಾಗಿ ಪಶುವೈದ್ಯರು ಜಾನುವಾರುಗಳ ತೀವ್ರ ನರನೋವು ನಿವಾರಿಸಲು ಈ ಕ್ಲೋರಲ್ ಹೈಡ್ರೇಟ್ ಪುಡಿಯನ್ನು ನೋವು ನಿವಾರಕವಾಗಿ ಬಳಸುತ್ತಾರೆ. ಆದರೆ ದಂಧೆಕೋರರು ಇದರ ತೀವ್ರ ಅಮಲೇರಿಸುವ ಗುಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ. ಕರ್ನಾಟಕದಲ್ಲಿ ಕಳ್ಳು ನಿಷೇಧವಿದ್ದರೂ, ನೆರೆ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇದಕ್ಕೆ ಕಾನೂನುಬದ್ಧ ಅವಕಾಶವಿದೆ. ಅಲ್ಲಿಂದಲೇ ರೈಲ್ವೆ ಮಾರ್ಗ ಹಾಗೂ ರಸ್ತೆಗಳ ಮೂಲಕ ಈ ನಿಷೇಧಿತ ಕೆಮಿಕಲ್ ಕರ್ನಾಟಕದ ಗಡಿಯೊಳಗೆ ಬರುತ್ತಿದೆ. ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದರೂ ದಂಧೆಕೋರರು ಕಣ್ಣು ತಪ್ಪಿಸಿ ಸಾಗಿಸುತ್ತಿದ್ದಾರೆ. ನೆರೆ ರಾಜ್ಯಗಳು ಈ ಮಾರಕ ಲಿಕ್ಕರ್ ಅನ್ನು ಬ್ಯಾನ್ ಮಾಡದ ಹೊರತು ನಮ್ಮಲ್ಲಿ ಇದನ್ನು ತಡೆಯುವುದು ಕಷ್ಟ. ಆದರೂ, ಈ ಕ್ಲೋರಲ್ ಹೈಡ್ರೇಟ್ ಅನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಡಿಯಲ್ಲಿ ತಂದು ದೇಶಾದ್ಯಂತ ಕಟ್ಟುನಿಟ್ಟಾಗಿ ನಿಯಂತ್ರಿಸಲು ಕರ್ನಾಟಕ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
