ಕತಾರ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ : 54 ಜನರಿಗೆ ಗಾಯ, 18 ಮಂದಿ ನಾಪತ್ತೆ – Kannada News | Qatar Gas Plant Blast: 54 Injured, 18 Missing at Ras Laffan; Global Energy Market Impact Feared

ದೋಹಾ, ಜೂನ್ 22: ವಿಶ್ವದ ಪ್ರಮುಖ ನೈಸರ್ಗಿಕ ಅನಿಲ ರಫ್ತು ರಾಷ್ಟ್ರವಾದ ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಬರ್ಜಾನ್ ಅನಿಲ ಸ್ಥಾವರ(Gas Plant)ದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಥಾವರದಲ್ಲಿ ಹೊಸ ಕಾರ್ಯಾಚರಣೆ ಆರಂಭವಾಗುವ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಕನಿಷ್ಠ 54 ಜನರು ಗಾಯಗೊಂಡಿದ್ದಾರೆ ಹಾಗೂ 18 ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಘಟನೆ ನಡೆದ ತಕ್ಷಣವೇ ಉನ್ನತ ಮಟ್ಟದ ತುರ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಸದ್ಯ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ. ದೇಶದ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಬರ್ಜಾನ್ ಕಾರ್ಖಾನೆಯಲ್ಲಿ ಕೆಲಸ ಆರಂಭವಾಗುತ್ತಿದ್ದಂತೆಯೇ ಈ ಸ್ಫೋಟ ಸಂಭವಿಸಿದೆ ಎಂದು ಸರ್ಕಾರಿ ಸ್ವಾಮ್ಯದ ‘ಕತಾರ್ ಎನರ್ಜಿ’ ಸಂಸ್ಥೆ ಅಧಿಕೃತವಾಗಿ ದೃಢಪಡಿಸಿದೆ.

ಸ್ಫೋಟದ ತೀವ್ರತೆಗೆ ಸಿಲುಕಿ ನಾಪತ್ತೆಯಾಗಿರುವ 18 ಜನರಿಗಾಗಿ ಅವಶೇಷಗಳ ನಡುವೆ ತೀವ್ರ ಹುಡುಕಾಟ ಮುಂದುವರೆದಿದೆ. ಸ್ಫೋಟಕ್ಕೆ ನಿಖರವಾದ ಕಾರಣವೇನೆಂಬುದನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ತಾಂತ್ರಿಕ ದೋಷವೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಕುರಿತು ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.

ಮತ್ತಷ್ಟು ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ಜಾಗತಿಕ ಇಂಧನ ಮಾರುಕಟ್ಟೆಗೆ ಹೊಸ ಆತಂಕ?
ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಭೀತಿ: ಹಾರ್ಮುಜ್ ಜಲಸಂಧಿಯ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಇತ್ತೀಚೆಗಷ್ಟೇ ಕತಾರ್ ತನ್ನ ಗ್ಯಾಸ್ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ಪರಿಸ್ಥಿತಿ ತಿಳಿಯಾಗಿ ಮರಳಿ ಸಹಜ ಸ್ಥಿತಿಗೆ ಬರುತ್ತಿರುವಾಗಲೇ ಈ ದುರಂತ ಸಂಭವಿಸಿದೆ. ವಿಶ್ವದ ಅತಿ ದೊಡ್ಡ ಅನಿಲ ಪೂರೈಕೆದಾರ ರಾಷ್ಟ್ರವಾಗಿರುವ ಕತಾರ್‌ನ ಈ ಪ್ರಮುಖ ಸ್ಥಾವರ ದೀರ್ಘಕಾಲದವರೆಗೆ ಬಂದ್ ಆದರೆ, ಜಾಗತಿಕವಾಗಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಗ್ಯಾಸ್ ಮತ್ತು ತೈಲ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಆರ್ಥಿಕ ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *