ಚೆಂಡೆಸೆದರೆ…. ಬ್ಯಾಟ್ ಎಸಿತೀನಿ: ಕೆರಳಿದ ಕೀರನ್ ಪೊಲಾರ್ಡ್​! – Kannada News | Kieron Pollard’s MLC Standoff Revives Memories of Iconic 2014 Starc Fight

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 5ನೇ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಜಿದ್ದಾಜಿದ್ದಿನೊಂದಿಗೆ ಎಲ್ಲರ ಗಮನ ಸೆಳೆದಿದ್ದು ಕೀರನ್ ಪೊಲಾರ್ಡ್ ಅವರ ಕೋಪ-ತಾಪ. ಈ ಕೋಪ-ತಾಪದೊಂದಿಗೆ ಪೊಲಾರ್ಡ್ 2014ರ ಐಪಿಎಲ್ ಘಟನೆಯನ್ನು ನೆನಪಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಮ್ ತಂಡದ ದಾಂಡಿಗರು 20 ಓವರ್​ಗಳಲ್ಲಿ 245 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಕೀರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಇತ್ತ ಪೊಲಾರ್ಡ್ ಅಬ್ಬರದಿಂದ ವಾಷಿಂಗ್ಟನ್ ಫ್ರೀಡಮ್ ತಂಡದ ಬೌಲರ್​ಗಳು ಕಂಗೆಟ್ಟಿದ್ದರು. ಇದರ ನಡುವೆ ವೇಗದ ಬೌಲರ್ ಆಸಿಫ್ ಮೆಹಮೂದ್  ಪೊಲಾರ್ಡ್ ಕಣ್ಣಿಗೆ ಕಣ್ಣಿಟ್ಟು ಕೆಣಕಲು ಯತ್ನಿಸಿದರು. ಇದರಿಂದ ಕೋಪಗೊಂಡ ಪೊಲಾರ್ಡ್  ತಮ್ಮ ಹಳೆಯ ರಗಡ್ ಶೈಲಿಯಲ್ಲೇ ಮರು ಜವಾಬು ನೀಡಿದ್ದಾರೆ.

ಅಂದರೆ ಕೆಣಕಲು ಬಂದ ಬೌಲರ್​ಗೆ ಚೆಂಡೆಸೆದರೆ ಬ್ಯಾಟ್ ಎಸಿತೀನಿ ಎಂದು ತೋರಿಸುವ ಮೂಲಕ ಪೊಲಾರ್ಡ್ ಪ್ರತ್ಯುತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ 2014 ಐಪಿಎಲ್​ ಜಗಳ ಕೂಡ ಮುನ್ನಲೆಗೆ ಬಂದಿದೆ.

ಪೊಲಾರ್ಡ್ vs ಸ್ಟಾರ್ಕ್:

2014ರ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದ ವೇಳೆ ಮಿಚೆಲ್ ಸ್ಟಾರ್ಕ್ ಎಸೆದ ತೀಕ್ಷ್ಣವಾದ ಬೌನ್ಸರ್ ಅನ್ನು ಪೊಲಾರ್ಡ್ ಆಡಲು ವಿಫಲರಾದರು.

ಈ ವೇಳೆ ಸ್ಟಾರ್ಕ್ ಬ್ಯಾಟರ್ ಕಡೆಗೆ ನೋಡಿ ಏನೋ ಅಸಭ್ಯ ಮಾತುಗಳನ್ನು ಆಡಿದರು. ಪೊಲಾರ್ಡ್ ಕೇವಲ ಕೈ ಸನ್ನೆ ಮಾಡಿ ಸುಮ್ಮನಿರಲು ಹೇಳಿದರು. ಅಷ್ಟೇ ಅಲ್ಲದೆ ಮುಂದಿನ ಎಸೆತವನ್ನು ಎಸೆಯಲು ಸ್ಟಾರ್ಕ್ ರನ್ನಿಂಗ್ ಆರಂಭಿಸಿದಾಗ, ಪೊಲಾರ್ಡ್ ಕ್ರೀಸ್‌ನಿಂದ ದಿಢೀರನೆ ಪಕ್ಕಕ್ಕೆ ಸರಿದು, ತಾವು ಸಿದ್ಧವಾಗಿಲ್ಲ ಎಂದು ಸನ್ನೆ ಮಾಡಿದರು.

ಇದರಿಂದ ಕೋಪೋದ್ರಿಕ್ತರಾದ ಮಿಚೆಲ್ ಸ್ಟಾರ್ಕ್, ಉದ್ದೇಶಪೂರ್ವಕವಾಗಿಯೇ ಕ್ರೀಸ್‌ನಿಂದ ಹೊರಗೆ ನಿಂತಿದ್ದ ಪೊಲಾರ್ಡ್‌ರ ಕಾಲಿನ ಕಡೆಗೆ ಅತಿ ವೇಗವಾಗಿ ಚೆಂಡನ್ನು ಎಸೆದರು. ಆರ್​ಸಿಬಿ ವೇಗಿಯ ಈ ಅವರ ಈ ವರ್ತನೆಯಿಂದ ಕೆರಳಿದ ಪೊಲಾರ್ಡ್, ತಮ್ಮ ಕೈಯಲ್ಲಿದ್ದ ಬ್ಯಾಟ್ ಅನ್ನು ಸ್ಟಾರ್ಕ್ ಕಡೆಗೆ ಬಲವಾಗಿ ಎಸೆಯಲು ಮುಂದಾದರು.  ಆದರೆ ಬ್ಯಾಟ್ ಕೈಯಿಂದ ಜಾರಿ ಪಿಚ್‌ನ ಪಕ್ಕದಲ್ಲೇ ಬಿದ್ದಿತು.

ತಕ್ಷಣವೇ ಅಂಪೈರ್‌ಗಳು ಮತ್ತು ಆರ್‌ಸಿಬಿ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಅಂದು ನಿಯಮ ಉಲ್ಲಂಘಿಸಿದ್ದಕ್ಕಾಗಿ ಮ್ಯಾಚ್ ರೆಫರಿ ಪೊಲಾರ್ಡ್‌ಗೆ ಪಂದ್ಯ ಶುಲ್ಕದ ಶೇ. 75 ರಷ್ಟು ಹಾಗೂ ಸ್ಟಾರ್ಕ್‌ಗೆ ಶೇ. 50 ರಷ್ಟು ದಂಡವಾಗಿ ವಿಧಿಸಿದ್ದರು.

ಇದೀಗ ಅದೇ ಮಾದರಿಯಲ್ಲಿ ಬ್ಯಾಟ್ ಎಸಿತೀನಿ ಎಂದು ತೋರಿಸುವ ಮೂಲಕ ಕೀರನ್ ಪೊಲಾರ್ಡ್ 12 ವರ್ಷಗಳ ಹಳೆಯ ಕಹಿ ಘಟನೆಯನ್ನು ಮತ್ತೆ ನೆನಪಿಸಿದ್ದಾರೆ.

ಇದನ್ನೂ ಓದಿ: ಶತಕ ಸಿಡಿಸಿದರೂ… ಯಶಸ್ವಿ ಜೈಸ್ವಾಲ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ!

ಇನ್ನು ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ನೀಡಿದ 245 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್ ಪರ ಕೀರನ್ ಪೊಲಾರ್ಡ್ 56 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ ಶತಕ ಸಿಡಿಸಿದರು. ಇದಾಗ್ಯೂ ಎಂಐ ನ್ಯೂಯಾರ್ಕ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು 215 ರನ್​ಗಳು ಮಾತ್ರ. ಈ ಮೂಲಕ ವಾಷಿಂಗ್ಟನ್ ಪ್ರೀಡಮ್ ತಂಡ 30 ರನ್​ಗಳ ಜಯ ಸಾಧಿಸಿದೆ.

Source link

Leave a Reply

Your email address will not be published. Required fields are marked *