ಮಂಡ್ಯ, ಆಗಸ್ಟ್ 15: ತಮಿಳುನಾಡಿಗೆ 15 ದಿನ ನಿತ್ಯ 12 ಟಿಎಂಸಿ ಕಾವೇರಿ ನೀರು ಹರಿಸುವಂತೆ ಇತ್ತೀಚೆಗೆ CWRC ಪ್ರಾಧಿಕಾರ ಆದೇಶಿಸಿತ್ತು. ಇದು ಕಾವೇರಿ (Cauvery Water Dispute) ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿತ್ತು. ಹೀಗಾಗಿ ಆಗಸ್ಟ್ 13ರಂದು ಕರ್ನಾಟಕ ಬಂದ್ ಕೂಡ ಮಾಡಲಾಗಿತ್ತು. ಇನ್ನು ಸಿಎಂ ಡಿಕೆ ಶಿವಕುಮಾರ್ ಸರ್ವಪಕ್ಷಗಳ ಸಭೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದಿದ್ದರು. ಆದರೆ ಇದೆಲ್ಲದರ ಮಧ್ಯೆ ಇದೀಗ ರಾತ್ರೋರಾತ್ರಿ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡಿಗೆ ಹರಿದ 3,000 ಕ್ಯೂಸೆಕ್ ಕಾವೇರಿ ನೀರು
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಲಾಗುತ್ತಿದೆ. ಇಷ್ಟು ದಿನ ಕಬಿನಿ ಜಲಾಶಯದಿಂದ ಮಾತ್ರ ತಮಿಳುನಾಡಿಗೆ ನೀರು ಬಿಡಲಾಗುತ್ತಿತ್ತು. ಆದರೆ, ಕಬಿನಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ತಗ್ಗಿದ ಹಿನ್ನೆಲೆ ಸರ್ಕಾರದ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆಆರ್‌ಎಸ್ ಡ್ಯಾಂನ 80ಕ್ಕೂ ಹೆಚ್ಚು ಗೇಟ್‌ಗಳ ಮೂಲಕ ಸುಮಾರು 3,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
ಕದ್ದುಮುಚ್ಚಿ ನೀರು ಬಿಡುಗಡೆ: ಸರ್ಕಾರದ ವಿರುದ್ಧ ರೈತರು ಆಕ್ರೋಶ
ಸದ್ಯ ತಮಿಳುನಾಡಿಗೆ ಸುಮಾರು 3,000 ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮಂಡ್ಯ ನಗರದ ಸಂಜಯ ವೃತ್ತದಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ, ಈಗ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅನ್ನದಾತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ನಡುವೆ ಜಿಲ್ಲಾಧಿಕಾರಿಗಳು ರೈತರಿಗೆ ಕರೆ ಮಾಡಿ ನೀರು ಬಿಟ್ಟಿಲ್ಲವೆಂದು ಸಮಜಾಯಿಷಿ ನೀಡಲು ಯತ್ನಿಸಿದರೂ, ರೈತರು ಆಕ್ರೋಶ ಹೊರಹಾಕಿದರು.
ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಿಷ್ಟು
ಇನ್ನು ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ. ನಿಯಮಗಳ ಪ್ರಕಾರ ಜೂನ್ ತಿಂಗಳಿನಿಂದಲೇ ನೀರು ಬಿಡಬೇಕಿದ್ದರೂ, ಜೂನ್ ಮತ್ತು ಜುಲೈ ತಿಂಗಳಲ್ಲಿ ನೀರು ಬಿಟ್ಟಿರಲಿಲ್ಲ. ಸದ್ಯ ಕಬಿನಿ ಜಲಾಶಯದಿಂದ 10,000 ಕ್ಯೂಸೆಕ್ ಜೊತೆಗೆ ಸೀಪೇಜ್ ನೀರು ತಮಿಳುನಾಡಿಗೆ ಸೇರುತ್ತಿದೆ’ ಎಂದರು.
ಇದನ್ನೂ ಓದಿ: ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ಕನ್ನಡಪರ ಹೋರಾಟಗಾರರು: ಪ್ರಮುಖ ಬೇಡಿಕೆಗಳೇನು?
‘ಆಗಸ್ಟ್ ಅಂತ್ಯದವರೆಗೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಸೆಪ್ಟೆಂಬರ್ ವೇಳೆಗೆ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗುವ ವಿಶ್ವಾಸವಿದೆ. ಈಗಾಗಲೇ ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಸೂಚನೆ ನೀಡಲಾಗಿದ್ದು, ಕಳೆದ 20 ದಿನಗಳಿಂದ ಕೆಆರ್‌ಎಸ್‌ನಿಂದಲೂ ನಮ್ಮ ಭಾಗದ ಕೆರೆ-ಕಟ್ಟೆಗಳಿಗೆ ಹಾಗೂ ಬೆಳೆಗಳಿಗೆ ನೀರು ಒದಗಿಸಲಾಗುತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರೂ ಕಾವೇರಿ ಅಚ್ಚುಕಟ್ಟು ಪ್ರದೇಶದವರಾಗಿದ್ದು, ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಹೀಗಾಗಿ ಯಾರೂ ಪ್ರತಿಭಟನೆಗೆ ಮುಂದಾಗದೆ, ಸಮಸ್ಯೆಗಳಿದ್ದರೆ ನೇರವಾಗಿ ಸಂಪರ್ಕಿಸಿ ಸಲಹೆಗಳನ್ನು ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ: ಅಶೋಕ್ ವಾಗ್ದಾಳಿ
‘ಕಾವೇರಿ ನೀರು ಬಿಡೋದಿಲ್ಲ ಎಂದು ಹೇಳಿ ಮತ್ತೆ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ಮಾಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ‘ಒಂದೆಡೆ ರಾಜ್ಯದ ರೈತರಿಗೆ ಸಿಗದ ನೀರು, ಇನ್ನೊಂದೆಡೆ ಕುಡಿಯುವ ನೀರಿಗೂ ಪರದಾಡುತ್ತಿರುವ ನಮ್ಮ ಜನ! ಆದರೆ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಮಾತ್ರ ಕನ್ನಡಿಗರ ಕಣ್ಣಿಗೆ ಮಣ್ಣೆರಚಿ, ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ’ ಎಂದಿದ್ದಾರೆ.
ಆರ್ ಅಶೋಕ್ ಟ್ವೀಟ್
ಕಾವೇರಿ ನೀರು ಬಿಡೋದಿಲ್ಲ ಎಂದು ಹೇಳಿ ಮತ್ತೆ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ!
ಒಂದೆಡೆ ರಾಜ್ಯದ ರೈತರಿಗೆ ಸಿಗದ ನೀರು, ಇನ್ನೊಂದೆಡೆ ಕುಡಿಯುವ ನೀರಿಗೂ ಪರದಾಡುತ್ತಿರುವ ನಮ್ಮ ಜನ! ಆದರೆ ಈ ಲಜ್ಜೆಗೆಟ್ಟ @INCKarnataka ಸರ್ಕಾರ ಮಾತ್ರ ಕನ್ನಡಿಗರ ಕಣ್ಣಿಗೆ ಮಣ್ಣೆರಚಿ, ಕದ್ದುಮುಚ್ಚಿ… pic.twitter.com/qOUkBUHgvF
— R. Ashoka (@RAshokaBJP) August 15, 2026
‘ಸಿಎಂ ಡಿಕೆ ಶಿವಕುಮಾರ್ ಅವರೇ, ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರೇ, ನಿಮ್ಮ ಎರಡು ನಾಲಿಗೆ ನಾಡದ್ರೋಹಿ ಆಡಳಿತಕ್ಕೆ ಕೊನೆಯಿಲ್ಲವೇ? ಕನ್ನಡಿಗರಿಗೆ ದ್ರೋಹ: ಹೊರಗಡೆ “ಒಂದು ಹನಿ ನೀರು ಬಿಡುವುದಿಲ್ಲ” ಎಂದು ಭಾಷಣ ಬಿಗಿಯುತ್ತೀರಿ, ಆದರೆ ರಾತ್ರೋರಾತ್ರಿ KRS ಡ್ಯಾಂ ಬಾಗಿಲು ತೆರೆದು ತಮಿಳುನಾಡಿಗೆ ತೃಪ್ತಿಯಾಗುವಂತೆ ನೀರು ಹರಿಸುತ್ತೀರಿ’.
‘ರೈತರ ಹೊಟ್ಟೆಗೆ ಬರೆ: ಮಂಡ್ಯ, ಮೈಸೂರು, ಚಾಮರಾಜನಗರದ ನಮ್ಮ ರೈತರ ಬೆಳೆಗಳು ಒಣಗಿ ಹೋಗುತ್ತಿದ್ದರೂ ನಿಮಗೇನು ಚಿಂತೆಯಿಲ್ಲ. ನಿಮ್ಮ ದೆಹಲಿ ಹೈಕಮಾಂಡ್ ಮತ್ತು ತಮಿಳುನಾಡಿನ ಮೈತ್ರಿ ಪಕ್ಷಗಳನ್ನು ಓಲೈಸಲು ಕಾವೇರಿಯನ್ನೇ ಬಲಿಕೊಡುತ್ತಿದ್ದೀರಲ್ಲ, ನಿಮಗೇನು ನಾಚಿಕೆಯಾಗುವುದಿಲ್ಲವೇ? ಪೊಳ್ಳು ಆಶ್ವಾಸನೆಗಳು: ನಮ್ಮ ಕೆಆರ್‌ಎಸ್ ಜಲಾಶಯದಲ್ಲಿ ಕನ್ನಡಿಗರಿಗೇ ನೀರಿಲ್ಲದಿರುವಾಗ, ತಮಿಳುನಾಡಿಗೆ ನೀರು ಹರಿಸುವ ದುಂಬಾಲು ಯಾಕೆ’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಾವೇರಿ ಕಿಚ್ಚು: ಬಂದ್‌ಗೆ ಧುಮುಕಿದ್ದ ವಾಟಾಳ್ ನಾಗರಾಜ್ ವಶಕ್ಕೆ, ‘ಪೋಲಿಸರಿಗೆ ಧಿಕ್ಕಾರ’ ಕೂಗಿ ಪ್ರತಿಭಟನಾಕಾರರ ಅಕ್ರೋಶ
‘ತಕ್ಷಣವೇ KRS ನಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ! ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಾಡಿನ ರೈತರ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿ ಕೊಟ್ಟು ನೀವು ನಡೆಡಿಸುತ್ತಿರುವ ಈ ನಾಡದ್ರೋಹಿ ರಾಜಕೀಯವನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ನೀರು ಹರಿಸುವುದನ್ನು ಕೂಡಲೇ ತಡೆಯದಿದ್ದರೆ ಇಡೀ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುವುದು ನಿಶ್ಚಿತ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
