ನವದೆಹಲಿ, ಜುಲೈ 27: ದೇಶಾದ್ಯಂತ ಮುಂಗಾರು ಮಳೆಯ (Monsoon 2026) ಅಭಾವ ಮುಂದುವರಿದಿದ್ದು, ಜಲಾಶಯಗಳ ನೀರಿನ ಮಟ್ಟ (Dam Water Level) ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ಮುಂಗಾರು ಋತುವಿನಲ್ಲಿ ಶೇಕಡಾ 15ರಷ್ಟು ಮಳೆ ಕೊರತೆಯಾಗಿದ್ದು, ದೇಶದ 54 ಪ್ರಮುಖ ಜಲಾಶಯಗಳಲ್ಲಿ ನೀರಿನ ಶೇಖರಣೆಯು ಸಾಮಾನ್ಯ ಮಟ್ಟಕ್ಕಿಂತ ಶೇ. 80ಕ್ಕಿಂತ ಕಡಿಮೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಬೀಳಬೇಕಿದ್ದ ಸರಾಸರಿ ಮಳೆಗೆ ಹೋಲಿಸಿದರೆ ಪ್ರಸ್ತುತ ದೇಶಾದ್ಯಂತ ಶೇ. 15ರಷ್ಟು ಮಳೆಯ ಅಭಾವ ಉಂಟಾಗಿದೆ. ಕೇಂದ್ರ ಜಲ ಆಯೋಗ (CWA) ಮೇಲ್ವಿಚಾರಣೆ ಮಾಡುವ ಪ್ರಮುಖ ಜಲಾಶಯಗಳ ಪೈಕಿ 54 ಪ್ರಮುಖ ಜಲಾಶಯಗಳಲ್ಲಿ ನೀರು ಶೇಖರಣೆಯ ಮಟ್ಟವು ಅವುಗಳ ಸರಾಸರಿ ಸಾಮರ್ಥ್ಯದ ಶೇ. 80ಕ್ಕಿಂತಲೂ ಕುಸಿದಿದೆ.
ದೇಶದ ಜಲಾಶಯಗಳಲ್ಲಿ ಕಡಿಮೆ ನೀರಿನ ಸಂಗ್ರಹ ಇರುವುದು ಕಳವಳಕ್ಕೆ ಕಾರಣವಾಗಿದೆ. ಕೇಂದ್ರ ನೀರು ಸರಬರಾಜು ಮತ್ತು ಅಭಿವೃದ್ಧಿ ಆಯೋಗದ (CWC) ಪ್ರಕಾರ, ದೇಶದ 166 ಜಲಾಶಯಗಳಲ್ಲಿ 54 ಜಲಾಶಯಗಳಲ್ಲಿ ನೀರಿನ ಸಂಗ್ರಹವು ಸಾಮಾನ್ಯ ಮಟ್ಟಕ್ಕಿಂತ ಶೇ. 80ಕ್ಕಿಂತ ಕಡಿಮೆಯಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮಾನ್ಸೂನ್ ಋತುವಿನಲ್ಲಿಯೂ ಮಳೆಯ ಕೊರತೆ.
ಜುಲೈ ಮೂರನೇ ವಾರದಲ್ಲಿ ಉತ್ತಮ ಮಳೆಯಾಗಿದ್ದರೂ, ಭಾರತದ ಜಲಾಶಯಗಳ ಪರಿಸ್ಥಿತಿ ಆತಂಕಕಾರಿಯಾಗಿಯೇ ಉಳಿದಿದೆ. ಜುಲೈ 16ರಿಂದ 22ರವರೆಗೆ ದೇಶದಲ್ಲಿ ಸಾಮಾನ್ಯ ಮಟ್ಟದ ಮಳೆಯಾಗಿದ್ದು, ಕೊರತೆ ಕೇವಲ ಶೇ. 1ರಷ್ಟಿತ್ತು. ಆದರೆ, ಜೂನ್ 1ದ ಜುಲೈ 25ರವರೆಗಿನ ಒಟ್ಟು ಅವಧಿಯಲ್ಲಿ ಮಳೆಯು ಸಾಮಾನ್ಯಕ್ಕಿಂತ ಶೇ. 15ರಷ್ಟು ಕಡಿಮೆಯಾಗಿದೆ.
ಇದನ್ನೂ ಓದಿ: ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದಲ್ಲಿ 6 ವರ್ಷಗಳಲ್ಲೇ ಎರಡನೇ ಕನಿಷ್ಠ ಸಂಗ್ರಹ! ಕಾವೇರಿ ಕಣಿವೆಯಲ್ಲಿ ಬರದ ಛಾಯೆ
ಕೇಂದ್ರ ಜಲ ಆಯೋಗದ (CWC) ಇತ್ತೀಚಿನ ವರದಿಯ ಪ್ರಕಾರ, ದೇಶದ 166 ಪ್ರಮುಖ ಜಲಾಶಯಗಳಲ್ಲಿ ಲಭ್ಯವಿರುವ ನೀರು ಕಳೆದ ವರ್ಷಕ್ಕಿಂತ ಸುಮಾರು ಶೇ. 36ರಷ್ಟು ಕಡಿಮೆಯಿದ್ದು, ಸಾಮಾನ್ಯ ಮಟ್ಟಕ್ಕಿಂತಲೂ ಕೆಳಗಿದೆ. ಜುಲೈ 23ರ ವೇಳೆಗೆ 166 ಜಲಾಶಯಗಳಲ್ಲಿ ಒಟ್ಟು 70.432 ಬಿಲಿಯನ್ ಕ್ಯೂಬಿಕ್ ಮೀಟರ್ (BCM) ನೀರು ಲಭ್ಯವಿದ್ದು, ಇದು ಅವುಗಳ ಒಟ್ಟು ಶೇಖರಣಾ ಸಾಮರ್ಥ್ಯದ ಶೇ. 38.37ರಷ್ಟಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 110.519 BCM ನೀರು ಸಂಗ್ರಹವಾಗಿತ್ತು. ಅಂದರೆ, ಪ್ರಸ್ತುತ ನೀರಿನ ಶೇಖರಣೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ ಶೇ. 63.73ರಷ್ಟು ಮತ್ತು ಸಾಮಾನ್ಯ ಮಟ್ಟಕ್ಕೆ ಹೋಲಿಸಿದರೆ ಶೇ. 93.09ರಷ್ಟಿದೆ.
54 ಜಲಾಶಯಗಳಲ್ಲಿ ಶೇ. 80ಕ್ಕಿಂತ ಕಡಿಮೆ ನೀರು:
ಸಿಡಬ್ಲ್ಯೂಸಿ ಪ್ರಕಾರ, 166 ಜಲಾಶಯಗಳ ಪೈಕಿ 54 ಜಲಾಶಯಗಳಲ್ಲಿ ನೀರಿನ ಶೇಖರಣೆಯು ಸಾಮಾನ್ಯ ಮಟ್ಟದ ಶೇ. 80 ಅಥವಾ ಅದಕ್ಕಿಂತ ಕಡಿಮೆಯಿದೆ. ಇವುಗಳಲ್ಲಿ 22 ಜಲಾಶಯಗಳಲ್ಲಿ ಸಾಮಾನ್ಯಕ್ಕಿಂತ ಅರ್ಧ ಅಥವಾ ಅದಕ್ಕಿಂತ ಕಡಿಮೆ ನೀರು ಉಳಿದಿದೆ. ಇವುಗಳಲ್ಲಿ ಶ್ರೀಶೈಲಂ, ನಾಗಾರ್ಜುನ ಸಾಗರ, ತುಂಗಭದ್ರಾ, ಕೃಷ್ಣರಾಜಸಾಗರ (KRS), ಪೆರಿಯಾರ್, ತವಾ, ವೈಗೈ, ಅಲಿಯಾರ್, ಸಿಂಗೂರ್ ಮತ್ತು ಮೌದಹದಂತಹ ಪ್ರಮುಖ ಜಲಾಶಯಗಳು ಕೂಡ ಸೇರಿವೆ.
ದಕ್ಷಿಣ ಭಾರತದಲ್ಲಿ ತೀವ್ರ ಕಡಿಮೆ ಮಳೆ:
ಪ್ರಾದೇಶಿಕ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಅತ್ಯಂತ ಹದಗೆಟ್ಟಿದೆ. ಈ ಭಾಗದ 47 ಪ್ರಮುಖ ಜಲಾಶಯಗಳಲ್ಲಿ ಅವುಗಳ ಸಾಮರ್ಥ್ಯದ ಕೇವಲ ಶೇ. 30.26ರಷ್ಟು ನೀರು ಮಾತ್ರ ಇದೆ. ಇದು ಕಳೆದ ವರ್ಷದ ಶೇ. 69.43 ಮತ್ತು ಸಾಮಾನ್ಯ ಮಟ್ಟದ ಶೇ. 44.18ಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಜಲಾಶಯಗಳಲ್ಲಿ ಮಧ್ಯಮ ಪ್ರಮಾಣದ ಅಭಾವ ಕಂಡುಬಂದಿದೆ. ತೆಲಂಗಾಣದ ಜಲಾಶಯಗಳಲ್ಲಿ ನೀರಿನ ಶೇಖರಣೆಯು ಸಾಮಾನ್ಯ ಮಟ್ಟಕ್ಕಿಂತ ಶೇ. 57ರಷ್ಟು ಕಡಿಮೆಯಾಗಿದೆ.
ಉತ್ತರ ಮತ್ತು ಮಧ್ಯ ಭಾರತದಲ್ಲಿ ಮಳೆ ಹೇಗಿದೆ?:
ಉತ್ತರ ಭಾರತದ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದ ಕೇವಲ ಶೇ. 35.58ರಷ್ಟು ಮತ್ತು ಮಧ್ಯ ಭಾರತದ ಜಲಾಶಯಗಳಲ್ಲಿ ಶೇ. 39.11ರಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಎರಡೂ ಪ್ರದೇಶಗಳಲ್ಲಿನ ಸಂಗ್ರಹಣೆಯು ಕಳೆದ ವರ್ಷಕ್ಕಿಂತ ಮತ್ತು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಿದೆ. ಪೂರ್ವ ಭಾರತದ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿದ್ದರೂ, ಕಳೆದ ವರ್ಷಕ್ಕಿಂತ ಕಡಿಮೆಯಿದೆ. ಪಶ್ಚಿಮ ಭಾರತ (ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ) ಮಾತ್ರ ಸಾಮಾನ್ಯಕ್ಕಿಂತ ಉತ್ತಮ ಶೇಖರಣೆಯನ್ನು ಹೊಂದಿದೆಯಾದರೂ, ಅದೂ ಸಹ ಕಳೆದ ವರ್ಷದ ಮಟ್ಟವನ್ನು ತಲುಪಿಲ್ಲ.
ಇದನ್ನೂ ಓದಿ: Karnataka Weather Forecast: ಕರಾವಳಿಯ 3 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಾಧ್ಯತೆ
ಜಲಾಶಯಗಳು ಭರ್ತಿಯಾಗದಿರಲು ಕಾರಣವೇನು?:
ಜೂನ್ ತಿಂಗಳಿನಲ್ಲಿ ದೇಶಾದ್ಯಂತ ಶೇ. 40ರಷ್ಟು ಮಳೆ ಕಡಿಮೆಯಾಗಿತ್ತು. ಜುಲೈ ಮೂರನೇ ವಾರದಲ್ಲಿ ಉತ್ತಮ ಮಳೆಯಾಗಿದ್ದರೂ ಈ ಕೊರತೆಯನ್ನು ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಾಗಿಲ್ಲ. ಅನೇಕ ಜಲಾನಯನ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಕೆಲವು ಕಡೆ ಕಡಿಮೆ ಸಮಯದಲ್ಲಿ ಅತಿಯಾದ ಮಳೆಯಾಗಿ ನೀರು ವೇಗವಾಗಿ ಹರಿದುಹೋದ ಹೊರತು ಜಲಾಶಯಗಳಲ್ಲಿ ಶೇಖರಣೆಯಾಗಲಿಲ್ಲ. ಕೃಷಿ ನೀರಾವರಿ, ಕುಡಿಯುವ ನೀರು, ಕೈಗಾರಿಕೆಗಳು ಮತ್ತು ಜಲವಿದ್ಯುತ್ ಉತ್ಪಾದನೆಗಾಗಿ ಜಲಾಶಯಗಳಿಂದ ನಿರಂತರವಾಗಿ ನೀರನ್ನು ಹೊರಬಿಡುತ್ತಿರುವುದು ಶೇಖರಣೆಯ ಮೇಲೆ ಒತ್ತಡವನ್ನುಂಟುಮಾಡಿದೆ ಎಂದು ಸಿಡಬ್ಲ್ಯೂಸಿ ಸ್ಪಷ್ಟಪಡಿಸಿದೆ.
ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿರುವುದು ಮುಂಗಾರು ಬೆಳೆಗಳ ಬಿತ್ತನೆ ಹಾಗೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ದಕ್ಷಿಣ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಜಲಾಶಯಗಳ ನೀರಿನ ಮಟ್ಟವು ತೀವ್ರ ಕುಸಿತ ಕಂಡಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಕೃಷಿ ಕ್ಷೇತ್ರ ಮತ್ತು ವಿದ್ಯುತ್ ಉತ್ಪಾದನೆಯ ಮೇಲೆ ನೇರ ಹೊಡೆತ ಬೀಳಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
