ಬೆಂಗಳೂರಲ್ಲಿ ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ – Kannada News | Bengaluru: Man Stuck on Namma Metro Crane in Marathahalli, Police Probe Reason

ಬೆಂಗಳೂರು, ಜು.27: ರಾಜಧಾನಿಯ ಮಾರತಹಳ್ಳಿ ಸಮೀಪ ರಾತ್ರೋರಾತ್ರಿ ಭಾರಿ ಹೈಡ್ರಾಮಾವೊಂದು ನಡೆದಿದೆ. ನಮ್ಮ ಮೆಟ್ರೋ ಕಾಮಗಾರಿ ಸ್ಥಳದಲ್ಲಿದ್ದ ಬೃಹತ್ ಕ್ರೇನ್ ಏರಿದ ವ್ಯಕ್ತಿಯೊಬ್ಬ, ಬಳಿಕ ಕೆಳಗೆ ಇಳಿಯಲಾಗದೆ ಪರದಾಡಿದ ವಿಚಿತ್ರ ಘಟನೆ ಮಧ್ಯರಾತ್ರಿ ಸಂಭವಿಸಿದೆ. ಸುಮಾರು ಬೆಳಗಿನ ಜಾವ 1:30ರ ವೇಳೆಗೆ ಮಾರತಹಳ್ಳಿ ಬಳಿಯ ಮೆಟ್ರೋ ಕಾಮಗಾರಿ ಪ್ರದೇಶದಲ್ಲಿದ್ದ ಬೃಹತ್ ಕ್ರೇನ್ ಮೇಲೆ ವ್ಯಕ್ತಿಯೊಬ್ಬ ಏರಿದ್ದಾನೆ. ಆದರೆ, ಮೇಲೇರಿದ ಕೆಲವೇ ಕ್ಷಣಗಳಲ್ಲಿ ಆತನಿಗೆ ಕೆಳಗೆ ಇಳಿಯಲು ಸಾಧ್ಯವಾಗದೆ ಮೇಲೆಯೇ ಒದ್ದಾಡಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಹಾಗೂ ಸಿಬ್ಬಂದಿ ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಹೆಚ್‌ಎಎಲ್ (HAL) ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸ್ಥಳಕ್ಕೆ ಮತ್ತೊಂದು ದೊಡ್ಡ ಕ್ರೇನ್ ತರೆಸಿ, ಹರಸಾಹಸಪಟ್ಟು ಆತನನ್ನು ಯಶಸ್ವಿಯಾಗಿ ಕೆಳಗೆ ಕರೆತರಲಾಯಿತು. ವ್ಯಕ್ತಿಯನ್ನು ಕೆಳಗಿಳಿಸುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಸದರಿ ವ್ಯಕ್ತಿ ಮಧ್ಯರಾತ್ರಿ ಮೆಟ್ರೋ ಕಾಮಗಾರಿಯ ಬೃಹತ್ ಕ್ರೇನ್ ಅನ್ನು ಯಾವ ಕಾರಣಕ್ಕಾಗಿ ಹತ್ತಿದ್ದ? ಆತ ಮದ್ಯಸೇವನೆ ಮಾಡಿದ್ದನೇ ಅಥವಾ ಮಾನಸಿಕವಾಗಿ ಅಸ್ವಸ್ಥನೇ? ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ವಶಕ್ಕೆ ಪಡೆದಿರುವ ಪೊಲೀಸರು ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ವರದಿ: ನಟರಾಜ್ ಟಿವಿ9 ಕನ್ನಡ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *