ನವದೆಹಲಿ, (ಜುಲೈ 27): ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ದೆಹಲಿಯಲ್ಲಿ (New Delhi) ನಡೆದ ಕರ್ನಾಟಕದ ಎಲ್ಲಾ ಸಂಸದರ ಸಭೆ (Karnataka MPs Meeting) ಅಂತ್ಯವಾಗಿದ್ದು, ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳ ಬಗ್ಗೆ ಚರ್ಚೆಯಾಗಿದೆ. 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ, ಬೆಂಗಳೂರಿನ STRR ಯೋಜನೆ, ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ ಸೇರಿದಂತೆ ಇತರೆ ರಾಜ್ಯದ ಬಾಕಿ ಇರುವ ಯೋಜನೆಗಳ ಬಗ್ಗೆ ಚರ್ಚಿಸಿದ್ದು, ಇವುಗಳ ಜಾರಿಗೆಗೆ ಒಗ್ಗಟ್ಟಾಗಿ ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರಲು ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಸಭೆಯಲ್ಲಿ ನಡೆದ ಚರ್ಚೆಯ ಅಂಶಗಳು
- 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆಗೆ ಮನವಿ
- ಬೆಂಗಳೂರಿನ STRR (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಯೋಜನೆ ಅನುಮೋದನೆ ಬಾಕಿ ಬಗ್ಗೆ ಚರ್ಚೆ
- ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುಮೋದನೆ ದೊರಕಿಸಿಕೊಡಲು ಕೋರಿಕೆ
- ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ ಜಾರಿ ಕ್ರಮಕ್ಕೆ ಮನವಿ
- ವಾಣಿಜ್ಯ ಉದ್ದೇಶಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣ ಪುನರಾರಂಭಕ್ಕೆ ಒತ್ತಡ
- ಸಾಗರಮಾಲಾ 2.0 ಕಾರ್ಯಯೋಜನೆಗೆ ತಕ್ಷಣ ಅನುಮೋದನೆ ಬೇಕು
- ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಮನವಿ
- ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ನೆರವು ಅಗತ್ಯ
- ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ CAMPA ಯೋಜನೆಯಡಿ ₹300 ಕೋಟಿ ಅನುದಾನವನ್ನು 02.04.2025ರಂದು ಕೋರಲಾಗಿದ್ದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮೋದನೆ ಬಾಕಿಯಿದೆ.
- ರಕ್ಷಣಾ ಇಲಾಖೆಯ ಭೂಮಿ ರಾಜ್ಯಕ್ಕೆ ವರ್ಗಾವಣೆ ಸಂಬಂಧ 15.12.2025ರಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೆಂಗಳೂರಿನಲ್ಲಿ 40 ಎಕರೆ, ಬೆಳಗಾವಿಯಲ್ಲಿ 668 ಎಕರೆ ಭೂಮಿ ವರ್ಗಾವಣೆಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ ಪಡೆಯಬೇಕು.
- ಬೆಂಗಳೂರು–ಮೈಸೂರು ಹಾಗೂ ಬೆಂಗಳೂರು–ಮುಂಬೈ ಮಾರ್ಗವನ್ನು ಹೈಸ್ಪೀಡ್ ಮಾರ್ಗಕ್ಕೆ ಸೇರಿಸಲು ರಾಜ್ಯ ಮನವಿ ಮಾಡಿದ್ದು, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ, ವೇಗದ ಸಂಚಾರ ಹಾಗೂ ಪ್ರಾದೇಶಿಕ ಸಮತೋಲನಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಗೆ ಸಂಬಂಧಿತ ಕೇಂದ್ರ ಸಚಿವಾಲಯದಿಂದ ಅನುಮೋದನೆ ಕೊಡಿಸಬೇಕು.
- ಪೊಲೀಸ್ ಆಧುನೀಕರಣಕ್ಕೆ ICJS 2.0 ಯೋಜನೆಗೆ ₹270.71 ಕೋಟಿ. ASUMP ಯೋಜನೆಯಡಿ ₹280 ಕೋಟಿ ಬಿಡುಗಡೆ ಬಾಕಿ. ಗೃಹ ಸಚಿವಾಲಯದೊಂದಿಗೆ ಚರ್ಚಿಸಿ ಅನುದಾನ ಕೊಡಿಸಬೇಕು.
ರಾಜ್ಯದ ವಿವಿಧ ವಿಧೇಯಕಗಳು
- ಉಚಿತ ಮತ್ತು ಕಡ್ಡಾಯ ಶಿಕ್ಷಣ (ಕರ್ನಾಟಕ ತಿದ್ದುಪಡಿ) ವಿಧೇಯಕ, 2015.
- ಕರ್ನಾಟಕ ಖನಿಜ ಹಕ್ಕುಗಳು ಮತ್ತು ಖನಿಜಭರಿತ ಭೂಮಿ ತೆರಿಗೆ ವಿಧೇಯಕ, 2024.
- ಔಷಧ ಮತ್ತು ಸೌಂದರ್ಯವರ್ಧಕ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.
- ನೋಟರೀಸ್ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.
ಈ ವಿಧೇಯಕಗಳಿಗೆ ಗೃಹ ಸಚಿವಾಲಯ ಹಾಗೂ ಸಂಬಂಧಿತ ಕೇಂದ್ರ ಸಚಿವಾಲಯಗಳೊಂದಿಗೆ ತ್ವರಿತ ಒಪ್ಪಿಗೆ ಕೊಡಿಸಬೇಕು ಎಂದು ಎಲ್ಲಾ ಸಂದರಿಗೆ ಡಿಕೆ ಶಿವಕುಮಾರ್ ಮವವಿ ಮಾಡಿದ್ದಾರೆ.
ಸಭೆಯಲ್ಲಾದ ಚರ್ಚೆ ಬಗ್ಗೆ ವಿವರಣೆ ನೀಡಿದ ಪ್ರಲ್ಹಾದ್ ಜೋಶಿ
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ರಾಜ್ಯದ ಎಲ್ಲ ಸಂಸದರ ಸಭೆ ಕರೆದಿದ್ದರು ತೆರಿಗೆ ಹಂಚಿಕೆ ಸೇರಿ ಹಲವು ವಿಚಾರಗಳು ಚರ್ಚೆಗೆ ಬಂದಿತ್ತು. ಸಭೆಯಲ್ಲಿ ನಾನು ಒಂದು ಸಲಹೆ ನೀಡಿದ್ದೇನೆ. ಸಂಸತ್ ಅಧಿವೇಶನಕ್ಕೂ ಮುನ್ನ ಸಭೆ ನಡೆಸಲು ಹೇಳಿದ್ದೇನೆ. ಸಂಘರ್ಷ ಬೇಡ ಸಹಕಾರದಲ್ಲಿ ಕೆಲಸ ಮಾಡೋಣ ಎಂದು ಸಿಎಂ ಹೇಳಿದ್ದು, ರಾಜ್ಯದ ಹಿತಕ್ಕಾಗಿ ಸಹಕಾರ ನೀಡುವ ಭರವಸೆ ನೀಡಿದ್ದೇವೆ. ಕರ್ನಾಟಕ ತೆರಿಗೆ ಹಂಚಿಕೆ ಹೆಚ್ಚಾಗಿದೆ, ಮೂಲ ಸೌಕರ್ಯಗಳು, ನೀರಾವರಿ, ರೈಲ್ವೆಗೆ ಅನುದಾನವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದರು.
ಮೇಕೆದಾಟು ವಿಚಾರದಲ್ಲಿ ರಾಜಕೀಯ ಹೇಳಿಕೆ ನೀಡುವುದಿಲ್ಲ. ರಾಜ್ಯ ಪರಿಷ್ಕೃತ DPR ಕೊಡಬೇಕು, ಕಾವೇರಿ, ಗೋವಾವರಿ, ಕೃಷ್ಣಾ ನದಿಗಳನ್ನು ಸಂಪರ್ಕಿಸಬೇಕಿದೆ. ಜಲಾಶಯಗಳ ಹೂಳು ಎತ್ತಲು ಕೇಂದ್ರ ಕ್ರಮ ತೆಗೆದುಕೊಳ್ಳುತ್ತಿದೆ. ನಿಮ್ಮ ಸಹಕಾರ ಬೇಕು ಎಂದು ನಾವು ಕೇಳಿದ್ದೇವೆ. ಮೇಕೆದಾಟು ವಿಚಾರದಲ್ಲಿ ನಾವು ಸಹಕರಿಸಿದ್ದಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯದ ಪರವಾಗಿ ಉತ್ತರ ಬಂದಿದೆ. ಪರಿಷ್ಕೃತ ಡಿಪಿಆರ್ ಮಾಡಲು ಕೇಂದ್ರ ಸರ್ಕಾರ ಹೇಳಿದೆ. ನೀವು ತಮಿಳುನಾಡು ಸಿಎಂ ಜೊತೆಗೂ ಮಾತನಾಡಿ ಎಂದಿದ್ದೇವೆ. ಮಹದಾಯಿ ವಿಚಾರದಲ್ಲಿ ಪರಿಸರ ಅನುಮತಿ ಬಗ್ಗೆ ನೀಡಿಲ್ಲ.ಕಾನೂನು ವ್ಯಾಪ್ತಿಯಲ್ಲಿದೆ ಎಂದಿದೆ, ಈ ಸಮಸ್ಯೆ ಇತ್ಯರ್ಥವಾಗಬೇಕಿದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 9:45 pm, Mon, 27 July 26
