ಕಾಂಗ್ರೆಸ್‌ನಲ್ಲಿ ಆರದ ಖಾತೆ ಕಿಚ್ಚು: ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಕೆಎಚ್ ಮುನಿಯಪ್ಪ ಬಹಿರಂಗ ಅಸಮಾಧಾನ – Kannada News

ಬೆಂಗಳೂರು, ಜೂನ್ 5: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸಂಪುಟದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಸೃಷ್ಟಿಯಾಗಿರುವ ಭಿನ್ನಮತ ಈಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸುಳಿವು ಕಾಣಿಸಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಸಚಿವ ಸ್ಥಾನದ ರಾಜೀನಾಮೆ ನೀಡಿದ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ಮುಖಂಡ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ (KH Muniyappa) ತಮಗೆ ನೀಡಿರುವ ಖಾತೆ ಬಗ್ಗೆ ಬಹಿರಂಗವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಖಾತೆ ಹಂಚಿಕೆಯಲ್ಲಿ ಹಿರಿತನವನ್ನು ಪರಿಗಣಿಸುತ್ತಿಲ್ಲ ಎಂದು ಹೈಕಮಾಂಡ್ ವಿರುದ್ಧವೇ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ಖಾತೆ ಹಂಚಿಕೆಯಲ್ಲಿ ಹಿರಿತನಕ್ಕೆ ಬೆಲೆ ಸಿಕ್ಕಿಲ್ಲ: ಮುನಿಯಪ್ಪ.
  • ಹೀಗೆಯೇ ಮುಂದುವರಿದರೆ 2028ರ ಚುನಾವಣೆಗೆ ಭಾರಿ ಕಷ್ಟ: ಮುನಿಯಪ್ಪ.
  • ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆಗೆ ಪಟ್ಟು.

ಹಿರಿತನಕ್ಕೆ ಸಿಗದ ಮಾನ್ಯತೆ: ಮುನಿಯಪ್ಪ ಆಕ್ರೋಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ, ‘ನಾನು ಈಗಾಗಲೇ 8 ಬಾರಿ ಗೆದ್ದಿರುವ ಹಿರಿಯ ರಾಜಕಾರಣಿ. ಆದರೆ ಖಾತೆ ಹಂಚಿಕೆಯಲ್ಲಿ ನಮ್ಮ ಸೀನಿಯಾರಿಟಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದಲ್ಲಿ ಎಲ್ಲರನ್ನೂ ಸಮತೋಲನವಾಗಿ ನೋಡಬೇಕಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ನಾಯಕರನ್ನೂ ಒಂದೇ ಕಣ್ಣಿನಿಂದ ನೋಡಬೇಕು’ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿಯ ಗೊಂದಲಗಳು ಪಕ್ಷಕ್ಕೆ ಒಳ್ಳೆಯದಲ್ಲ, ಇಲಾಖೆಗಳ ಹಂಚಿಕೆ ಸರಿಯಾಗಿಲ್ಲದಿದ್ದರೆ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಖಾತೆ ಬದಲಾವಣೆಗಾಗಿ ಹೈಕಮಾಂಡ್‌ಗೆ ಮನವಿ

ತಾವು ಈಗಾಗಲೇ ಮೂರು ವರ್ಷಗಳ ಕಾಲ ಆಹಾರ ಇಲಾಖೆಯನ್ನು ನಿಭಾಯಿಸಿರುವ ಅನುಭವ ಹೊಂದಿದ್ದು, ಈ ಬಾರಿ ತಮಗೆ ಜನರ ನೇರ ಸೇವೆಗೆ ಮುಕ್ತ ಅವಕಾಶವಿರುವ ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆಯನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾಗಿ ಮುನಿಯಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

‘ನಾನು ಇತ್ತೀಚೆಗಷ್ಟೇ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಎಲ್ಲರನ್ನೂ ಒಂದೇ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ಕೇಳಿಕೊಂಡಿದ್ದೇನೆ. ನನ್ನ ಖಾತೆಯನ್ನು ಶೀಘ್ರದಲ್ಲೇ ಬದಲಾವಣೆ ಮಾಡಿಕೊಡಲಿದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ಮುನಿಯಪ್ಪ ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಸರ್ಕಾರಕ್ಕೆ, ಮುನಿಯಪ್ಪ ಅವರ ಈ ಬಹಿರಂಗ ಬಂಡಾಯ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *