ವಾಟಾಳ್ ನಾಗರಾಜ್ ಸುದ್ದಿಗೋಷ್ಠಿImage Credit source: Tv9 Kannada
ಬೆಂಗಳೂರು, ಜುಲೈ 31: ಕರ್ನಾಟಕದಲ್ಲಿಯೇ ನೀರಿಲ್ಲದಿರುವಾಗ ನೆರೆ ರಾಜ್ಯ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವ CWMA ನಿರ್ಧಾರ ಖಂಡಿಸಿ ಕನ್ನಡಪರ ಸಂಘಟನೆಗಳು ಆಗಸ್ಟ್ 13ರ ಗುರುವಾರ ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಈ ಬಗ್ಗೆ ಕನ್ನಡ ಪರ ಸಂಘಟನೆಗಳ ಜೊತೆ ಚರ್ಚೆ ನಂತರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ ಮಾಡಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ಗೆ ತೀರ್ಮಾನಿಸಲಾಗಿದೆ.
ಬಂದ್ಗೆ ಯಾವೆಲ್ಲ ಸಂಘಟನೆಗಳ ಬೆಂಬಲ?
- ರಾಜ್ಯ ಸರ್ಕಾರಿ ನೌಕರರ ಸಂಘ
- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
- ಲಾರಿ ಮಾಲೀಕರು ಮತ್ತು ಚಾಲಕರ ಸಂಘ
- ಆಟೋ ಚಾಲಕರ ಸಂಘಟನೆ
- ಓಲಾ & ಉಬರ್ ಸಂಘಟನೆ
- ಕಾರ್ಮಿಕರ ಸಂಘಟನೆಗಳು
- ಬೀದಿ ಬದಿ ವ್ಯಾಪಾರಿಗಳು
ಇದನ್ನೂ ಓದಿ: ಕಾವೇರಿ ಜಲ ವಿವಾದ: ಮಂಡ್ಯದ ಕೆಆರ್ಎಸ್ ಬಳಿ ಬಿಜೆಪಿಗರಿಂದ ಬೃಹತ್ ಪ್ರತಿಭಟನೆ
ಬೆಂಗಳೂರಿನ ವುಡ್ಲ್ಯಾಂಡ್ ಹೋಟೆಲ್ನಲ್ಲಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ವಾಟಾಳ್ ನಾಗರಾಜ್, ಇಂತಹ ಸಂದರ್ಭ ನಮಗೆ ಬರಬಾರದಿತ್ತು. ತಮಿಳುನಾಡಿನವರ ಜೊತೆ ಯುದ್ಧ ಮಾಡಬೇಕೆಂದ ಉದ್ದೇಶವಿರಲಿಲ್ಲ. ಆದರೆ ಅವರು ಮೊದಲಿನಿಂದ ನಮಗೆ ತೊಂದರೆ ಕೊಡುತ್ತಿದ್ದಾರೆ. 1967ರಲ್ಲಿ ನಾನು ವಿಧಾನಸಭಾ ಸದಸ್ಯನಾಗಿದ್ದೆ. ಈ ಹಿಂದೆ ತಮಿಳುನಾಡು ಸಿಎಂ ಕರುಣಾನಿಧಿ ಬೆಂಗಳೂರಿಗೆ ಬರುತ್ತಿದ್ದರು. ಅಂದಿನ ಸಿಎಂ ನಿಜಲಿಂಗಪ್ಪ ಜೊತೆ ಸೌಹಾರ್ದಯುತವಾಗಿ ಸಭೆ ನಡೆಸಿ ನೀರು ಹರಿಸುವಂತೆ ಕೇಳುತ್ತಿದ್ದರು ಎಂಬುದನ್ನೂ ಅವರು ಈ ವೇಳೆ ನೆನಪಿಸಿಕೊಂಡಿದ್ದಾರೆ.
ಏರ್ಪೋರ್ಟ್ಗೆ ಮುತ್ತಿಗೆ ಎಚ್ಚರಿಕೆ
ರಾಜ್ಯದಲ್ಲಿ ಪ್ರಸ್ತುತ ಮಳೆ ಅಭಾವದಿಂದ ನೀರಿನ ಕೊರತೆಯಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶಿಸಿದೆ. ಸಿಎಂ ಡಿಕೆಶಿ ತಮಿಳುನಾಡು ಸಿಎಂ ವಿಜಯ್ರನ್ನು ಆಹ್ವಾನಿಸಿದ್ದಾರೆ. ವಿಜಯ್ ರಾಜ್ಯಕ್ಕೆ ಬರುವುದನ್ನು ವಿರೋಧಿಸಲ್ಲ. ಬದಲಾಗಿ ತಮಿಳುನಾಡಿಗೆ ನೀರು ಹರಿಸುವುದು ಬೇಡವೆಂದರೆ ಸ್ವಾಗತಿಸುತ್ತೇವೆ. ಸಿಡಬ್ಲ್ಯುಎಂಎ ಆದೇಶದಂತೆ ನೀರು ಹರಿಸಿ ಎಂದು ಹೇಳುವುದಾದರೆ ವಿಜಯ್ ಬಂದಾಗ ಏರ್ಪೋರ್ಟ್ಗೆ ಮುತ್ತಿಗೆ ಹಾಕುತ್ತೇವೆ ಎಂದು ವಾಟಾಳ್ ಎಚ್ಚರಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.