ಬೆಂಗಳೂರು, ಜು.31: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಜಿ. ಬಸವರಾಜ ಅವರಿದ್ದ ಪೀಠವು ಈ ಆದೇಶ ನೀಡಿದೆ. ಕುಲಕರ್ಣಿ ಅವರಿಗೆ ಕೆಳಹಂತದ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ತಡೆಯನ್ನು ನೀಡಿದ್ದು, ಜೀವಾವಧಿ ಶಿಕ್ಷೆಯ ತೀರ್ಪಿಗೆ ತಡೆಯಾಜ್ಞೆ ನೀಡಲಾಗಿದೆ. ವಕೀಲ ಸುನೀಲ್ ಅವರು ಈ ಕುರಿತು ಮಾತನಾಡಿ, ಇದು ಕಾನೂನು ಹೋರಾಟದ ಒಂದು ಮಧ್ಯಂತರ ಜಯ ಎಂದು ಹೇಳಿದ್ದಾರೆ. ಅವರ ವಾದದ ಪ್ರಕಾರ, ವಿನಯ್ ಕುಲಕರ್ಣಿಯವರಿಗೂ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಅವರನ್ನು ಸಿಬಿಐ ಇನ್ವೆಸ್ಟಿಗೇಶನ್ ನಡೆಸಿ ನಂತರ ಸಿಲುಕಿಸಲಾಯಿತು ಎಂಬುದು ಅವರ ಪ್ರಮುಖ ವಾದವಾಗಿತ್ತು. ಸೆಷನ್ಸ್ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆ ವಿಧಿಸುವಾಗ ಅಪ್ರೂವರ್ ಮಾಫಿ ಸಾಕ್ಷಿಯ ಆಧಾರದ ಮೇಲೆ ಮಾತ್ರ ಅವಲಂಬಿತವಾಗಿತ್ತು ಎಂದು ವಕೀಲ ಸುನೀಲ್ ತಿಳಿಸಿದ್ದಾರೆ. ಕೆಳಹಂತದ ನ್ಯಾಯಾಲಯ ಮತ್ತು ಸಿಬಿಐ ಸಲ್ಲಿಸಿದ ಎರಡು ಸಾಕ್ಷ್ಯಾಧಾರಗಳನ್ನು ಸೂಕ್ತವಾಗಿ ಪರಿಶೀಲಿಸದೆ, ಕೇವಲ ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್ ಆಧರಿಸಿ ಶಿಕ್ಷೆ ನೀಡಿರುವುದು ತಪ್ಪು ಎಂದು ಅವರು ವಾದಿಸಿದ್ದರು.
ಉಚ್ಚ ನ್ಯಾಯಾಲಯವು ಎರಡೂ ಕಡೆಯ ವಾದಗಳನ್ನು ಆಲಿಸಿ, ವಿನಯ್ ಕುಲಕರ್ಣಿ ಅವರ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಿದೆ. ಜಾಮೀನು ಮಂಜೂರು ಮಾಡಲು 5 ಲಕ್ಷ ರೂಪಾಯಿ ಬಾಂಡ್ ಮತ್ತು ಶ್ಯೂರಿಟಿ ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ವಿನಯ್ ಕುಲಕರ್ಣಿ ಜೊತೆಗೆ ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಚನ್ನಕೇಶವ ಟಿಂಗರಿಕರ್ ಸೇರಿದಂತೆ ಒಟ್ಟು ಹತ್ತು ಆರೋಪಿಗಳಲ್ಲಿ ಕೆಲವರಿಗೆ ಜಾಮೀನು ಮಂಜೂರಾಗಿದ್ದು, ಎಲ್ಲರಿಗೂ ಇನ್ನೂ ಜಾಮೀನು ಸಿಕ್ಕಿಲ್ಲ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ. ಸ್ಪೀಕರ್ ಅವರು ವಿನಯ್ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಿದ ಸಂದರ್ಭದಲ್ಲಿ ಹೊರಡಿಸಿದ್ದ ಆದೇಶದಲ್ಲಿ, ಶಾಸಕ ಸ್ಥಾನದ ಅನರ್ಹತೆಯು ಹೈಕೋರ್ಟ್‌ನ ಅಂತಿಮ ಆದೇಶವನ್ನು ಅವಲಂಬಿಸಿರುತ್ತದೆ ಎಂದು ಹೇಳಲಾಗಿತ್ತು. ಇದೀಗ ಉಚ್ಚ ನ್ಯಾಯಾಲಯವು ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿ, ಜಾಮೀನು ಮಂಜೂರು ಮಾಡಿರುವ ಕಾರಣ, ಅವರ ಶಾಸಕ ಸ್ಥಾನಕ್ಕೆ ಮರಳಿ ಜೀವ ಬಂದಿದೆ. ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಶ್ಯೂರಿಟಿ ಒದಗಿಸಿದ ನಂತರ ಕುಲಕರ್ಣಿ ಅವರು ಜೈಲಿನಿಂದ ಹೊರಬರಲಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ