ಕಾವೇರಿ (Cauvery) ವಿವಾದ ಮತ್ತೆ ಶುರುವಾಗಿದೆ. ರಾಜ್ಯದಲ್ಲಿ ಮಳೆ ಕಡಿಮೆ ಆದಾಗಲೆಲ್ಲ ಕಾವೇರಿ ನೀರಿನ ವಿವಾದ ಏಳುತ್ತದೆ. ಈ ಬಾರಿಯೂ ಅದೇ ಆಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ, 3500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ರಾಜ್ಯಕ್ಕೆ ನಿರ್ದೇಶಿಸಿದೆ. ಆದರೆ ರಾಜ್ಯದ ರೈತರು, ಕನ್ನಡ ಪರ ಸಂಘಟನೆಗಳವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದೆಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ತಮಿಳುನಾಡು ಸಿಎಂ ವಿರುದ್ಧವೂ ಆಕ್ರೋಶ ಕಟ್ಟೆ ಒಡೆದಿದೆ. ತಮಿಳುನಾಡು ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರದರ್ಶನನ್ನು ಕೆಲವೆಡೆ ನಿಲ್ಲಿಸಲಾಗಿದೆ. ಇನ್ನೂ ಕೆಲವು ತಮಿಳು ಸಿನಿಮಾಗಳು ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರದರ್ಶನ ಕಾಣುತ್ತಿವೆ.
ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದಲೂ ಪ್ರದರ್ಶನ ಕಾಣುತ್ತಿದೆ. ನಿನ್ನೆ ಮಂಡ್ಯ ಜಿಲ್ಲೆಯಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಇಂದು ಚಾಮರಾಜನಗರದಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಸಿನಿಮಾದ ಪ್ರದರ್ಶನ ಜಾರಿಯಲ್ಲಿದೆ. ಆದರೆ ಪ್ರತಿಭಟನಾಕಾರರು ಇಲ್ಲಿಯೂ ಸಿನಿಮಾದ ಪ್ರದರ್ಶನವನ್ನು ಬಲವಂತದಿಂದ ನಿಲ್ಲಿಸುವ ಸಾಧ್ಯತೆ ಇದೆ.
‘ಜನ ನಾಯಗನ್’ ಮಾತ್ರವೇ ಅಲ್ಲದೆ ಇನ್ನೂ ಕೆಲವು ತಮಿಳು ಸಿನಿಮಾಗಳ ಪ್ರದರ್ಶನ ಬೆಂಬಗಳೂರಿನಲ್ಲಿ ಪ್ರಸ್ತುತ ಆಗುತ್ತಿದೆ. ತಮಿಳಿನ ‘ಅನ್ಬೆ ಡಯಾನ’ ಸಿನಿಮಾ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ದಿನಕ್ಕೆ ಎರಡು ಶೋ ಮಾತ್ರವೇ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಪರಿ ಇಳವಳಗನ್, ರಮ್ಯಾ ರಂಗನಾಥನ್, ಮಾಜಿ ಸಚಿವೆ ರೋಜಾ ಇನ್ನೂ ಕೆಲವರು ಈ ಸಿನಿಮಾನಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಕಾವೇರಿ ಹೋರಾಟ: ಮಂಡ್ಯದಲ್ಲಿ ರದ್ದಾಯ್ತು ‘ಜನ ನಾಯಗನ್’ ಶೋ
ಇದರ ಹೊರತಾಗಿ ಇತ್ತೀಚೆಗೆ ಬಿಡುಗಡೆ ಆದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಸಹ ಬೆಂಗಳೂರಿನಲ್ಲಿ ತಮಿಳು ಆವೃತ್ತಿಯ ಪ್ರದರ್ಶನ ಆಗುತ್ತಿದೆ. ಅರುಣಾ ಚಿತ್ರಮಂದಿರ, ಸ್ವಾಗತ್ನಲ್ಲಿ ಒಂದು ಶೋ, ವೈಟ್ಫೀಲ್ಡ್ ಪಿವಿಆರ್, ಅಲಸೂರು ಐನಾಕ್ಸ್, ಅಮೃತ್ ಡಿಜಿಟಲ್, ಬನ್ನೇರಘಟ್ಟ ಪಿವಿಆರ್ಗಳಲ್ಲಿ ‘ಸ್ಪೈಡರ್ ಮ್ಯಾನ್’ ಸಿನಿಮಾದ ತಮಿಳು ಆವೃತ್ತಿ ಪ್ರದರ್ಶನಗೊಳ್ಳುತ್ತಿದೆ.
ಕಾವೇರಿ ವಿವಾದ ಭುಗಿಲೆದ್ದಾಗೆಲ್ಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಬಿಗುವಿನ ವಾತಾವರಣ ನಿರ್ಮಾಣ ಆಗುತ್ತದೆ. ತಮಿಳುನಾಡಿನ ವಾಹನಗಳಿಗೆ ಕರ್ನಾಟಕದಲ್ಲಿ ಕಲ್ಲು ಬಿದ್ದರೆ, ಕರ್ನಾಟಕದ ವಾಹನಗಳಿಗೆ ತಮಿಳುನಾಡಿನಲ್ಲಿ ಕಲ್ಲು ಬೀಳುತ್ತವೆ. ತಮಿಳು ಸಿನಿಮಾಗಳಿಗೆ ನಿಷೇಧ ಹೇರುವುದು ಸಹ ಸಾಮಾನ್ಯ. ಈ ಬಾರಿಯೂ ಸಹ ತಮಿಳು ಸಿನಿಮಾಗಳಿಗೆ ಕರ್ನಾಟಕದಲ್ಲಿ ಅನಧಿಕೃತ ನಿಷೇಧ ಹೇರುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
