ಇತ್ತೀಚಿನ ದಿನಗಳಲ್ಲಿ 20ರಿಂದ 30 ವರ್ಷದ ಯುವಕರಲ್ಲಿ ಬೇಗ ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚುತ್ತಿದೆ. ಹಿಂದೆ ವಯಸ್ಸಾದ ಬಳಿಕ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಈಗ ಯುವಜನರಲ್ಲಿಯೇ ಸಾಮಾನ್ಯವಾಗಿದೆ. ಒತ್ತಡ, ಅಸಮತೋಲಿತ ಆಹಾರ, ವಿಟಮಿನ್ ಕೊರತೆ, ಮಾಲಿನ್ಯ ಹಾಗೂ ಜೀವನಶೈಲಿಯ ಬದಲಾವಣೆಗಳು ಇದರ ಪ್ರಮುಖ ಕಾರಣಗಳಾಗಿವೆ. ಹಾಗಾದರೆ ಒಮ್ಮೆ ಬಿಳಿಯಾದ ಕೂದಲು ಮತ್ತೆ ಸಹಜವಾಗಿ ಕಪ್ಪಾಗಬಹುದೇ, ಈ ಬಗ್ಗೆ ಚರ್ಮರೋಗ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.
ಅಕಾಲಿಕವಾಗಿ ಕೂದಲು ಬಿಳಿಯಾಗಲು ಕಾರಣವೇನು?
ಚರ್ಮರೋಗ ತಜ್ಞೆ ಡಾ. ಅರ್ಜು ಪಹ್ವಾ ಅವರ ಪ್ರಕಾರ, ಕೂದಲಿಗೆ ಅದರ ಸಹಜ ಬಣ್ಣವನ್ನು ನೀಡುವುದು ಮೆಲನಿನ್ (Melanin) ಎಂಬ ವರ್ಣದ್ರವ್ಯ. ಈ ಮೆಲನಿನ್ ಉತ್ಪಾದನೆ ಕಡಿಮೆಯಾದಾಗ ಅಥವಾ ನಿಂತಾಗ ಕೂದಲು ಬೂದು ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಇದಕ್ಕೆ ಪ್ರಮುಖ ಕಾರಣಗಳು:
- ಅನುವಂಶಿಕತೆ (Genetics)
- ವಿಟಮಿನ್ ಬಿ12 ಕೊರತೆ
- ವಿಟಮಿನ್ ಡಿ ಕೊರತೆ
- ಐರನ್ ಕೊರತೆ
- ಕಾಪರ್ ಮತ್ತು ಫೋಲೇಟ್ ಕೊರತೆ
- ದೀರ್ಘಕಾಲದ ಮಾನಸಿಕ ಒತ್ತಡ
- ಧೂಮಪಾನ
- ವಾಯು ಮಾಲಿನ್ಯ
- ಆಕ್ಸಿಡೇಟಿವ್ ಸ್ಟ್ರೆಸ್
ಆರೋಗ್ಯ ಸಮಸ್ಯೆಗಳಿಂದಲೂ ಕೂಡ ಕೂದಲು ಬೇಗ ಬಿಳಿಯಾಗಬಹುದು:
- ಥೈರಾಯ್ಡ್ ಸಮಸ್ಯೆಗಳು
- ವಿಟಿಲಿಗೋ
- ಅಲೋಪೇಶಿಯಾ ಏರಿಯಾಟಾ
- ಆಟೋಇಮ್ಯೂನ್ ಕಾಯಿಲೆಗಳು
- ದೀರ್ಘಕಾಲದ ಪೋಷಕಾಂಶಗಳ ಕೊರತೆ
ಆದ್ದರಿಂದ ಅಕಾಲಿಕವಾಗಿ ಕೂದಲು ಬಿಳಿಯಾಗಲು ಆರಂಭವಾದರೆ ಅದರ ಮೂಲ ಕಾರಣವನ್ನು ಪತ್ತೆಹಚ್ಚುವುದು ಮುಖ್ಯ.
ಇದನ್ನೂ ಓದಿ: ಉಗುರಿನ ಈ ಬಿಳಿ ಗುರುತು ನಿಮ್ಮ ಆರೋಗ್ಯದ ಬಗ್ಗೆ ಏನನ್ನು ಸೂಚಿಸುತ್ತದೆ?
ಬಿಳಿಯಾದ ಕೂದಲು ಮತ್ತೆ ಕಪ್ಪಾಗುತ್ತದೆಯೇ?
ತಜ್ಞರ ಪ್ರಕಾರ, ಇದಕ್ಕೆ ಒಂದೇ ಉತ್ತರ ಇರುವುದಿಲ್ಲ. ಪೋಷಕಾಂಶಗಳ ಕೊರತೆ ಅಥವಾ ಚಿಕಿತ್ಸೆ ಸಾಧ್ಯವಿರುವ ಆರೋಗ್ಯ ಸಮಸ್ಯೆಯಿಂದ ಕೂದಲು ಬಿಳಿಯಾಗಿದ್ದರೆ, ಸರಿಯಾದ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರದಿಂದ ಕೆಲವರಲ್ಲಿ ಹೊಸದಾಗಿ ಬೆಳೆಯುವ ಕೂದಲಿನಲ್ಲಿ ಮತ್ತೆ ವರ್ಣದ್ರವ್ಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ವಯಸ್ಸು ಅಥವಾ ಅನುವಂಶಿಕ ಕಾರಣದಿಂದ ಬಿಳಿಯಾದ ಕೂದಲು ಮತ್ತೆ ಸಂಪೂರ್ಣ ಕಪ್ಪಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ದೃಢಪಟ್ಟ ಚಿಕಿತ್ಸೆ ಇಲ್ಲ.
ಕೂದಲಿನ ಆರೋಗ್ಯ ಕಾಪಾಡಲು ಸೇವನೆ ಮಾಡಬೇಕಾದ ಆಹಾರಗಳು:
- ಮೊಟ್ಟೆ
- ಹಾಲು ಮತ್ತು ಹಾಲಿನ ಉತ್ಪನ್ನಗಳು
- ಹಸಿರು ಎಲೆ ತರಕಾರಿಗಳು
- ಬಾದಾಮಿ, ವಾಲ್ನಟ್
- ಎಳ್ಳು
- ಬೀನ್ಸ್ ಮತ್ತು ಬೇಳೆಕಾಳುಗಳು
- ಮೀನು
- ನೆಲ್ಲಿಕಾಯಿ
- ಕಿತ್ತಳೆ, ಸೀಬೆಹಣ್ಣು ಸೇರಿದಂತೆ ವಿಟಮಿನ್ ಸಿ ಇರುವ ಹಣ್ಣುಗಳು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
