ನವದೆಹಲಿ, ಆಗಸ್ಟ್ 5: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ (PM Narendra Modi Video Delete) ಸೆಲ್ಫಿ ವಿಡಿಯೋ ರಿಲೀಸ್ ಮಾಡಿದ್ದರು. ಆ ವಿಡಿಯೋವನ್ನು ಫೇಸ್‌ಬುಕ್‌ನಿಂದ ಕೆಲಕಾಲ ಡಿಲೀಟ್ ಮಾಡಲಾಗಿತ್ತು. ಈ ಘಟನೆ ದೇಶಾದ್ಯಂತ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಮೆಟಾ (Meta) ಸಂಸ್ಥೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಕ್ಷಮೆಯಾಚನೆಗೆ ಪಟ್ಟುಹಿಡಿದಿತ್ತು. ಇದೀಗ ಕೊನೆಗೂ ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಈ ಕುರಿತು ಕ್ಷಮೆಯಾಚಿಸಿದ್ದಾರೆ.
ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಾಲ ಲೈಂಗಿಕ ಶೋಷಣೆ ವಿಷಯ, ಡೀಪ್‌ಫೇಕ್ ವಿಷಯಗಳು ಮತ್ತು ಪ್ಲಾಟ್‌ಫಾರ್ಮ್ ಕಾರ್ಯಾಚರಣೆಯಲ್ಲಾದ ದೋಷಗಳ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕಠಿಣ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ. ತಮ್ಮ ತಪ್ಪಿಗೆ ಕ್ಷಮೆ ಕೋರಿದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದಿಂದ ಮೆಟಾ ಅಧಿಕಾರಿಗಳನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ
ಸಾಮಾಜಿಕ ಜಾಲತಾಣವು ನಿರ್ದಿಷ್ಟ ಬಳಕೆದಾರರಿಗೆ ಯಾವ ವಿಷಯ ತಲುಪಬೇಕು ಎಂಬುದನ್ನು ತಾನೇ ಆಯ್ಕೆ ಮಾಡುತ್ತಿದ್ದರೆ, ಅದು ಭಾರತದ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಮಧ್ಯವರ್ತಿ (Intermediary) ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿಷಯ ಪ್ರಸಾರವನ್ನು ನಿಯಂತ್ರಿಸುವ ಪ್ಲಾಟ್‌ಫಾರ್ಮ್‌ಗಳು ‘ಸೇಫ್ ಹಾರ್ಬರ್’ (ಸುರಕ್ಷಿತ ರಕ್ಷಣೆ) ಪಡೆಯಲು ಸಾಧ್ಯವಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.
Mark Zuckerberg sent his apologies for the CSAM (Child Sexual Abuse Material) content, deepfake content and errors in operating the platform.
It was made clear to them that they are not covered under Intermediary definition. They select who receives the content. Safe harbour… https://t.co/kfIcMNdclk pic.twitter.com/CrwfQrsN1V
— ANI (@ANI) August 5, 2026
ಮೆಟಾಗೆ ಸಚಿವ ಅಶ್ವಿನಿ ವೈಷ್ಣವ್ ಎಚ್ಚರಿಕೆ:
ಮೆಟಾದ ಜಾಗತಿಕ ವ್ಯವಹಾರಗಳ ಅಧಿಕಾರಿ ಜೋಯಲ್ ಕಾಪ್ಲನ್ ನೇತೃತ್ವದ ನಿಯೋಗದೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಇಂತಹ ಘಟನೆಗಳನ್ನು ಭಾರತದಲ್ಲಿ ಸಹಿಸುವುದಿಲ್ಲ ಎಂದು ಗಂಭೀರ ಎಚ್ಚರಿಕೆ ನೀಡಿದರು. “ಭಾರತ ಸರ್ಕಾರವು ತನ್ನ ದೇಶದ ಜನರನ್ನು ರಕ್ಷಿಸಲು ಬದ್ಧವಾಗಿದೆ. ಆ ಹಾದಿಯಲ್ಲಿ ಯಾವುದೂ ಅಡ್ಡ ಬರಲು ಸಾಧ್ಯವಿಲ್ಲ” ಎಂದು ಸಚಿವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಭಾರತೀಯ ಕಾನೂನುಗಳ ಉಲ್ಲಂಘನೆ ಮತ್ತು ಹಾನಿಕಾರಕ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಅವರು ಮೆಟಾ ತಂಡವನ್ನು ಪ್ರಶ್ನಿಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಪೋಸ್ಟ್ಗೆ ನಿರ್ಬಂಧ; ಅಲ್ಗಾರಿದಮ್ ತಾರತಮ್ಯದ ಬಗ್ಗೆ ಮೆಟಾ ತಂಡಕ್ಕೆ ಸರ್ಕಾರದಿಂದ ಸಮನ್ಸ್
“ನೀವು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅಕ್ರಮ ವಿಷಯಗಳಿಂದ ಹಣ ಗಳಿಸುತ್ತಿದ್ದೀರಿ. ಹೀಗಿರುವಾಗ ನೀವು ಭಾರತದ ಕಾನೂನು ರಕ್ಷಣೆ ಪಡೆಯಲು ಹೇಗೆ ಸಾಧ್ಯ? ಇಂತಹ ವಿಷಯಗಳನ್ನು ನಿಮ್ಮ ಜೇಬು ತುಂಬಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದಕ್ಕೆ ನಿಮ್ಮಂತಹ ಪ್ಲಾಟ್‌ಫಾರ್ಮ್‌ಗಳು ನಾಚಿಕೆಪಡಬೇಕು” ಎಂದು ಸಚಿವ ಅಶ್ವಿನಿ ವೈಷ್ಣವ್ ಮೆಟಾ ಅಧಿಕಾರಿಗಳನ್ನು ಟೀಕಿಸಿದ್ದರು ಎನ್ನಲಾಗಿದೆ.
Meta CEO Mark Zuckerberg apologized for the CSAM content, deepfake content, and errors in operating the platform. It was made clear to Meta that it is not covered under the definition of an intermediary, as it selects who receives content. Therefore, the safe harbour protection… pic.twitter.com/xhxRd1RsNC
— IANS (@ians_india) August 5, 2026
ಮೂರು ದಿನಗಳಲ್ಲಿ ಮೂರು ಸಭೆಗಳು:
ಕಳೆದ ಮೂರು ದಿನಗಳಲ್ಲಿ ಮೆಟಾ ಜೊತೆಗಿನ ಸರ್ಕಾರದ ಮಾತುಕತೆ ತೀವ್ರಗೊಂಡಿದೆ. ಆಗಸ್ಟ್ 3ರಂದು ಐಟಿ ತಂಡದೊಂದಿಗೆ, ಆಗಸ್ಟ್ 5ರಂದು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಅವರೊಂದಿಗೆ 45 ನಿಮಿಷಗಳ ಚರ್ಚೆ ನಡೆಸಿದ ನಂತರ, ಮೆಟಾ ಪ್ರತಿನಿಧಿಗಳು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದರು.
ಹಾಗೇ, ಪ್ರಧಾನಿ ನರೇಂದ್ರ ಮೋದಿ ಅವರ ಜುಲೈ 23ರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಿದ್ದಕ್ಕೆ ಮೆಟಾ ಸಿಇಒ 3 ದಿನಗಳಲ್ಲಿ ಕ್ಷಮೆಯಾಚಿಸಬೇಕು ಮತ್ತು ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ‘ಸೇಫ್ ಹಾರ್ಬರ್’ ರಕ್ಷಣೆಯನ್ನು ಹಿಂಪಡೆಯಲಾಗುವುದು ಎಂದು ಸಂಸದೀಯ ಸಮಿತಿಯು ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾರ್ಕ್ ಝುಕರ್‌ಬರ್ಗ್ ಕ್ಷಮೆ ಕೋರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:55 pm, Wed, 5 August 26
