ಕೆಪಿಸಿಯಲ್ಲಿ ನೌಕರರ ನೇಮಕಾತಿಯಲ್ಲಿ ಅಕ್ರಮ: 12 ಸಾವಿರ ಸಂಬಳದ ಕೆಲಸಕ್ಕೆ 35 ಸಾವಿರ ಲಂಚಕ್ಕೆ ಬೇಡಿಕೆ – Kannada News | KPC Recruitment Scam Alleged: 35,000 Bribe Demanded for a Job Paying 12,000 Salary

ಉಡುಪಿ, ಆಗಸ್ಟ್​​ 14: ಹೊಸಂಗಡಿಯ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್‌ (KPCL) ಸಂಸ್ಥೆಯಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿ ಹೆಸರಿನಲ್ಲಿ ಲಂಚಕ್ಕೆ (Bribe) ಬೇಡಿಕೆ ಇಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಿಂಗಳಿಗೆ 12 ಸಾವಿರ ರೂ. ವೇತನದ ಕೆಲಸಕ್ಕೆ 35 ಸಾವಿರ ರೂ. ಮುಂಗಡವಾಗಿ ನೀಡಬೇಕು ಎಂಬ ಆರೋಪ ಕೇಳಿಬಂದಿದೆ.

ಲಂಚಕ್ಕೆ ಬೇಡಿಕೆ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆ ಮತ್ತು ಗೂಗಲ್ ಪೇ ಮೂಲಕ ಹಣ ವರ್ಗಾವಣೆಯಾದ ಸ್ಕ್ರೀನ್‌ಶಾಟ್‌ಗಳು ಈ ಆರೋಪಕ್ಕೆ ಪೂರಕವಾಗಿವೆ. ಕೆಪಿಸಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವುದಾಗಿ ಮೂರನೇ ವ್ಯಕ್ತಿಯೊಬ್ಬರ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಟೆಂಡರ್ ಅವಧಿ ಕೇವಲ ಒಂಬತ್ತು ತಿಂಗಳಾಗಿದ್ದರೂ, ಬಡ ಯುವಕರಿಂದ ಸಾವಿರಾರು ರೂ ಪಡೆಯಲಾಗುತ್ತಿದೆ ಎಂಬ ದೂರು ಕೇಳಿಬಂದಿವೆ.

ಇದನ್ನೂ ಓದಿ: ಎರಟು ದಶಕ ಕಳೆದರೂ ಸಿಗದ ಪರಿಹಾರ: ಗದಗ ಡಿಸಿ ಕಾರನ್ನೇ ಕೊಂಡೊಯ್ದ ರೈತರು

ಹೊರಗುತ್ತಿಗೆ ಕೆಲಸದ ಟೆಂಡರ್ ಅವಧಿ ಕೇವಲ 9 ತಿಂಗಳು ಎನ್ನಲಾಗುತ್ತಿದ್ದು, ಇಷ್ಟು ಕಡಿಮೆ ಅವಧಿಯ ಉದ್ಯೋಗಕ್ಕಾಗಿ ಬಡ ಕುಟುಂಬಗಳ ಯುವಕರು ಸಾವಿರಾರು ರೂ ಹೊಂದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸ್ಥಳೀಯ ಯುವಕನೊಬ್ಬನಿಂದ ಈಗಾಗಲೇ 30 ಸಾವಿರ ರೂ ಪಡೆದು, ಇನ್ನೂ 5 ಸಾವಿರ ರೂ ನೀಡುವಂತೆ ಒತ್ತಾಯಿಸಲಾಗಿದೆ ಎನ್ನಲಾಗಿದೆ. ಬಾಕಿ ಹಣ ನೀಡದ ಹಿನ್ನೆಲೆ ಯುವಕನಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಯುವಕ ಮತ್ತು ಕೆಪಿಸಿ ಸಂಸ್ಥೆಗೆ ಸಂಬಂಧಿಸಿದ ಮೂರನೇ ವ್ಯಕ್ತಿಯ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಣದ ಬೇಡಿಕೆ ಕುರಿತ ಮಾತುಕತೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಉದ್ಯೋಗದ ಆಮಿಷ ತೋರಿಸಿ ಹಣ ಪಡೆಯುತ್ತಿದ್ದರೆ: ದಲಿತ ಹೋರಾಟಗಾರ ಆಕ್ರೋಶ

ಈ ಬೆಳವಣಿಗೆ ಕುರಿತು ದಲಿತ ಹೋರಾಟಗಾರ ಆನಂದ ಕಾರೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬಡ ಕುಟುಂಬಗಳ ಯುವಕರಿಗೆ ಉದ್ಯೋಗದ ಆಮಿಷ ತೋರಿಸಿ ಹಣ ಪಡೆಯುತ್ತಿದ್ದರೆ ಅದನ್ನು ತಕ್ಷಣ ನಿಲ್ಲಿಸಬೇಕು. ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಕೆಪಿಸಿ ಅಧಿಕಾರಿಗಳ ಪಾತ್ರ ಏನು?

ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಲು ತೆರಳಿದ ವೇಳೆ ಕೆಪಿಸಿ ಸಂಸ್ಥೆಯ ಭದ್ರತಾ ಸಿಬ್ಬಂದಿಯಿಂದ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಯುವಕರಿಂದ ಹಣ ಪಡೆಯಲಾಗುತ್ತಿದೆಯೇ, ಹಣ ಪಡೆದಿದ್ದರೆ ಯಾರ ಖಾತೆಗೆ ಹೋಗಿದೆ, ಮೂರನೇ ವ್ಯಕ್ತಿಯ ಪಾತ್ರವೇನು ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಕೆಪಿಸಿ ಅಧಿಕಾರಿಗಳ ಪಾತ್ರ ಏನು ಎಂಬ ಪ್ರಶ್ನೆಗಳಿಗೆ ಸಂಸ್ಥೆ ಸ್ಪಷ್ಟನೆ ನೀಡಬೇಕಾಗಿದೆ.

ಇದನ್ನೂ ಓದಿ: ಕರ್ನಾಟಕ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ವೇತನ ಹಿಂಬಾಕಿ ರಿಲೀಸ್

ಒಟ್ಟಾರೆಯಾಗಿ ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆ ಹಾಗೂ ಅಧಿಕೃತ ದಾಖಲೆಗಳು ಪ್ರಕರಣದ ಮುಂದಿನ ದಿಕ್ಕನ್ನು ನಿರ್ಧರಿಸಲಿವೆ. ಹೊರಗುತ್ತಿಗೆ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ನಿಯಮ ಪಾಲನೆಗೆ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *