ಬೆಂಗಳೂರು, (ಮೇ 07): ಮನ್ರೇಗಾ (MGNREGA) ಎನ್ನುವುದನ್ನು ವಿಬಿ ಜಿ ರಾಮ್ ಜೀ (VB-G RAM G) ಎಂದು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಮೊರೆ ಹೋಗಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದು (ಮೇ 07) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಚರ್ಚಿಸಿದ್ದು, ಮನ್ರೇಗಾ ಹೆಸರು ಬದಲಾವಣೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ. ಈ ಬಗ್ಗೆ ಕಾನೂನು ಸಚಿವ ಎಚ್ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
- ಮನ್ರೇಗಾ ಹೆಸರು ಬದಲಾವಣೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ
- ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
- ವಿಬಿ ಜಿ ರಾಮ್ ಜೀ ಎಂದು ಬದಲಿಸಿದ್ದ ಕೇಂದ್ರ ಸರ್ಕಾರ
ಇದನ್ನೂ ಓದಿ: G-RAM-G: ಜಿ ರಾಮ್ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ
ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್ಕೆ ಪಾಟೀಲ್, ಮನ್ರೇಗಾವನ್ನು ವಿಬಿ ಜಿ ರಾಮ್ ಜೀ ಎಂದು ಬದಲಿಸಿದ ಕೇಂದ್ರ ಸರ್ಕಾರ ನಡೆಯನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ಸಂಪುಟದಲ್ಲಿ ನಿರ್ಧರಿಸಿದ್ದೇವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ 15 ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಮನ್ರೇಗಾ ಸ್ಥಗಿತ ಮಾಡಿದ್ದರಿಂದ ಬಡವರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಮನ್ರೇಗಾ ಮರು ಸ್ಥಾಪನೆಗೆ ನಾವು ಚಳವಳಿ ಮಾಡಿದ್ದೆವು. ಮೇ ತಿಂಗಳಾದರೂ ವಿಬಿ ಜಿ ರಾಮ್ಜೀ ನೋಟಿಫೈ ಆಗಿಲ್ಲ. ಇದುವರೆಗೆ ವಿಬಿ ಜಿ ರಾಮ್ಜೀ ದೇಶದಲ್ಲಿ ಇನ್ನೂ ಬಂದಿಲ್ಲ. ಮನ್ರೇಗಾ ಬಾಕಿ ಕೆಲಸ ಮುಂದುವರಿಸಬಹುದೆಂದು ಆದೇಶಿಸಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿದರು.
ಈ ಬಾರಿ ಮಳೆ ಕೊರತೆಯಿಂದ ನೀರಿನ ಸಂಕಷ್ಟ ಅಂತಿದ್ದಾರೆ. ಆದರೂ ಬಡವರ ಕೆಲಸದ ಬಗ್ಗೆ ಕೇಂದ್ರ ಚಿಂತನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಣಯದ ಮೂಲಕ ಒತ್ತಡ ಹೇರಿದ್ದೇವೆ. ಮುಖ್ಯಮಂತ್ರಿ ಕೂಡ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.
ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸು ಮಂಡನೆ
ಸಂಪುಟ ಸಭೆಯಲ್ಲಿ ಆಯೋಗದ ಶಿಫಾರಸುಗಳ ಬಗ್ಗೆ ಚರ್ಚೆ ಆಗಿದ್ದು, ಆಯೋಗದ ವರದಿಯ ಅನುಷ್ಠಾನಕ್ಕೆ ಸಂಪುಟ ಉಪ ಸಮಿತಿ ರಚಿಸಲು ಸಂಪುಟದಲ್ಲಿ ನಿರ್ಧಾರವಾಗಿದೆ. ಈ ಸಂಪುಟ ಉಪ ಸಮಿತಿಯು, ಆಯೋಗದ ಶಿಫಾರಸು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ.
