ಮಲಯಾಳಂ ಚಿತ್ರರಂಗ (Malayalam Industry), ಪ್ರಸ್ತುತ ಭಾರತದ ಎಲ್ಲ ಚಿತ್ರರಂಗಗಳಿಗಿಂತಲೂ ಅತ್ಯಂತ ಗುಣಮಟ್ಟದ ಸಿನಿಮಾಗಳನ್ನು, ಕಂಟೆಂಟ್ ಹೊಂದಿರುವ ಸಿನಿಮಾಗಳನ್ನು ನೀಡುತ್ತಿದೆ. ಕಡಿಮೆ ಬಜೆಟ್ನ ಸಿನಿಮಾಗಳಾದರು ಕಂಟೆಂಟ್ ಮತ್ತು ಗುಣಮಟ್ಟದ ವಿಷಯದಲ್ಲಿ ಎಲ್ಲ ಚಿತ್ರರಂಗಗಳನ್ನು ಮಲಯಾಳಂ ಚಿತ್ರರಂಗ ಹಿಂದಿಕ್ಕಿದೆ. ಭಾರತೀಯ ಸಿನಿಮಾ ಪ್ರೇಮಿಗಳಲ್ಲಿ ‘ಮಲಯಾಳಂ ಸಿನಿಮಾ ಪ್ರೇಮಿಗಳು’ ಎಂಬ ಸಬ್ ಕ್ಯಾಟೆಗರಿ ಹುಟ್ಟಿಕೊಂಡಿದೆ. ಆ ಮಟ್ಟಿಗೆ ಮಲಯಾಳಂ ಸಿನಿಮಾಗಳು ಜನರನ್ನು ಸೆಳೆಯುತ್ತಿವೆ. ಇದೀಗ ಈ ಚಿತ್ರರಂಗದಿಂದ ಮತ್ತೊಂದು ಒಳ್ಳೆಯ ಸಿನಿಮಾ ತೆರೆಗೆ ಬಂದಿದೆ. ಅದುವೇ ‘ಬಾಲನ್: ದಿ ಬಾಯ್’.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ‘ಬಾಲನ್: ದಿ ಬಾಯ್’ ಕಳೆದ ವಾರವಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕಳೆದು ಹೋಗಿರುವ ತನ್ನ ತಾಯಿಯನ್ನು ಹುಡುಕುತ್ತಾ ಹೊರಡುವ ಯುವಕನಿಗೆ ಎದುರಾಗುವ ಸತ್ಯಗಳು, ತನ್ನ ಬಾಲ್ಯ, ಎದುರಿಸುವ ಕಷ್ಟಗಳು, ಸಮಾಜದ ನಿಕೃಷ್ಟತೆ ಇನ್ನೂ ಹಲವು ವಿಷಯಗಳ ಮೇಲೆ ‘ಬಾಲನ್: ದಿ ಬಾಯ್’ ಸಿನಿಮಾ ಬೆಳಕು ಚೆಲ್ಲುತ್ತದೆ. ಸಿನಿಮಾ ನೋಡಿದವರೆಲ್ಲ ಸಿನಿಮಾದ ಕತೆ, ನಿರೂಪಣೆ, ಚಿತ್ರೀಕರಣ ಮತ್ತು ಸಂಗೀತವನ್ನು ಕೊಂಡಾಡುತ್ತಿದ್ದಾರೆ.
‘ಮಂಜ್ಞುಮೆಲ್ ಬಾಯ್ಸ್’ ಅಂಥಹಾ ಬ್ಲಾಕ್ ಬಸ್ಟರ್, ಅವಾರ್ಡ್ ವಿನ್ನಿಂಗ್ ಸಿನಿಮಾ ನಿರ್ದೇಶನ ಮಾಡಿರುವ ಚಿದಂಬರಂ ಇದೀಗ ‘ಬಾಲನ್’ ಸಿನಿಮಾ ಅನ್ನೂ ನಿರ್ದೇಶಿಸಿದ್ದಾರೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಮರ್ಶೆಗಳು ತುಂಬಿ ಹೋಗಿದ್ದು, ಎಲ್ಲ ವಿಮರ್ಶೆಗಳು ಸಹ ಇದೊಂದು ಅದ್ಭುತ ಸಿನಿಮಾ ಎಂದು ಸಾರಿ-ಸಾರಿ ಹೇಳುತ್ತಿವೆ. ಸಿನಿಮಾ ಅನ್ನು ಹಲವಾರು ಸಿನಿಮಾ ಸೆಲೆಬ್ರಿಟಿಗಳು ಸಹ ವೀಕ್ಷಿಸಿದ್ದು, ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಿಚ್ಚ ಸುದೀಪ್?
ಕೆವಿಎನ್ ಪ್ರೊಡಕ್ಷನ್ಸ್ ನವರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾ ಜೂನ್ 19ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಐದು ದಿನದಲ್ಲಿ ಸಿನಿಮಾ 10 ಕೋಟಿ ಮಾತ್ರವೇ ಗಳಿಕೆ ಮಾಡಿದೆ. ಆದರೆ ನಿಧಾನಕ್ಕೆ, ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚು ಮಾಡಿಕೊಳ್ಳುತ್ತಾ ಸಾಗುತ್ತಿದೆ. ಯಾವುದೇ ಸ್ಟಾರ್ ಹೀರೋ ಇಲ್ಲದೆ, ಕೇವಲ ಬಾಲಕ, ಯುವಕ ಮತ್ತು ಒಬ್ಬ ತಾಯಿಯೇ ಪ್ರಧಾನ ಪಾತ್ರವಾಗಿರುವ ಈ ಸಿನಿಮಾ ಐದು ದಿನಕ್ಕೆ 10 ಕೋಟಿ ಗಳಿಕೆ ಮಾಡಿರುವುದು ಸಣ್ಣ ಸಾಧನೆಯಲ್ಲ. ಸಿನಿಮಾದ ಬಗ್ಗೆ ಬಾಯಿ ಪ್ರಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಿನಿಮಾ ಇನ್ನಷ್ಟು ಹೆಚ್ಚು ಗಳಿಕೆ ಮಾಡುವ ವಿಶ್ವಾಸ ಸಿನಿಮಾ ಪ್ರೇಮಿಗಳದ್ದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
