ಬೆಂಗಳೂರು, ಮೇ 07: ಪ್ರತಿಯೊಬ್ಬ ಭಾರತೀಯ ಮತದಾರನಿಗೆ ವೋಟರ್ ಐಡಿ (Voter ID) ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿದೆ. ಅದರ ಮಾಹಿತಿಗಳನ್ನು ಗುರುತು-ಪರಿಚಯವಿಲ್ಲದವರ ಬಳಿ ಹಂಚಿಕೊಳ್ಳಬಾರದು ಎಂಬುದೂ ಎಲ್ಲರಿಗೂ ತಿಳಿದಿರುವ ವಿಷಯ. ಯಾಕೆಂದರೆ ದುಷ್ಕರ್ಮಿಗಳು ನಮ್ಮ ಐಡಿ ಬಳಸಿ ಯಾವುದೆ ಕ್ರಿಮಿನಲ್ ಚಟುವಟಿಕೆ ಎಸಗಿದರೆ ನಮಗೆ ಕಂಟಕ ಎದುರಾಗಬಹುದು. ಇದಕ್ಕೆ ಉದಾಹರಣೆಯೆಂಬಂತೆ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬರ ವೋಟರ್ ಐಡಿ ಬಳಸಿ ಅಕ್ರಮವಾಗಿ ಸಿಮ್ ಕಾರ್ಡ್ ಖರೀದಿಸಿ,ಅದನ್ನು ಕೊಲೆ ಕೃತ್ಯಕ್ಕೆ ಬಳಸಿಕೊಂಡ ಪ್ರಕರಣವೊಂದು ವರದಿಯಾಗಿದೆ.
ಮುಖ್ಯಾಂಶಗಳು
- ಹಳೆಯ ವೋಟರ್ ಐಡಿ ಫೋಟೋ ಬದಲಿಸಿ ಅಕ್ರಮವಾಗಿ ಸಿಮ್ ಕಾರ್ಡ್ ಖರೀದಿ.
- ಕೊಲೆ ಕೇಸಿನಲ್ಲಿ ಅಮಾಯಕನಿಗೆ ನೋಟಿಸ್ ನೀಡಿದ ಮರತಹಳ್ಳಿ ಉಪವಿಭಾಗದ ಪೊಲೀಸರು.
- ಗುರುತಿನ ಚೀಟಿ ದುರುಪಯೋಗಪಡಿಸಿದ ಆರೋಪಿಗಳ ವಿರುದ್ಧ ಮತ್ತೊಂದು ಕ್ರಿಮಿನಲ್ ಕೇಸ್ ದಾಖಲು.
ನಡೆದಿದ್ದೇನು?
ಹೊಸಕೋಟೆ ತಾಲೂಕಿನ ಲಕ್ಕೊಂಡನಹಳ್ಳಿಯ ನಿವಾಸಿ ಎಲ್.ಎಸ್. ಪುನೀತ್ (36) ಎಂಬುವವರು ತಮ್ಮದೇನೂ ತಪ್ಪಿಲ್ಲದಿದ್ದರೂ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದಾರೆ. 2024ರಲ್ಲಿ ನಡೆದ ನಟೋರಿಯಸ್ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಉಪವಿಭಾಗದ ಪೊಲೀಸರು ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಪುನೀತ್‌ಗೆ ನೋಟಿಸ್ ನೀಡಿದ್ದರು.
ಈ ಕೊಲೆ ಪ್ರಕರಣವು ತಮಿಳುನಾಡಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಕರಣದ ಆರೋಪಿಗಳ ಮೊಬೈಲ್ ಕರೆಗಳ ವಿವರ (CDR) ಮತ್ತು ಸಿಮ್ ಕಾರ್ಡ್ ನೋಂದಣಿ ವಿಳಾಸವನ್ನು ಪರಿಶೀಲಿಸಿದಾಗ, ಅದು ಬೆಂಗಳೂರಿನ ವರ್ತೂರು ವಿಳಾಸಕ್ಕೆ ಲಿಂಕ್ ಆಗಿತ್ತು. ಈ ಆಧಾರದ ಮೇಲೆ ಪೊಲೀಸರು ಪುನೀತ್ ಮನೆಗೆ ತಲುಪಿದ್ದರು.
ವೋಟರ್ ಐಡಿ ದುರಪಯೋಗ!
2024ರ ಸೆಪ್ಟೆಂಬರ್ 18ರಂದು ವರ್ತೂರಿನ ಸುಲಿಕುಂಟೆ ಕಾಲೋನಿಯ ಎನ್. ರೇವಂತ್ ಕುಮಾರ್ (23) ಎಂಬುವವರನ್ನು ಒಂಬತ್ತು ಮಂದಿಯ ಗ್ಯಾಂಗ್ ಅಪಹರಿಸಿ ಕೊಲೆ ಮಾಡಿತ್ತು. ಈ ಕೊಲೆಗಾರರಲ್ಲಿ ಒಬ್ಬ ಮುತಾನಲ್ಲೂರು ಕ್ರಾಸ್ ಬಳಿಯ ಅಂಗಡಿಯೊಂದರಲ್ಲಿ ಪುನೀತ್ ಅವರ ಮತದಾರರ ಗುರುತಿನ ಚೀಟಿ (Voter ID) ಬಳಸಿ ಸಿಮ್ ಕಾರ್ಡ್ ಖರೀದಿಸಿದ್ದನು.
ಮೇ 2, 2026ರಂದು ಸ್ಟೇಶನ್ಗೆ ಹಾಜರಾದ ಪುನೀತ್, ಪೊಲೀಸರು ತೋರಿಸಿದ ದಾಖಲೆಗಳನ್ನು ಗಮನಿಸಿ, ಆ ಮತದಾರರ ಗುರುತಿನ ಚೀಟಿ 2009ರಲ್ಲಿ ನಾನು ಪಡೆದಿದ್ದೆ. ಆದರೆ ಅದರಲ್ಲಿರುವ ಫೋಟೋ ಮಾತ್ರ ನನ್ನದಲ್ಲಎಂದು ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಪುನೀತ್ ಅವರ ದಾಖಲೆಗೆ ಬೇರೊಬ್ಬರ ಫೋಟೋ ಅಂಟಿಸಿ ಫೋರ್ಜರಿ ಮಾಡಿರುವುದು ದೃಢಪಟ್ಟಿದೆ.
ಇದನ್ನೂ ಓದಿ ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ
ತಮ್ಮ ವೈಯಕ್ತಿಕ ದಾಖಲೆ ದುರುಪಯೋಗವಾಗಿರುವುದನ್ನು ಕಂಡು ಪುನೀತ್ ಅವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಈಗ ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಪರ್ಸನೇಶನ್ (Personation) ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ರೇವಂತ್ ಕೊಲೆ ಆರೋಪಿಗಳಾದ ಒಂಭತ್ತು ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
