ಸೋಲಿನ ನಡುವೆ ಹೊಸ ಚರಿತ್ರೆ ಬರೆದ ಕೂಪರ್ ಕೊನೊಲಿ! – Kannada News | Cooper Connolly Creates New History in IPL

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಸೋಲಿನ ನಡುವೆ. ಅಂದರೆ ಐಪಿಎಲ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ವಿದೇಶಿ ಬ್ಯಾಟರ್ ಎಂಬ ದಾಖಲೆ ಪಂಜಾಬ್ ಕಿಂಗ್ಸ್​ ತಂಡದ ಯುವ ದಾಂಡಿಗ ಕೂಪರ್ ಕೊನೊಲಿ (Cooper Connolly) ಪಾಲಾಗಿದೆ. (PC: IPL)

ಹೈದರಾಬಾದ್​​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 49ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ  ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 235 ರನ್​​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಕೂಪರ್ ಕೊನೊಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. (PC: IPL)

ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೂಪರ್ ಕೊನೊಲಿ ಎಸ್​ಆರ್​​​ಹೆಚ್​ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ್ದರು. ಈ ಮೂಲಕ 57 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಸೆಂಚುರಿಯೊಂದಿಗೆ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ವಿದೇಶಿ ಆಟಗಾರ ಎಂಬ ದಾಖಲೆ ಕೊನೊಲಿ ಪಾಲಾಯಿತು. (PC: IPL)

ಇದಕ್ಕೂ ಮುನ್ನ ಈ ದಾಖಲೆ ಕ್ವಿಂಟನ್ ಡಿಕಾಕ್ ಹೆಸರಿನಲ್ಲಿತ್ತು. 2016 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್​) ಪರ ಕಣಕ್ಕಿಳಿದಿದ್ದ ಡಿಕಾಕ್ ಆರ್​ಸಿಬಿ ವಿರುದ್ಧ ಶತಕ ಸಿಡಿಸಿದ್ದರು. ಈ ವೇಳೆ ಅವರ ವಯಸ್ಸು 23 ವರ್ಷ, 122 ದಿನಗಳು. ಈ ಮೂಲಕ ಐಪಿಎಲ್​​ನಲ್ಲಿ ಸೆಂಚುರಿ ಬಾರಿಸಿದ ಅತೀ ಕಿರಿಯ ವಿದೇಶಿಗ ಎನಿಸಿಕೊಂಡಿದ್ದರು. (PC: IPL)

ಇದೀಗ 10 ವರ್ಷಗಳ ಬಳಿಕ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಆಸ್ಟ್ರೇಲಿಯಾ ದಾಂಡಿಗ ಯಶಸ್ವಿಯಾಗಿದ್ದಾನೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ ಸೆಂಚುರಿ ಪೂರೈಸಿ 22 ವರ್ಷದ ಕೂಪರ್ ಕೊನೊಲಿ ಐಪಿಎಲ್​ನಲ್ಲಿ ಶತಕ ಸಿಡಿಸಿದ ಅತೀ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: IPL)

ಈ ದಾಖಲೆಯ ಹೊರತಾಗಿಯೂ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೋಲನುಭವಿಸಿದೆ. ಎಸ್​ಆರ್​ಹೆಚ್ ನೀಡಿದ 236 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಕೂಪರ್ ಕೊನೊಲಿ 59 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 107 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್​​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್​ಗಳಲ್ಲಿ 202 ರನ್​ಗಳಿಸಿ ಪಂಜಾಬ್ ಕಿಂಗ್ಸ್ 33 ರನ್​​ಗಳಿಂದ ಸೋಲೊಪ್ಪಿಕೊಂಡಿದೆ. (PC: IPL)

Published On – 8:52 am, Thu, 7 May 26

Source link

Leave a Reply

Your email address will not be published. Required fields are marked *