ಬೆಂಗಳೂರು, ಏ.28: ಕರ್ನಾಟಕದ ಐಕಾನಿಕ್ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆ.ಎಸ್.ಡಿ.ಎಲ್) ಇತ್ತೀಚೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಮೈಸೂರು ರಾಜರ ಕಾಲದಲ್ಲಿ ಆರಂಭವಾದ ಈ ಸಂಸ್ಥೆ ಇಂದು ಹಲವು ಉದ್ಯಮಗಳಲ್ಲಿ ಮೇಲ್ಪಂತಿಯಾಗಿದೆ. ಪ್ರಸ್ತುತ ಕೆ.ಎಸ್.ಡಿ.ಎಲ್‌ನ ವಾರ್ಷಿಕ ವಹಿವಾಟು 2 ಸಾವಿರ ಕೋಟಿ ರೂಪಾಯಿ ತಲುಪಿದೆ. ರಾಜ್ಯವಾರು ಮಾರಾಟದ ಅಂಕಿಅಂಶಗಳನ್ನು ನೀಡಿದ ಅವರು, ಕರ್ನಾಟಕ ಮತ್ತು ಗೋವಾದಲ್ಲಿ ಶೇ. 14 ರಷ್ಟು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಶೇ. 45 ರಷ್ಟು, ಮತ್ತು ದೆಹಲಿಯಲ್ಲಿ ಶೇ. 6 ರಷ್ಟು ಮಾರಾಟವಿದೆ ಎಂದು ಹೇಳಿದರು. ಈ ಹಿಂದೆ ಇ-ಕಾಮರ್ಸ್‌ನಲ್ಲಿ ಸೊನ್ನೆ ಮಟ್ಟದಲ್ಲಿದ್ದ ಕೆ.ಎಸ್.ಡಿ.ಎಲ್ ಈಗ 500 ಕೋಟಿ ರೂಪಾಯಿ ವಹಿವಾಟು ತಲುಪಿದೆ. ಡೀಲರ್ ನೆಟ್‌ವರ್ಕ್ ಅನ್ನು 471 ರಿಂದ 1000ಕ್ಕೂ ಹೆಚ್ಚು ಮಾಡುವ ಮೂಲಕ ವಿಸ್ತರಿಸಲಾಗಿದೆ. ತಿಂಗಳಿಗೆ 20-30 ಕೋಟಿ ರೂಪಾಯಿ ವ್ಯವಹಾರ ನಡೆಸುವ ಈ ಸಂಸ್ಥೆಯ ಯಶಸ್ಸಿಗೆ ಕಾರ್ಮಿಕರು, ಸಿಬ್ಬಂದಿ ಮತ್ತು ಅಧ್ಯಕ್ಷರಾದ ಸಿ.ಎಸ್. ನಾಡಗೌಡರ ಕೊಡುಗೆ ಅಪಾರ ಎಂದು ಪಾಟೀಲ್ ಶ್ಲಾಘಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
