ಧಾರವಾಡ, ಏಪ್ರಿಲ್ 28: ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಗಿರಿನಗರದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ನಿವಾಸಿ ಆದಿತ್ಯ ಮ್ಯಾಗೇರಿ(20) ನೇಣಿಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಗಿರಿನಗರ ಬಡಾವಣೆಯಲ್ಲಿ ರೂಮ್ ಮಾಡಿಕೊಂಡಿದ್ದ ವಿದ್ಯಾರ್ಥಿ ಆದಿತ್ಯಗೆ 2 ದಿನಗಳಿಂದ ಪೊಲೀಸರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಗಾಂಜಾ ಸೇವನೆ ಆರೋಪದಲ್ಲಿ ಆದಿತ್ಯ ಸೇರಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ನೆಗೆಟಿವ್ ವರದಿ ಬಂದಿದ್ದರಿಂದ ಆದಿತ್ಯನನ್ನು ಬಿಟ್ಟು ಕಳುಹಿಸಲಾಗಿತ್ತು. ನಂತರ ಹಣ ನೀಡುವಂತೆ ಪೊಲೀಸರು ಆದಿತ್ಯನಿಗೆ ಕಾಡುತ್ತಿದ್ದ ಆರೋಪವನ್ನು ಮೃತ ವಿದ್ಯಾರ್ಥಿ ಆದಿತ್ಯ ತಾಯಿ ಕವಿತಾ ಮಾಡಿದ್ದಾರೆ. ಪೊಲೀಸರು ಹಣ ಕೇಳಿದ್ದರಿಂದ ಆತಂಕಗೊಂಡಿದ್ದ ವಿದ್ಯಾರ್ಥಿ ಆದಿತ್ಯ ನಿನ್ನೆ ತಾಯಿಯ ಬಳಿ 2 ಸಾವಿರ ಹಣ ಕೇಳಿದ್ದ. ಆದರೆ ಆಕೆ ಹಣ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಆದಿತ್ಯ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
