ಗುಟ್ಕಾ, ಪಾನ್ ಮಸಾಲಾದಲ್ಲಿ ಡ್ರಗ್ಸ್ ಪತ್ತೆಯಾದ್ರೆ ಸಂಪೂರ್ಣ ಬ್ಯಾನ್: ಸಿಎಂ ಡಿಕೆ ಶಿವಕುಮಾರ್ ಕಠಿಣ ಎಚ್ಚರಿಕೆ – Kannada News | CM DK Shivakumar Warns: Says Karnataka Will Ban Pan Masala and Gutka if Narcotics, Drugs Found In Products

ಬೆಂಗಳೂರು, ಜೂನ್ 29: ಗುಟ್ಕಾ ಮತ್ತು ಪಾನ್ ಮಸಾಲಾದಂಥ ತಂಬಾಕು ಉತ್ಪನ್ನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾದಕ ದ್ರವ್ಯಗಳು ಇರುವುದು ಪತ್ತೆಯಾದರೂ ಸಹ ರಾಜ್ಯದಲ್ಲಿ ಅವುಗಳನ್ನು ತಕ್ಷಣವೇ ನಿಷೇಧಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ‘ನಶಾ ಮುಕ್ತ್ ಭಾರತ್ (ಮಾದಕವಸ್ತು ಮುಕ್ತ ಭಾರತ)’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಕರಿಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಕಂದಾಯ ನಷ್ಟವಾದ್ರೂ ಪರವಾಗಿಲ್ಲ, ಆರೋಗ್ಯ ಮುಖ್ಯ: ಡಿಕೆಶಿ

ಕೆಲವರು ಪಾನ್ ಮಸಾಲಾ ಹಾಗೂ ಗುಟ್ಕಾ ಸೇವಿಸಿ ಕಿಕ್ ಅಥವಾ ಅಮಲು ಪಡೆದುಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ‘ನಾನು ಎಲ್ಲಾ ತಯಾರಕರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಈ ಉತ್ಪನ್ನಗಳ ನಿಷೇಧದಿಂದ ಸರ್ಕಾರಕ್ಕೆ ಸುಮಾರು 100 ಕೋಟಿ ರೂಪಾಯಿಗಳಷ್ಟು ಕಂದಾಯ ನಷ್ಟವಾಗಬಹುದು. ಆದರೆ, ಜನರ ಜೀವ ಹಾಗೂ ಯುವ ಪೀಳಿಗೆಯ ಭವಿಷ್ಯದ ಮುಂದೆ ನಮಗೆ ಹಣ ಮುಖ್ಯವಲ್ಲ. ನಿಮ್ಮ ಉತ್ಪನ್ನಗಳಲ್ಲಿ ಸಣ್ಣ ಪ್ರಮಾಣದ ಡ್ರಗ್ಸ್ ಮಿಶ್ರಣ ಮಾಡಿರುವುದು ಕಂಡುಬಂದರೂ ಸಹ ಇಡೀ ಕರ್ನಾಟಕದಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಲು ನಾನು ಹಿಂಜರಿಯುವುದಿಲ್ಲ. ತಯಾರಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗಣ್ಯರ ಉಪಸ್ಥಿತಿ: ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಮಾದಕವಸ್ತುಗಳ ಚಟವು ಕುಟುಂಬಗಳು, ಸಮುದಾಯಗಳು ಹಾಗೂ ದೇಶದ ಭವಿಷ್ಯಕ್ಕೆ ದೊಡ್ಡ ಆತಂಕ ತಂದೊಡ್ಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬಲವಾದ ಇಚ್ಛಾಶಕ್ತಿಯಿಂದ ಮಾತ್ರ ಇಂತಹ ಪಿಡುಗನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ

ಇದೇ ಸಂದರ್ಭದಲ್ಲಿ ಆರ್ ಜಿ ಯುಹೆಚ್ ಎಸ್ ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳ 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ‘ನಶಾ ಮುಕ್ತ್ ಭಾರತ್’ ನಿರ್ಮಾಣದ ರಾಯಭಾರಿಗಳಾಗಿ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:44 am, Mon, 29 June 26

Source link

Leave a Reply

Your email address will not be published. Required fields are marked *