ಅಯೋಧ್ಯಾ, ಜೂ.29: ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಭಕ್ತರು ಸಮರ್ಪಿಸಿದ ಕೋಟ್ಯಂತರ ರೂಪಾಯಿ ಕಾಣಿಕೆ ಹಣದ ಕಳ್ಳತನ ಪ್ರಕರಣದ ತನಿಖೆಯಲ್ಲಿ ಈಗ ದಿನಕ್ಕೊಂದು ಸ್ಫೋಟಕ ಸತ್ಯಗಳು ಬಿಚ್ಚಿಕೊಳ್ಳುತ್ತಿವೆ. ಸುಮಾರು ಮೂರು ತಿಂಗಳ ಹಿಂದೆಯೇ ಕಾಣಿಕೆ ಹಣ ದುರುಪಯೋಗವಾಗುತ್ತಿರುವ ಶಂಕೆ ವ್ಯಕ್ತಪಡಿಸಿ, ಹಣ ಎಣಿಕೆ ಮಾಡುವ ಸಿಬ್ಬಂದಿಯನ್ನು ಬದಲಾಯಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಿಫಾರಸು ಮಾಡಿತ್ತು. ಆದರೆ, ಟ್ರಸ್ಟ್‌ನ ಪ್ರಭಾವಿ ಪದಾಧಿಕಾರಿಗಳ ಹಸ್ತಕ್ಷೇಪದಿಂದಾಗಿ ಬ್ಯಾಂಕ್ ಅಧಿಕಾರಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿತ್ತು ಎಂಬ ಭೀಕರ ಸತ್ಯ ಈಗ ಬೆಳಕಿಗೆ ಬಂದಿದೆ.
ರಾಮಮಂದಿರದ ಕಾಣಿಕೆ ಎಣಿಕೆ ಪ್ರಕ್ರಿಯೆಗಾಗಿ ಎಸ್‌ಬಿಐ ಬ್ಯಾಂಕ್ ಒಂದು ಔಟ್‌ಸೋರ್ಸಿಂಗ್ ಕಂಪನಿಯ ಮೂಲಕ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ರಮಾಶಂಕರ್ ಮಿಶ್ರಾ, ಅವನೀಶ್ ಮತ್ತು ಕರುಣೇಶ್ ಶುಕ್ಲಾ ಸೇರಿದಂತೆ ಹಲವರನ್ನು ನೇಮಕ ಮಾಡಿತ್ತು. ಇವರಿಗೆ ಬ್ಯಾಂಕ್ ಸಂಬಳ ನೀಡುತ್ತಿತ್ತಾದರೂ, ಈ ಇಡೀ ಸಿಬ್ಬಂದಿ ವರ್ಗವು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಡಾ. ಅನಿಲ್ ಮಿಶ್ರಾ ಅವರ ಆಪ್ತರು ಹಾಗೂ ಸಂಬಂಧಿಕರಾಗಿದ್ದರು.
ಮೂರು ತಿಂಗಳ ಹಿಂದೆ ಬ್ಯಾಂಕ್ ಇವರನ್ನು ತೆಗೆದುಹಾಕಲು ಮುಂದಾದಾಗ, ಈ ಇಬ್ಬರು ಪದಾಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಿ ಸಿಬ್ಬಂದಿಯ ರಕ್ಷಣೆಗೆ ನಿಂತಿದ್ದರು. ಪರಿಣಾಮವಾಗಿ ಯಾರಿಗೂ ತೊಂದರೆಯಾಗದೆ ಕಾಣಿಕೆ ಹಣದ ಲೂಟಿ ಅವಿರತವಾಗಿ ಸಾಗಿತ್ತು. ಪ್ರಸ್ತುತ ಪೊಲೀಸರು ಟಿನ್ನು ಯಾದವ್ ಸೇರಿದಂತೆ ಒಟ್ಟು 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾಣಿಕೆ ಕಳ್ಳತನ ಪ್ರಕರಣ ಕೇವಲ ಔಟ್‌ಸೋರ್ಸಿಂಗ್ ಸಿಬ್ಬಂದಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಎಣಿಕೆಯ ಮೇಲ್ವಿಚಾರಣೆ ನಡೆಸಬೇಕಿದ್ದ ಇಬ್ಬರು ಬ್ಯಾಂಕ್ ಉದ್ಯೋಗಿಗಳೂ ಈ ಲೂಟಿಯಲ್ಲಿ ನೇರವಾಗಿ ಶಾಮೀಲಾಗಿದ್ದರು. ಇವರ ಸಂಪೂರ್ಣ ಸಮ್ಮತಿಯೊಂದಿಗೇ ಭಕ್ತರ ಹಣವನ್ನು ದೋಚಲಾಗುತ್ತಿತ್ತು ಎಂಬುದಕ್ಕೆ ವಿಶೇಷ ತನಿಖಾ ತಂಡಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಶೀಘ್ರದಲ್ಲೇ ಈ ಇಬ್ಬರು ಬ್ಯಾಂಕ್ ಸಿಬ್ಬಂದಿಯನ್ನೂ ಪೊಲೀಸರು ಬಂಧಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಮಜಾ ಮಾಡಲು ಹೋಗಿ ಹೆಣವಾಗಿ ಮರಳಿದ ಪ್ರವಾಸಿಗ; 10 ಅಡಿ ಎತ್ತರದಿಂದ ಸ್ವಿಮ್ಮಿಂಗ್ ಪೂಲ್‌ಗೆ ಜಂಪ್ ಮಾಡಿದ ಯುವಕ ಸ್ಥಳದಲ್ಲೇ ಸಾವು
ಮತ್ತೊಂದೆಡೆ, ಪ್ರಕರಣದ ಗಂಭೀರತೆ ಅರಿತು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಈ ಬೆಳವಣಿಗೆಯ ನಡುವೆ ಜ್ಯೋತಿರ್ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಟ್ರಸ್ಟ್ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದಾರೆ. “ರಾಮಮಂದಿರದ ಕಾಣಿಕೆ ಹಣದ ಏರುಪೇರು ಆಗಲು ಮುಖ್ಯವಾಗಿ ಟ್ರಸ್ಟ್‌ನ ಕೋಷಾಧಿಕಾರಿ ಗೋವಿಂದ ದೇವ್ ಗಿರಿ ಅವರೇ ಮೊದಲ ಜವಾಬ್ದಾರರು. ಅದರ ನಂತರ ಅಲ್ಲಿನ ಎಲ್ಲಾ ಕೆಲಸಗಳಲ್ಲಿ ಸಕ್ರಿಯರಾಗಿದ್ದ ಅನಿಲ್ ಮಿಶ್ರಾ ಅವರ ಹೊಣೆಗಾರಿಕೆ ಬರುತ್ತದೆ. ಈ ಲೂಟಿಯಲ್ಲಿ ಚಂಪತ್ ರಾಯ್ ಅವರ ಜವಾಬ್ದಾರಿ ಮೂರನೇ ನಂಬರ್‌ನಲ್ಲಿದೆ. ಹೀಗಿದ್ದರೂ ನೀವು ಕೇವಲ ಚಂಪತ್ ರಾಯ್ ಅವರನ್ನು ಮೊದಲ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಯಾವ ನ್ಯಾಯ?” ಎಂದು ಪ್ರಶ್ನಿಸುವ ಮೂಲಕ ತನಿಖೆಯ ದಿಕ್ಕಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಈ ಆರ್ಥಿಕ ಹಗರಣದ ತನಿಖೆಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಹಲವು ಪ್ರಭಾವಿಗಳ ಬಂಧನವಾಗುವ ಮುನ್ಸೂಚನೆ ಸಿಕ್ಕಿದೆ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
